35 ದಿನಗಳ ಬಳಿಕ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್!

Public TV
2 Min Read

ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರು 35 ದಿನಗಳ ಬಳಿಕ ಕೊನೆಗೂ ಬೆಂಗಳೂರಿಗೆ (Bengaluru) ವಾಪಸ್ ಆಗಿದ್ದಾರೆ.

ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಏಪ್ರಿಲ್ 27ರಂದು ಜರ್ಮನಿಗೆ ಹಾರಿದ್ದ ಪ್ರಜ್ವಲ್ ಜರ್ಮನಿಯ ಮ್ಯೂನಿಕ್‌ನಿಂದ ಬಂದ ಲುಫ್ತಾನ್ಸಾ ಏರ್‌ಲೈನ್ಸ್‌ನ (lufthansa airlines)  DLH 764 A-359 ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಗುರುವಾರ (ಮೇ 30) ಭಾರತೀಯ ಕಾಲಮಾನ ಸಂಜೆ 4:09ಕ್ಕೆ ಟೇಕಾಪ್ ಆಗಿದ್ದ ಲುಫ್ತಾನ್ಸಾ ಏರ್‌ಲೈನ್ಸ್ ವಿಮಾನವು 8 ಗಂಟೆ ಪ್ರಯಾಣದ ಬಳಿಕ ಮಧ್ಯರಾತ್ರಿ 12:35ರ ವೇಳೆಗೆ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಯಿತು. ವಿಮಾನ ಲ್ಯಾಂಡಿಂಗ್‌ ಆಗುತ್ತಿದ್ದಂತೆ ಸಿಐಎಸ್‌ಎಫ್‌ ಸಿಬ್ಬಂದಿ ವಿಮಾನವನ್ನು ಸುತ್ತುವರಿದಿದ್ದರು. ಬಳಿಕ ಪ್ರಜ್ವಲ್‌ ಇಳಿಯುತ್ತಿದ್ದಂತೆ ವಿಮಾನ ದ್ವಾರದಲ್ಲೇ ಅವರನ್ನು ವಶಕ್ಕೆ ಪಡೆಯಲು ಮುಂದಾದರು. ಪ್ರಜ್ವಲ್ ವಿರುದ್ಧ ಲುಕ್‌ಔಟ್ ನೊಟೀಸ್ ಹಾಗೂ ಬ್ಲೂ ಕಾರ್ನರ್ ನೊಟೀಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಇಮಿಗ್ರೇಷನ್‌ನಲ್ಲೇ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಬಳಿಕ ಎಸ್‌ಐಟಿ ತಂಡಕ್ಕೆ ಹಸ್ತಾಂತರಿಸಲಿದ್ದಾರೆ.

ಮ್ಯೂನಿಕ್ ವಿಮಾನ ನಿಲ್ದಾಣದ ವಲಸೆ ವಿಭಾಗ ಬೆಂಗಳೂರು ವಿಮಾನ ನಿಲ್ದಾಣದ ವಲಸೆ ವಿಭಾಗಕ್ಕೆ ಮೊದಲೇ ಪ್ರಯಾಣಿಕರ ಪಟ್ಟಿ ಕಳುಹಿಸಿತ್ತು. ಈ ಪಟ್ಟಿಯಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಇರೋದನ್ನ ಎಸ್‌ಐಟಿ ಸಹ ಖಚಿತಪಡಿಸಿತ್ತು. ಲುಫ್ತನ್ಸಾ ವಿಮಾನದಲ್ಲಿ 3 ಲಕ್ಷ ರೂ. ಖರ್ಚು ಮಾಡಿ ಬಿಸಿನೆಸ್ ದರ್ಜೆಯ ಟಿಕೆಟ್ ಖರೀದಿಸಿ ಪ್ರಜ್ವಲ್ ಮ್ಯೂನಿಕ್‌ನಿಂದ ಹೊರಟಿದ್ದರು. ಒಟ್ಟು 23 ಬಿಸಿನೆಸ್ ದರ್ಜೆಯ ಟಿಕೆಟ್ ಪೈಕಿ 8 ಮಂದಿ ಮಾತ್ರ ಪ್ರಜ್ವಲ್ ಅವರಿದ್ದ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ಪ್ರಜ್ವಲ್ ರೇವಣ್ಣ ಒಬ್ಬಂಟಿಯಾಗಿ ವಿಂಡೋ ಸೀಟ್‌ನಲ್ಲಿ ಕುಳಿತಿದ್ದರು.

