ಬಿಜೆಪಿ ಜಿಲ್ಲಾಧ್ಯಕ್ಷರ ಅದ್ಧೂರಿ ಹುಟ್ಟುಹಬ್ಬ- ನಡುರಸ್ತೆಯಲ್ಲಿ ಡಿಜೆ ಸಾಂಗ್, ಡ್ಯಾನ್ಸ್

Public TV
1 Min Read

– ಕುಣಿದು ಕುಪ್ಪಳಿಸಿದ ಅಭಿಮಾನಿಗಳು

ಹಾಸನ: ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಕೊರೊನಾ ನಿಯಮ ಗಾಳಿಗೆ ತೂರಿ, ರಸ್ತೆಯಲ್ಲಿ ಡಿಜೆ ಸಾಂಗ್ ಹಾಕಿಕೊಂಡು ಮೆರವಣಿಗೆ ಮಾಡುತ್ತಾ ತಮ್ಮ ಅದ್ಧೂರಿ ಹುಟ್ಟುಹಬ್ಬ ಆಚರಿಸಿಕೊಂಡು ಇದೀಗ ಟೀಕೆಗೆ ಗುರಿಯಾಗಿದ್ದಾರೆ.

ಹಾಸನದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಜಿಲ್ಲಾಡಳಿತ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಆದರೆ ಆಡಳಿತ ಪಕ್ಷವಾದ ಜಿಜೆಪಿಯ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್, ನಿನ್ನೆ ಬೇಲೂರಿನಲ್ಲಿ ಕೊರೊನಾ ನಿಯಮ ಗಾಳಿಗೆ ತೂರಿ ತಮ್ಮ ಅದ್ಧೂರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಡಿಜೆ ಸಾಂಗ್ ಹಾಕಿಕೊಂಡು, ತಮ್ಮ ಐಷರಾಮಿ ಕಾರಿನಲ್ಲಿ ಮೆರವಣಿಗೆ ಮಾಡುತ್ತಾ, ಪುಷ್ಪವೃಷ್ಟಿ ಮಾಡಿಸಿಕೊಂಡು ನಡುರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ರಸ್ತೆಯಲ್ಲಿ ಮನಸ್ಸೋ ಇಚ್ಚೆ ಕುಣಿದು ಕುಪ್ಪಳಿಸಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕೋವಿಡ್ ಮೂರನೇ ಅಲೆ ಆತಂಕ, ನಿಷೇಧದ ನಡುವೆಯೂ ಅದ್ಧೂರಿಯಾಗಿ ನಡೆದ ಜಾತ್ರೆ

ಜಿಲ್ಲಾಧ್ಯಕ್ಷರ ಹುಟ್ಟು ಹಬ್ಬದ ಆಚರಣೆ ನೋಡಿದ್ರೆ ಹಾಸನದಲ್ಲಿ ಕೊರೊನಾ ನಿಯಮಗಳು, ವೀಕೆಂಡ್ ಕರ್ಫ್ಯೂ ಇವೆಲ್ಲ ಕೇವಲ ಜನಸಾಮಾನ್ಯರಿಗೆ ಎಂಬಂತಾಗಿದೆ. ಈ ಬಗ್ಗೆ ಮಾತನಾಡಿದ ಡಿಸಿ ಆರ್.ಗಿರೀಶ್, ಅದ್ಧೂರಿ ಹುಟ್ಟುಹಬ್ಬ ಆಚರಣೆ ವಿಷಯ ನನ್ನ ಗಮನಕ್ಕೆ ಬಂದಿದೆ. ವರದಿ ನೀಡಲು ಎಸ್‍ಪಿಗೆ ಸೂಚಿಸಿದ್ದೇನೆ ಎಂದಿದ್ದಾರೆ. ಇತ್ತ ಎಸ್‍ಪಿ, ನಾನು ನಮ್ಮ ಪೊಲೀಸರಿಂದ ಮಾಹಿತಿ ಕೇಳಿದ್ದೇನೆ. ಅವರು ಮೆರವಣಿಗೆ ಮಾಡಿ ಸಂಭ್ರಮಾಚರಣೆ ಮಾಡಿರುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಹಾಸನದಲ್ಲಿ ಕೊರೊನಾ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಜಿಲ್ಲಾಡಳಿತ ವೀಕೆಂಡ್ ಕರ್ಫ್ಯೂ ವಿಧಿಸಿದೆ. ಆದರೆ ರಾಜಕಾರಣಿಗಳು ಕೊರೊನಾ ನಿಯಮ ಮೀರಿ ಅದ್ಧೂರಿ ಕಾರ್ಯಕ್ರಮ ಮಾಡುತ್ತಾ ಹೋದರೆ ವೀಕೆಂಡ್ ಕರ್ಫ್ಯೂ ಮಾಡಿ ಪ್ರಯೋಜನವಾದರೂ ಏನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇದನ್ನೂ ಓದಿ: ಚಲಿಸುತ್ತಿದ್ದ ಟ್ಯಾಂಕರ್‌ನಿಂದ ಕಳಚಿದ ಗ್ಯಾಸ್ ಟ್ಯಾಂಕ್- ತಪ್ಪಿದ ಭಾರೀ ದುರಂತ

Share This Article
Leave a Comment

Leave a Reply

Your email address will not be published. Required fields are marked *