ಮೈಸೂರು: ಬಿಜೆಪಿ ತನ್ನ ಎಲ್ಲ ವೋಟನ್ನು ಜೆಡಿಎಸ್‍ಗೆ ಹಸ್ತಾಂತರ ಮಾಡಿ ಮಂಗನ ಥರ ಆಯಿತು. ಇದರಿಂದಾಗಿ ಜೆಡಿಎಸ್‍ಗೆ ಅದೃಷ್ಟ ಬಂತು ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನಗೆ ಈ ಚುನಾವಣೆಯಿಂದ ಆಘಾತವಾಯಿತು. ಸರ್ಕಾರ ಮತ್ತೆ ಬರುವ ಅವಕಾಶವಿದ್ದರೂ ಸರ್ಕಾರ ಬಂದಿಲ್ಲ ಅನ್ನೋ ನೋವು ಇದೆ. ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಊಹೆಗೆ ನಿಲುಕದ ಶಾಕ್ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಸೋಲಿಗೆ ಜೆಡಿಎಸ್ ಗೆಲುವು ಕಾರಣವಲ್ಲ. ಬದಲಿಗೆ ಬಿಜೆಪಿ ತಾನು ಗೆಲ್ಲಲು ಆಗದ ಜಾಗದಲ್ಲಿ ತನ್ನ ವೋಟುಗಳನ್ನ ಜೆಡಿಎಸ್‍ಗೆ ವರ್ಗಾವಣೆ ಮಾಡಿದ್ದೆ ಕಾರಣವಾಗಿದೆ. ಕಾಂಗ್ರೆಸ್ಸನ ಕಳೆದುಕೊಂಡಿದ್ದರಿಂದ ರಾಜ್ಯಕ್ಕೆ ನಷ್ಟವಾಯಿತು ಎಂದರು. ಇದನ್ನು ಓದಿ: ಚುನಾವಣೆಯಲ್ಲಿ ನಾವು ಸೋತಿದ್ದು ಹೇಗೆ: ಕೆಪಿಸಿಸಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಆತ್ಮಾವಲೋಕನ
ಇದೇ ವೇಳೆ ಬಿಜೆಪಿಗೆ ಸೇರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಎಂದಿಗೂ ಪಕ್ಷಾಂತರಿ ಅಲ್ಲ. ನಾನು ಒಂದು ಸಿದ್ಧಾಂತ ನೀತಿಯನ್ನು ಇಟ್ಟುಕೊಂಡು 35 ವರ್ಷದಿಂದ ಸಾರ್ವಜನಿಕ ಜೀವನದಲ್ಲಿ ಇದ್ದೇನೆ. ಕಾಂಗ್ರೆಸ್ಸಿನಲ್ಲಿ ಇದ್ದೇನೆ. ಕಾಂಗ್ರೆಸ್ಸಿನಲ್ಲಿಯೇ ಕೊನೆಯಾಗುತ್ತೇನೆ. ಸಿದ್ದರಾಮಯ್ಯನವರೇ ನಮ್ಮ ನಾಯಕರು. ನಾನು ಬಿಜೆಪಿ ಸೇರುತ್ತೇನೆ ಎಂದು ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದಿರುವ ಕೆಲವರು ಪಿತೂರಿ ಮಾಡುತ್ತಿದ್ದಾರೆ ಎಂದು ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರಕ್ಕೆ ಇನ್ನು ಎರಡು ತಿಂಗಳು ತುಂಬಿಲ್ಲ. ಅವರ ಆಡಳಿತ ಕಾರ್ಯನಿರ್ವಹಣೆಯನ್ನು ನೋಡಲು ಆರು ತಿಂಗಳು ಸಮಯ ಬೇಕು. ಎರಡು ಪಕ್ಷಗಳ ಪ್ರಣಾಳಿಕೆ ಇದೆ. ಇದನ್ನು ಸರಿದೂಗಿಸಿಕೊಂಡು ನಡೆಸಿಕೊಂಡು ಹೋದರೆ 5 ವರ್ಷ ಪೂರೈಸುತ್ತದೆ. ಸಮ್ಮಿಶ್ರ ಸರ್ಕಾರ 5 ಪೂರೈಸಬೇಕು ಎಂದು ನಮ್ಮ ಆಶಯವಾಗಿದೆ. ಬಜೆಟನ್ನು ಮುಖ್ಯಮಂತ್ರಿಯಾಗಿ ಮಂಡಿಸಿದ್ದಾರೆ. ಹಿಂದಿನ ಸರ್ಕಾರದ ಬಜೆಟನ್ನೇ ಮುಂದುವರಿಸಿದ್ದಾರೆ. ಸದ್ಯಕ್ಕೆ ಪಕ್ಷದಲ್ಲಿ ಇದ್ದು ಕಾರ್ಯನಿರ್ವಹಿಸುತ್ತೇನೆ ಎಂದು ಮಹದೇವಪ್ಪ ತಿಳಿಸಿದರು.