ಏರ್ಪೋರ್ಟ್ ರಸ್ತೆಯಲ್ಲಿ ಹೈ ಅಲರ್ಟ್:
ಪ್ರಜ್ವಲ್ ಆಗಮನದ ವೇಳೆ ಹೆಚ್ಚು ಜನ ಸೇರುವ ಸಾಧ್ಯತೆಯಿದ್ದ ಕಾರಣ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಭಾರೀ ಭದ್ರತೆ ನಿಯೋಜಿಸಲಾಗಿದೆ. ಟರ್ಮಿನಲ್ 1 ಹಾಗೂ ಅಲ್ಫಾ ಗೇಟ್ ಬಳಿ ವಾಹನ ಸಂಚಾರಗಳ ಮೇಲೆ ನಿಗಾ ವಹಿಸಲಾಗಿದೆ. ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸದಂತೆ ಹಾಗೂ ಹೆಚ್ಚು ಜನ ಸೇರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಅನುಮತಿ ಪಡೆದ, ಪ್ರಯಾಣಿಕರನ್ನು ಕರೆತರುವ, ಕರೆದೊಯ್ಯುವ ವಾಹನಗಳಿಗೆ ಮಾತ್ರ ಪ್ರವೇಶ ಅವಕಾಶ ಮಾಡಿಕೊಡಲಾಗಿದೆ. ಟರ್ಮಿನಲ್ -2 ಮುಖ್ಯದ್ವಾರದ ಬಳಿಯೂ ಬ್ಯಾರಿಕೇಟ್ ಅಳವಡಿಕೆ ಮಾಡಲಾಗಿದೆ. ಸಿಐಎಸ್‌ಎಫ್ ಅಧಿಕಾರಿಗಳ ತಂಡದಿಂದಲೂ ಭದ್ರತೆ ನಿಯೋಜಿಸಲಾಗಿದೆ. ವಿಐಪಿ ಲೇನ್‌ ಅನ್ನು ಸಹ ಬಂದ್‌ ಮಾಡಲಾಗಿದೆ. ಅಲ್ಲದೇ ಪ್ರಜ್ವಲ್‌ ಅವರ ಫೋಟೋ, ವೀಡಿಯೋಗಳನ್ನು ಮಾಡದಂತೆ ಸೂಚನೆ ನೀಡಲಾಗಿದೆ.

ಪ್ರಜ್ವಲ್‌ ರೇವಣ್ಣ ಸಂಸದರಾಗಿರುವ ಕಾರಣ, ಅವರ ಬಳಿ ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌ ಇರುವ ಕಾರಣ ವಿಮಾನ ನಿಲ್ದಾಣದಲ್ಲಿಯೇ ಇನ್ನಷ್ಟು ಪ್ರಕ್ರಿಯೆ ನಡೆಯಲಿದೆ. ಪ್ರಜ್ವಲ್‌ ರೇವಣ್ಣ ಬಂಧನದ ಕುರಿತು ಲೋಕಸಭೆ ಸ್ಪೀಕರ್‌ಗೆ ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಸುಮಾರು 45 ಪುಟಗಳ ದಾಖಲೆಗಳನ್ನು ಎಸ್‌ಐಟಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಇಮಿಗ್ರೇಷನ್‌ ಅಧಿಕಾರಿಗಳ ಬಳಿ ಎಸ್‌ಐಟಿ ಅಧಿಕಾರಿಗಳು ಹಲವು ದಾಖಲೆಗಳ ಪರಿಶೀಲನೆ ಸೇರಿ ವಿವಿಧ ಪ್ರಕ್ರಿಯೆ ನಡೆಯಲಿದೆ. ಇದಾದ ಬಳಿಕವೇ ಎಸ್‌ಐಟಿ ಅಧಿಕಾರಿಗಳ ವಶಕ್ಕೆ ನೀಡಲಾಗುತ್ತದೆ.

Share This Article