ಜಿಟಿಡಿ ಬಿಜೆಪಿಗೆ ಬಂದ್ರೆ ಒಳ್ಳೆಯದು: ಸಚಿವ ಮಾಧುಸ್ವಾಮಿ

Public TV
2 Min Read

– ಎಲ್ಲಾ ಒಕ್ಕಲಿಗರು ಡಿಕೆಶಿ ಪರವಾಗಿಲ್ಲ

ಹಾಸನ: ಮಾಜಿ ಸಚಿವ ಜಿ.ಟಿ.ದೇವೇಗೌಡರು ಬಿಜೆಪಿಗೆ ಬಂದರೆ ಒಳ್ಳೆಯದು. ಜಿಟಿಡಿ ಬಿಜೆಪಿಗೆ ಅಸ್ಪೃಶ್ಯರಲ್ಲ, ಅವರನ್ನು ಗೃಹಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದು ಎಂದು ಬಹಿರಂಗವಾಗಿಯೇ ಜಿ.ಟಿ.ದೇವೇಗೌಡರನ್ನು ಸಚಿವ ಮಾಧುಸ್ವಾಮಿ ಪಕ್ಷಕ್ಕೆ ಆಹ್ವಾನಿಸಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಟಿಡಿ ಸೇರಿದಂತೆ ಜೆಡಿಎಸ್‍ನ ಕೆಲ ಶಾಸಕರು ಬಿಜೆಪಿಗೆ ಬಾಹ್ಯ ಬೆಂಬಲ ಕೊಡೋಣ ಎಂದಿದ್ದರು. ಅವರವರ ಕ್ಷೇತ್ರಗಳ ಅಭಿವೃದ್ಧಿ ದೃಷ್ಟಿಯಿಂದ ಅದು ಒಳ್ಳೆದು. ಜಿಟಿಡಿ ಬಿಜೆಪಿಗೆ ಅಸ್ಪೃಶ್ಯರಲ್ಲ, ಅವರನ್ನು ಗೃಹಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದು ನಾವು. ಅವರು ಬಿಜೆಪಿಗೆ ಬಂದರೆ ಒಳ್ಳೆಯದು ಎಂದು ಹೇಳಿದರು.

ಒಕ್ಕಲಿಗರ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಇಡಿ ಕಸ್ಟಡಿ ವಿರೋಧಿಸಿ ಈ ದೊಡ್ಡ ಪ್ರತಿಭಟನೆ ಒಳ್ಳೆಯದಲ್ಲ. ನಾವು ಡಿಕೆಶಿ ಬಂಧಿಸಿ ಎಂದು ಹೇಳಿಲ್ಲ. ಅಷ್ಟಕ್ಕೇ ಒಂದು ಸಮುದಾಯ ಹೋರಾಟಕ್ಕೆ ಇಳಿಯುವುದು ಒಳ್ಳೆಯ ಬೆಳವಣಿಗೆ ಅಲ್ಲ. ಬಿಜೆಪಿ ಒಕ್ಕಲಿಗ ಸಮುದಾಯದ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಒಕ್ಕಲಿಗ ಸಮಾಜದ ವಿರೋಧಿಯಾಗಿದ್ದರೆ ಸದಾನಂದಗೌಡರನ್ನು ಕೇಂದ್ರದಲ್ಲಿ ಮಂತ್ರಿ ಮಾಡುತ್ತಿರಲಿಲ್ಲ. ನಮ್ಮ ಸರ್ಕಾರದಲ್ಲಿ ಕಂದಾಯ ಸಚಿವರು ಯಾರು? ಅಶ್ವಥ್ ನಾರಾಯಣ ಡಿಸಿಎಂ ಆಗಿಲ್ಲವೇ. ಜಾತಿ ಜಾತಿಯವರು ಹೋರಾಟಕ್ಕಿಳಿದರೆ ಕಾನೂನು ಏನು ಮಾಡಬೇಕು. ಡಿಕೆಶಿ ತನಿಖೆಗೆ ಸಹಕಾರ ನೀಡಬೇಕು ಅಲ್ಲವೇ? ಅದಕ್ಕಾಗಿ ಇಡಿ ವಶಕ್ಕೆ ಪಡೆದಿದೆ. ಎಲ್ಲ ಒಕ್ಕಲಿಗರು ಡಿಕೆಶಿ ಪರವಾಗಿಲ್ಲ. ಅವರ ಬೆಂಬಲಿಗರು ಮಾತ್ರ ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದರು.

ಅತಿವೃಷ್ಟಿ ಅಂತಿಮ ವರದಿ ಸಿದ್ಧವಾಗಿಲ್ಲ, ಆದ ನಂತರ ಕೇಂದ್ರದ ಬಳಿಗೆ ಹೋಗುತ್ತೇವೆ. ಉ.ಕ.ಭಾಗದಲ್ಲಿ ಹೊಸದಾಗಿ ಮನೆ ಕಟ್ಟಲು ಆಗಲ್ಲ. ಮುಂದಿನ ಸೆಪ್ಟಂಬರ್‍ವರೆಗೆ ಶಾಶ್ವತ ಪರಿಹಾರ ಸದ್ಯಕ್ಕೆ ಮಾಡಲು ಆಗಲ್ಲ. ಕೇಂದ್ರ ನೆರವು ಕೊಟ್ಟಿಲ್ಲ ಎಂದು ನಾವು ಸುಮ್ಮನೆ ಕುಳಿತಿಲ್ಲ. ಕೇಂದ್ರ ಪರಿಹಾರ ಕೊಡೋ ವಿಶ್ವಾಸ ಇದೆ, ಸ್ವಲ್ಪ ವಿಳಂಬವಾಗಬಹುದು ಎಂದರು.

ಇದೇ ವೇಳೆ ಅಕ್ಬೋಬರ್‍ನಲ್ಲಿ ಅಧಿವೇಶನ ಕರೆಯುತ್ತೇವೆ. ಅದಕ್ಕೂ ಮುನ್ನಾ ರೈತರ ಎಲ್ಲಾ ಸಾಲದ ಬಗ್ಗೆ ಮಾಹಿತಿ ಪಡೆಯುತ್ತೇವೆ. ಎಲ್ಲವನ್ನೂ ಲೆಕ್ಕಾಚಾರ ಮಾಡಿ ಒಂದು ತೀರ್ಮಾನಕ್ಕೆ ಬರುತ್ತೇವೆ. ರೈತರಿಗೆ ಏನಾದರು ಮಾಡಬೇಕು ಎಂಬುದು ಯಡಿಯೂರಪ್ಪ ಕನಸು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *