ಕೊಡಗು ಮರು ನಿರ್ಮಾಣಕ್ಕೆ ನಾವೇ ಸರ್ಕಾರದ ರೀತಿ ಕೆಲಸ ಮಾಡೋಣ – ಪರಿಹಾರ ನಿಧಿಗೆ ಶಿವಣ್ಣ 10 ಲಕ್ಷ ರೂ. ನೆರವು

Public TV
2 Min Read

ಬೆಂಗಳೂರು: ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಮಂದಿಗೆ ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದು ಬರುತ್ತಿದೆ. ನಾಡಿನ ಜನತೆ ಸಂತ್ರಸ್ತರಿಗೆ ಬೇಕಾಗಿರುವ ಎಲ್ಲಾ ವಸ್ತುಗಳನ್ನ ಪೂರೈಸಿದ್ದಾರೆ. ಹೀಗಿರುವಾಗ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಲಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಕೊಡಗಿಗೆ ಸಹಾಯಹಸ್ತ ಚಾಚಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಲು ಮುಂದಾಗಿದ್ದಾರೆ. ಸದ್ಯ ಶಿವರಾಜ್‍ಕುಮಾರ್ ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿಯಗಳನ್ನು ಭೇಟಿ ಮಾಡಿ ಚೆಕ್ ಮೂಲಕ 10 ಲಕ್ಷ ನೀಡಲಿದ್ದಾರೆ.

ಉತ್ತಮ ಪ್ರಜಾಕೀಯ ಪಕ್ಷದ ನಾಯಕ ಹಾಗೂ ನಟ ರಿಯಲ್‍ ಸ್ಟಾರ್ ಉಪೇಂದ್ರ ಪ್ರತಿಕ್ರಿಯಿಸಿ “ಕೊಡಗು ಜನತೆಗೆ ಅಗತ್ಯ ವಸ್ತುಗಳು ಅಗತ್ಯಕ್ಕಿಂತ ಜಾಸ್ತಿ ತಲುಪಿವೆ. ಆದರೆ ಸಂತ್ರಸ್ತರ ಸಮಸ್ಯೆಗಳೇ ಬೇರೆ ಇದೆ. ಜನರಿಗಿಂತ ಹೆಚ್ಚಾಗಿ ಈಗ ಸರ್ಕಾರ ಜವಾಬ್ದಾರಿ ನಿರ್ವಹಿಸಬೇಕಿದೆ. ಸರ್ಕಾರದಿಂದಲೇ ಒಂದು ರಕ್ಷಣಾ ತಂಡ ರೆಡಿ ಇರಬೇಕು. ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತಕ್ಷಣವೇ ಕಾರ್ಯಾಚರಣೆ ಶುರು ಮಾಡುವಂತಿರಬೇಕು ಎಂದು ಹೇಳಿದರು.

ಓಂ ಪ್ರಕಾಶ್ ನಿರ್ದೇಶನದ `ರವಿಚಂದ್ರ’ ಸಿನಿಮಾ ಮುಹೂರ್ತದ ವೇಳೆ ನಟ ರವಿಚಂದ್ರನ್ ಪ್ರತಿಕ್ರಿಯಿಸಿ, ಕೊಡಗು ಪ್ರವಾಹ ಸಂತ್ರಸ್ತರಿಗೆ ನಾಡಿನ ಜನರು ನೆರವಾಗುತ್ತಿದ್ದಾರೆ ನಿಜ. ಊಟ, ತಿಂಡಿ ಕೊಟ್ಟು ತಾತ್ಕಾಲಿಕವಾಗಿ ನೆರವಾಗೋದಷ್ಟೇ ಅಲ್ಲದೇ ಕೊಡಗನ್ನು ಮರು ನಿರ್ಮಾಣ ಮಾಡೋದು ಹೇಗೆ ಅಂತ ಸ್ವಲ್ಪ ಯೋಚನೆ ಮಾಡಬೇಕಾಗುತ್ತೆ. ಸರ್ಕಾರ ನೆರವಾಗುತ್ತೆ ಅಂತ ಕಾಯುತ್ತಾ ಕುಳಿತುಕೊಳ್ಳುವುದು ಬೇಡ. ನಾವೇ ಸರ್ಕಾರದ ರೀತಿ ಕೆಲಸ ಮಾಡೋಣ ಎಂದು ರವಿಚಂದ್ರನ್ ಹೇಳಿದರು.

ಚಂದನ್ ಶೆಟ್ಟಿ ಕೂಡ ಕೊಡಗಿನ ಜನತೆಗೆ ಸಹಾಯ ಹಸ್ತ ನೀಡಿದ್ದು, ಈಗಾಗಲೇ ಕೈಲಾದಷ್ಟು ಆಹಾರ ಸಾಮಾಗ್ರಿಗಳನ್ನು ಜನತೆಗೆ ತಲುಪಿಸಿ ಸ್ವತಃ ನಿರಾಶ್ರಿತರ ಬಳಿ ಹೋಗಿ ಅವರ ಕಷ್ಟಗಳನ್ನು ಆಲಿಸಿದ್ದಾರೆ. ಸೋಮರಪೇಟೆಯ ಒಕ್ಕಲಿಗ ಸಮಾಜ ಭವನಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಜನರ ಜೊತೆ ಮಾತನಾಡಿದ್ದಾರೆ. ಈ ವೇಳೆ ಮಾಧ್ಯಮದವರ ಬಳಿ ಮಾತನಾಡಿದ ಚಂದನ್, ಒಕ್ಕಲಿಗರ ಸಮಾಜ ಭವನದಲ್ಲಿ ಸಾಕಷ್ಟು ನಿರಾಶ್ರಿತರಿಗೆ ಇರೋದಕ್ಕೆ ಅವಕಾಶ ನೀಡಲಾಗಿದೆ. ಸುಮಾರು ಕಡೆಗಳಿಂದ ದಾಸ್ತಾನು ಪದಾರ್ಥಗಳು, ತಿಂಡಿ, ತಿನಿಸುಗಳು, ಹೊದಿಕೆ, ಔಷಧಿ ಮತ್ತು ಅಗತ್ಯ ವಸ್ತುಗಳು ಬಂದಿವೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
1 Comment

Leave a Reply

Your email address will not be published. Required fields are marked *