ಹಾವೇರಿ: ಕೊರೊನಾ ಸೋಂಕು ಹರಡುವುದನ್ನ ತಡೆಗಟ್ಟಲು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಡಲ ಗ್ರಾಮಸ್ಥರು ಹೊಸದೊಂದು ಪ್ಲಾನ್ ಮಾಡಿದ್ದಾರೆ.
ಇಂದಿನಿಂದ 21 ದಿನಗಳ ಕಾಲ ಬೇರೆ ಬೇರೆ ಗ್ರಾಮಗಳ ಜನರು ಬರದಂತೆ ಗ್ರಾಮಸ್ಥರು ಕೂಡಲ ಗ್ರಾಮವನ್ನು ಸಂಪರ್ಕಿಸೋ ರಸ್ತೆಗಳಿಗೆ ಮುಳ್ಳಿನ ಬೇಲಿ, ಕಬ್ಬಿಣದ ರಾಡು ಅಡ್ಡಲಾಗಿ ಇಟ್ಟು ರಸ್ತೆಗಳನ್ನ ಬಂದ್ ಮಾಡಿದ್ದಾರೆ. ಈಗಾಗಲೆ ಬೆಂಗಳೂರ ಅಥವಾ ಬೇರೆ ಬೇರೆ ಊರುಗಳಿಂದ ಬಂದವರು ತಪಾಸಣೆ ಮಾಡಿಸಿಕೊಂಡು ಬಂದ ಬಳಿಕ ಊರನ್ನು ಪ್ರವೇಶಿಸುವಂತೆ ಗ್ರಾಮದಲ್ಲಿ ಡಂಗುರ ಸಾರಲಾಗುತ್ತಿದೆ.
ಅಲ್ಲದೆ ಅಕ್ಕಪಕ್ಕದ ಊರುಗಳಿಂದ ಬಂದವರು ಆದಷ್ಟು ಬೇಗ ತಮ್ಮ ತಮ್ಮ ಊರುಗಳಿಗೆ ತೆರಳಬೇಕು. ಇಲ್ಲದಿದ್ದರೆ 21 ದಿನಗಳ ಕಾಲ ಯಾರೂ ಊರಿಂದ ಹೊರ ಹೋಗಲು ಮತ್ತು ಒಳಗೆ ಬರದಂತೆ ರಸ್ತೆ ಬಂದ್ ಮಾಡಲಾಗಿದೆ. ಹೀಗೆ ಎಚ್ಚರಿಕೆ ನೀಡಿ ಗ್ರಾಮಕ್ಕೆ ಸಂಪರ್ಕಿಸೋ ಮೂರು ಪ್ರಮುಖ ರಸ್ತೆಗಳನ್ನ ಬಂದ್ ಮಾಡಿ ಗ್ರಾಮಸ್ಥರು ಧ್ವನಿವರ್ಧಕದ ಮೂಲಕ ಡಂಗುರ ಸಾರುತ್ತಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಈ ಸೂಚನೆಯನ್ನು ಪಾಲನೆ ಮಾಡುವಂತೆ ಗ್ರಾಮಸ್ಥರಲ್ಲಿ ಗ್ರಾಮದ ಮುಖಂಡರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ನೀವು, ನಿಮ್ಮ ಕುಟುಂಬವನ್ನ ಬದುಕಿಸಿ ಜೊತೆಗೆ ಗ್ರಾಮಸ್ಥರ ಜೀವವನ್ನ ಉಳಿಸೋ ದೃಷ್ಟಿಯಿಂದ ಯಾರೂ ಹೊರ ಹೋಗಬೇಡಿ. ಯಾರೂ ಬೇರೆ ಊರುಗಳಿಂದ ಗ್ರಾಮಕ್ಕೆ ಬರಬೇಡಿ. ಎಲ್ಲರೂ 21 ದಿನಗಳ ಕಾಲ ನಿಮ್ಮ ನಿಮ್ಮ ಮನೆಯಲ್ಲೇ ಇದ್ದುಬಿಡಿ ಅಂತಾ ಗ್ರಾಮಸ್ಥರು ಮನವಿ ಮಾಡಿಕೊಳ್ಳಿತ್ತಿದ್ದಾರೆ.