ವಿಚಾರಣಾಧೀನ ಕೈದಿಯ ಮಗುವಿಗೆ ಜೈಲಿನಲ್ಲೇ ನಾಮಕರಣ ಮಾಡಿದ ಹಾವೇರಿ ಜಿಲ್ಲಾಧಿಕಾರಿ!

Public TV
1 Min Read

ಹಾವೇರಿ: ವಿಚಾರಣಾಧೀನ ಕೈದಿಯೋರ್ವರಿಗೆ ಜನಿಸಿದ ನವಜಾತ ಶಿಶುವಿಗೆ ಜಿಲ್ಲಾಧಿಕಾರಿ ಕೇಂದ್ರ ಕಾರಾಗೃಹದಲ್ಲಿ ನಾಮಕರಣ ಮಾಡಿದ ಅಪರೂಪದ ಕಾರ್ಯಕ್ರಮ ಜರುಗಿತು.

ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವ್ಹಿ.ವೆಂಕಟೇಶ್ ಮಗುವನ್ನ ತೊಟ್ಟಿನಲ್ಲಿ ಹಾಕಿ ಶಿಶುವಿಗೆ ಹರ್ಷಿತಾ ಎಂದು ನಾಮಕರಣ ಮಾಡಿದ್ರು. ಕಳ್ಳತನ ಪ್ರಕರಣ ಒಂದರಲ್ಲಿ ಜಿಲ್ಲಾ ಕಾರಾಗೃಹದಲ್ಲಿ, ಕೈದಿಯಾಗಿರುವ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಹಾಲಿಂಗಪೂರ ಮೂಲದ 26 ವರ್ಷದ ಮಹಿಳೆ, ಕಳೆದ ಜನವರಿ 4 ರಂದು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

19 ದಿನಗಳ ಈ ನವಜಾತ ಶಿಶುವಿಗೆ ಮಹಿಳಾ ಕೈದಿಗಳ ಸೆಲ್‍ನಲ್ಲಿ ಕಾರಾಗೃಹದ ಸಿಬ್ಬಂದಿ ನಾಮಕರಣ ಕಾರ್ಯಕ್ರಮ ಆಯೋಜನೆ ಮಾಡಿದ್ರು. ಜೈಲಿನ ಮಹಿಳಾ ಅಧಿಕಾರಿಗಳು ಒಳಗೊಂಡಂತೆ 11 ಜನ ಮಹಿಳಾ ಕೈದಿಗಳು ಹೆಣ್ಣು ಮಗುವಿನ ತಾಯಿಯ ಸಂಪ್ರದಾಯದಂತೆ ತೊಟ್ಟಿಲು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ತೊಟ್ಟಿಲು ಅಲಂಕಾರ, ಜೈಲು ಮಹಿಳಾ ಸೆಲ್‍ನ ಅಲಂಕಾರ ಮನೆಯ ವಾತಾವರಣದಂತೆ ಕಂಗೊಳಿಸಿ ಎಲ್ಲರ ಗಮನಸೆಳೆಯಿತು.

ಕಂಕಣ ಧರಿಸಿದ ಜಿಲ್ಲಾಧಿಕಾರಿಗಳು ಅಲಂಕರಿಸಿದ ತೊಟ್ಟಿನಲ್ಲಿ ನವಜಾತ ಶಿಶುವನ್ನು ಮಲಗಿಸಿ ನೂಲು ಹಿಡಿದು ಕಿವಿಯಲ್ಲಿ ಮೂರುಭಾರಿ ಹರ್ಷಿತಾ, ಹರ್ಷಿತಾ, ಹರ್ಷಿತಾ.. ಎಂದು ಕರೆಯುವುದರ ಮೂಲಕ ಕೈದಿಯ ಮಗಳಿಗೆ ನಾಮಕರಣಮಾಡಿದ ಅಪರೂಪದ ಪ್ರಸಂಗ ಜರುಗಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಅಧಿಕಾರಿಗಳು ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿ ವ್ಯಕ್ತಪಡಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *