– ಮತ್ತೆ ಕಾಂಗ್ರೆಸ್ ಸೇರುತ್ತಾರಾ ಮಾಜಿ ಸಚಿವರು?
ಹಾಸನ: ಹಾಸನ ಲೋಕಸಭಾ ಚುನಾವಣೆಯ ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಹುಟ್ಟು ಹಬ್ಬದ ಬ್ಯಾನರ್‌ನಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಭಾವಚಿತ್ರ ಹಾಕಿ ಶುಭಕೋರಲಾಗಿದೆ.
ನವೆಂಬರ್ 1ರಂದು ಎ.ಮಂಜು ಹುಟ್ಟುಹಬ್ಬ. ಹೀಗಾಗಿ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಅಭಿಮಾನಿಗಳು ಕರ್ನಾಟಕ ರಾಜ್ಯೋತ್ಸವ ಹಾಗೂ ಎ.ಮಂಜು ಅವರ ಹುಟ್ಟು ಹಬ್ಬಕ್ಕೆ ಶುಭಕೋರಿ ಬೃಹತ್ ಬ್ಯಾನರ್ ಮಾಡಿಸಿ ಗ್ರಾಮದಲ್ಲಿ ಹಾಕಿದ್ದಾರೆ. ಈ ಬ್ಯಾನರ್ ಭಾರೀ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‍ನಿಂದ ಹೊರ ಬಂದಿದ್ದ ಎ.ಮಂಜು, ಹಾಸನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆದರೆ ಈಗ ಅವರ ಹುಟ್ಟು ಹಬ್ಬದ ಬ್ಯಾನರ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಹಾಕಲಾಗಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎ.ಮಂಜು ಮಂತ್ರಿಯಾಗಿದ್ದರು. ಜೊತೆಗೆ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕೆ ಇಳಿಸಿದ್ದಕ್ಕೆ ಎ.ಮಂಜು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಲೋಕಸಭಾ ಚುನಾವಣಾ ಸ್ಪರ್ಧೆ ಎದುರಿಸಿ, ಸೋತಿದ್ದರು.
ಎ.ಮಂಜು ಬಿಜೆಪಿಯಿಂದ ಹೊರ ಬಂದು ಮತ್ತೆ ಕಾಂಗ್ರೆಸ್ ಮನೆ ಸೇರುತ್ತಾರಾ? ಹಾಸನ ಜಿಲ್ಲೆಯಲ್ಲಿ ಅಸ್ತಿತ್ವ ಸಾಧಿಸಲು ಮುಂದಾಗಿದ್ದ ಬಿಜೆಪಿಗೆ ಹಿನ್ನಡೆಯಾಗುತ್ತಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.