ಸಾಮೂಹಿಕ ನಕಲಿನಿಂದಾಗಿ SSLC ಫಲಿತಾಂಶದಲ್ಲಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ – ಪತ್ರ ವೈರಲ್

Public TV
1 Min Read

ಹಾಸನ: ಕಳೆದ ವರ್ಷದ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಬರಲು ಸಾಮೂಹಿಕ ನಕಲು ಕಾರಣ ಎಂದು ನೊಂದ ಶಿಕ್ಷಕ ಶಿವಕುಮಾರ್ ಹೆಸರಲ್ಲಿ ವ್ಯಕ್ತಿಯೊಬ್ಬರು ಸರ್ಕಾರಕ್ಕೆ ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಚನ್ನರಾಯಪಟ್ಟಣ ತಾಲೂಕಿನ ಶಾಲೆಯೊಂದರ ಶಿಕ್ಷಕ ಶಿವಕುಮಾರ್ ಹೆಸರಿನಲ್ಲಿ ಪತ್ರ ಬರೆಯಲಾಗಿದೆ. ಕಳೆದ ವರ್ಷ ಹಾಸನ ಜಿಲ್ಲೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಸಾಮೂಹಿಕ ನಕಲು ಕಾರಣ. ಈ ಹಿಂದೆ ಹಾಸನ ಜಿಲ್ಲೆಯ ಉಪನಿರ್ದೇಶಕರಾಗಿದ್ದ ಮಂಜುನಾಥ್ ಎಂಬವರು ವಿದ್ಯಾರ್ಥಿಗಳಿಗೆ ಸಾಮೂಹಿಕ ನಕಲು ನಡೆಸಲು ಅವಕಾಶ ನೀಡುವಂತೆ ಆದೇಶ ನೀಡಿದರು. ಹೀಗಾಗಿ ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಕರು ಸಾಮೂಹಿಕ ನಕಲಿಗೆ ಅವಕಾಶ ನೀಡಿದರು. ಇದರಿಂದ ಹಾಸನ ಜಿಲ್ಲೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದೆ ಎಂದು ಬರೆದಿದ್ದಾರೆ.

ಈ ಬೆಳವಣಿಗೆಯಿಂದ ನಿಷ್ಠಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಎಲ್ಲ ಪರೀಕ್ಷಾ ಕೇಂದ್ರದಲ್ಲೂ ಸಿಸಿಟಿವಿ ಅಳವಡಿಸುವಂತೆ ಶಿವಕುಮಾರ್ ತಮ್ಮ ಪತ್ರದಲ್ಲಿ ಮನವಿ ಮಾಡಿದರು. ಶಿವಕುಮಾರ್ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ ಪತ್ರ ಮುಖೇನ ಸೂಚಿಸಿದೆ.

ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಹಾಸನ ಡಿಡಿಪಿಐ ಪ್ರಕಾಶ್, ಇದೊಂದು ಸುಳ್ಳು ಆರೋಪ. ನೊಂದ ಶಿಕ್ಷಕ ಶಿವಕುಮಾರ್ ಅವರ ಹೆಸರಿನಲ್ಲಿ ಪತ್ರ ಬರೆದಿರುವವರು ತಮ್ಮ ಪೂರ್ಣ ವಿಳಾಸ ಹಾಕಿಲ್ಲ. ಹೀಗಾಗಿ ಪತ್ರ ಬರೆದಿರುವ ಶಿಕ್ಷಕ ಯಾರೂ ಎಂಬುದು ಕೂಡ ಗೊತ್ತಿಲ್ಲ. ಅವರ ಆರೋಪದಲ್ಲಿ ಸತ್ಯ ಇದ್ದಿದ್ದರೆ, ಅವರು ತಮ್ಮ ಪೂರ್ಣ ವಿಳಾಸ ಮತ್ತು ದಾಖಲೆಯೊಂದಿಗೆ ದೂರು ನೀಡಬೇಕಿತ್ತು ಎಂದು ಹೇಳಿದ್ದಾರೆ.

ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುವ ಎಲ್ಲ ಕೇಂದ್ರದಲ್ಲಿ ಸಿಸಿಟಿವಿಯನ್ನು ಕಡ್ಡಾಯ ಮಾಡಲಾಗಿದೆ. ಈಗಾಗಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆಗೆ ಸಿದ್ಧತೆ ಪೂರ್ಣ – ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಫಿಕ್ಸ್

Share This Article
1 Comment

Leave a Reply

Your email address will not be published. Required fields are marked *