ದೋಣಿ ದುರಂತದಲ್ಲಿ ಮಡಿದ ಸಂತ್ರಸ್ತರ ಕುಟುಂಬಕ್ಕೆ ಗೃಹ ಸಚಿವರಿಂದ ಪರಿಹಾರ ವಿತರಣೆ

Public TV
2 Min Read

ಹಾವೇರಿ: ಕಾರವಾರ ಅರಬ್ಬಿ ಸಮುದ್ರದ ನಡುಗಡ್ಡೆ ಕೂರ್ಮಗಡ ನರಸಿಂಹದೇವರ ಜಾತ್ರೆಗೆ ತೆರಳಿದ ಸಂದರ್ಭದಲ್ಲಿ ದೋಣಿ ದುರಂತದಲ್ಲಿ ಮಡಿದ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹೊಸೂರ ಹಾಗೂ ಯತ್ನಳ್ಳಿಯ ಬೆಳವಲಕೊಪ್ಪ ಕುಟುಂಬಗಳ ಒಂಭತ್ತು ಜನರಿಗೆ ತಲಾ ಐದು ಲಕ್ಷ ರೂ. ಪರಿಹಾರದಂತೆ ಒಟ್ಟಾರೆ 45 ಲಕ್ಷ ರೂ. ಪರಿಹಾರ ಚೆಕ್‍ ಅನ್ನು ಕುಟುಂಬ ವರ್ಗಕ್ಕೆ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ವಿತರಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ, ದೋಣಿ ದುರಂತದಲ್ಲಿ ಮಡಿದ ಕುಟುಂಬದ ಸೋಮಪ್ಪ ಬಿ.ಬೆಳವಲಕೊಪ್ಪ ಸವಣೂರ ಇವರಿಗೆ 20 ಲಕ್ಷ ರೂ. ಚೆಕ್ ಹಾಗೂ ಎಂಟು ವರ್ಷದ ಬಾಲಕ ಗಣೇಶ ಪಿ.ಬೆಳವಲಕೊಪ್ಪ ಹಾಗೂ ಶ್ರೀಮತಿ ಕೇಶವ್ವ ಬಿ.ಬೆಳವಲಕೊಪ್ಪ ಅವರಿಗೆ 25 ಲಕ್ಷ ರೂ.ಗಳ ಚೆಕ್‍ಗಳನ್ನು ಸಚಿವರು ನೀಡಿದರು.

ಕಾರವಾರ ಅರಬ್ಬಿಸಮುದ್ರದ ನಡುಗಡ್ಡೆ ಕೂರ್ಮಗಡ ದೋಣಿ ದುರಂತದಲ್ಲಿ 16 ಜನ ಜಲಸಮಾಧಿಯಾಗಿದ್ದು, ಈ ಪೈಕಿ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹೊಸೂರು ಯತ್ನಳ್ಳಿಯ 9 ಜನ ದುರಂತದಲ್ಲಿ ಸಾವನ್ನಪ್ಪಿದ್ದರು. ಬಿ.ಸೋಮಪ್ಪ ಅವರ ಹೆಂಡತಿ ಶ್ರೀಮತಿ ಮಂಜುಳಾ ಎಸ್. ಬೆಳವಲಕೊಪ್ಪ, ಮಕ್ಕಳಾದ ಕಿರಣ, ಅರುಣಾ ಹಾಗೂ ಸಹೋದರಿ ಕೀರ್ತಿ ಸಾವನ್ನಪ್ಪಿದ್ದರು. ತಲಾ ಐದು ಲಕ್ಷ ರೂ.ದಂತೆ 20 ಲಕ್ಷ ರೂ. ಪರಿಹಾರ ಚೆಕ್‍ನ್ನು ಸೋಮಪ್ಪ ಅವರು ಗೃಹ ಸಚಿವರಿಂದ ಸ್ವೀಕರಿಸಿದರು. ಇದೇ ಗ್ರಾಮದ ಇನ್ನೊಂದು ಕುಟುಂಬದ ಪರಶುರಾಮ ಬಿ.ಬೆಳವಲಕೊಪ್ಪ, ಹೆಂಡತಿ ಭಾರತಿ ಬೆಳವಲಕೊಪ್ಪ, ಮಗಳಾದ ಸಂಜನಿ, ಸುಜಾತಾ, ಮಗ ಸಂಜಯ ಸೇರಿದಂತೆ ಐದು ಜನ ಮೃತಪಟ್ಟಿದ್ದು, ಪರಶುರಾಮ ಅವರ ಎರಡನೇ ಮಗನಾದ ಗಣೇಶ ಘಟನೆಯಲ್ಲಿ ಬದುಕಿ ಉಳಿದ್ದನು. ಮೃತರ ಮಗ ಗಣೇಶ ಹಾಗೂ ಅವರ ಅಜ್ಜಿ ಕೇಶವ್ವ (ಮೃತ ಪರಶುರಾಮ ತಾಯಿ) ಅವರಿಗೆ ಗೃಹ ಸಚಿವರು 25 ಲಕ್ಷ ರೂ. ಪರಿಹಾರದ ಚೆಕ್‍ನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷರಾದ ಎಸ್.ಕೆ ಕರಿಯಣ್ಣನವರ, ಬ್ಯಾಡಗಿ ಕ್ಷೇತ್ರದ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿಗಳಾದ ಕೃಷ್ಣ ಭಾಜಪೇಯಿ, ಪೊಲೀಸ್ ಅಧೀಕ್ಷಕರಾದ ಕೆ.ಜಿ.ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‍ಪಿ ವಿಜಯಕುಮಾರ, ಜಿ.ಪಂ. ಸದಸ್ಯರಾದ ಸಿದ್ದರಾಜು ಕಲಕೋಟಿ, ಹಾಗೂ ಪೊಲೀಸ್ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *