ಲಂಚ ಪಡೆಯುತ್ತಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಲೋಕಾಯುಕ್ತ ಬಲೆಗೆ

Public TV
1 Min Read

ಹಾವೇರಿ: 1.20 ಲಕ್ಷ ರೂ. ಲಂಚ ಪಡೆಯುತ್ತಿದ್ದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (Lake Conservation and Development Authority) ಅಧಿಕಾರಿ ಲೋಕಾಯುಕ್ತ (Lokayukta) ಪೊಲೀಸರ ಬಲೆಗೆ ಬಿದ್ದಿದ್ದಾನೆ.

ತಾಂತ್ರಿಕ ತಜ್ಞ ಹಾಗೂ ಪ್ರಭಾರ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಶಿವಲಿಂಗಸ್ವಾಮಿ ಹಲಗಲಿಮಠ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿ. ಆರೋಪಿಯನ್ನು ಧಾರವಾಡ (Dharwad) ಜಿಲ್ಲೆಯ ನವಲೂರಿನ ವಿನಾಯಕ ನಗರದ ನಿವಾಸದಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ನಕಲಿ ಅಂಕಪಟ್ಟಿ ನೀಡಿ ಪ್ರಾಚಾರ್ಯ ಹುದ್ದೆಗೇರಿದ್ದ ಪ್ರಾಂಶುಪಾಲ- ಪ್ರಕರಣ ದಾಖಲು

ಕೆರೆ ಅಭಿವೃದ್ಧಿ ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಆರೋಪಿ, ಸವಣೂರಿನ (Savanuru) ಗುತ್ತಿಗೆದಾರ ಸುರೇಶ ಕಳಸೂರ ಎಂಬುವರಿಂದ ಲಂಚ ಪಡೆಯುತ್ತಿದ್ದ. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಗುತ್ತಿಗೆದಾರ ಸುರೇಶ ನಿರ್ವಹಿಸಿದ ಕೆರೆ ಅಭಿವೃದ್ಧಿ ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಆರೋಪಿ 2.20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಮುಂಗಡವಾಗಿ 1 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದ.

ಗುತ್ತಿಗೆದಾರ ಸುರೇಶ ಕಳಸೂರು ನೀಡಿದ ದೂರಿನಿಂದ ಉಳಿದ 1.20 ಲಕ್ಷ ರೂ. ಹಣವನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪಕ್ಷದ ಚಿಹ್ನೆ ಬಳಸಿ ವಿದ್ಯಾರ್ಥಿಗಳಿಗೆ ಶುಭಾಶಯ- ಕೆ.ಜಿ ಬೋಪಯ್ಯಗೆ ಆಯೋಗ ನೋಟಿಸ್

Share This Article