ಕಮಿಷನ್ ಆರೋಪ; ಕಾಂಗ್ರೆಸ್ ಸರ್ಕಾರವು ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಷನ್‍ಗೆ ಇಳಿದಿದೆಯೇ: ಆರ್.ಅಶೋಕ್ ಪ್ರಶ್ನೆ

Public TV
4 Min Read

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಷನ್‍ಗೆ ಇಳಿದಿದೆಯೇ ಎಂದು ಮಾಜಿ ಸಚಿವ ಆರ್.ಅಶೋಕ್ (R.Ashok) ಪ್ರಶ್ನಿಸಿದರು.

ಪದ್ಮನಾಭನಗರದ ಶಾಸಕರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರು ಕಾಂಗ್ರೆಸ್ ಅಧಿಕಾರ ಪಡೆದರೆ ಎಟಿಎಂ ಸರ್ಕಾರದ ಮುನ್ಸೂಚನೆ ಕೊಟ್ಟಿದ್ದರು. ಅವರ ಮಾತು ನೂರಕ್ಕೆ ನೂರು ಸತ್ಯವಾಗಿದೆ ಎಂದು ಟೀಕಿಸಿದರು.

ಹಿಂದೆ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ಪೇಸಿಎಂ ಎಂದು ಅಪಪ್ರಚಾರ ಮಾಡಿದ್ದರು. ಈಗ ಪೇ ಕಾಂಗ್ರೆಸ್, ಪೇ ಸಿಎಂ, ಪೇ ಡಿಸಿಎಂ ಆಗಿದೆಯೇ? ನೀವು ಕಳಪೆ ಬಗ್ಗೆ ಮಾತನಾಡುತ್ತೀರಿ. ಶಿವಕುಮಾರ್ ಈ ಕುರಿತು ಮಾತನಾಡಿದ್ದಾರೆ. ಕಳಪೆ ಆದರೆ ಸರ್ಕಾರದ ಕಾನೂನು ಕಟ್ಟಳೆಗಳಿವೆ. ಮಾನದಂಡವೂ ಇದೆ. ಕಾರ್ಪೊರೇಷನ್‍ನಲ್ಲಿ ಸ್ಕ್ವಾಡ್ ಇದೆ ಎಂದರು. ಇದನ್ನೂ ಓದಿ: ತಾನು ಸಾಕಿದ ಗೂಂಡಾಗಳಿಂದ ನನ್ನ ಹತ್ಯೆಗೆ ಸಂಚು: ಭಗವಂತ ಖೂಬಾ ವಿರುದ್ಧ ಪ್ರಭು ಚವ್ಹಾಣ್ ಗಂಭೀರ ಆರೋಪ

ಫಂಡ್ ಕಲೆಕ್ಷನ್ ಲೋಕಸಭಾ ಚುನಾವಣೆಗೆ ಗುದ್ದಲಿ ಪೂಜೆಯೇ?
ನಮ್ಮ ಮೇಲೆ 40% ಕುರಿತಂತೆ ನಿರಾಧಾರ ಆರೋಪ ಮಾಡಿದ್ದೀರಿ. ನಿಮ್ಮ ಮೇಲೆ 15% ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಏನು? ಗುತ್ತಿಗೆದಾರರು ಅಜ್ಜಯ್ಯ ದೇವಸ್ಥಾನಕ್ಕೆ ಹೋಗಿ ಆಣೆ ಮಾಡುವಂತೆ ಕೇಳಿದ್ದಾರೆ. ನೀವು ಕಮಿಷನ್ ಕೇಳದೆ ಇದ್ದರೆ ಸವಾಲು ಒಪ್ಪಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.

ಫಂಡ್ ಕಲೆಕ್ಷನ್ ಎಂಬುದು ಲೋಕಸಭಾ ಚುನಾವಣೆಗೆ ಗುದ್ದಲಿ ಪೂಜೆಯೇ? ಕೆಂಪಣ್ಣನವರೇ ಎಲ್ಲಿದ್ದೀರಪ್ಪ. ಬಿಬಿಎಂಪಿಯ 2019ರಿಂದ 2023ರ ಕಾಮಗಾರಿಗಳನ್ನು ಮಾತ್ರ ತನಿಖೆ ಮಾಡ್ತ ಇದ್ದೀರಿ. ನೀವು ಪ್ರಾಮಾಣಿಕರಿದ್ದರೆ 2013ರಿಂದ ತನಿಖೆ ಮಾಡಬಹುದಲ್ಲವೇ? ಗುತ್ತಿಗೆದಾರರೆಲ್ಲರೂ ಕಳ್ಳರಾದರೆ, 50 ವರ್ಷ ರಾಜ್ಯವಾಳಿದ ಕಾಂಗ್ರೆಸ್ಸಿನ ಬಳುವಳಿ ಇವರೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಇದನ್ನೂ ಓದಿ: ಪ್ರಧಾನಿ ಪರಮಾತ್ಮನಲ್ಲ, ಮೋದಿ ದೇವರಲ್ಲ, ಸದನಕ್ಕೆ ಬಂದು ಮಾತನಾಡಲಿ: ಖರ್ಗೆ ಕೆಂಡ

ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದರೆ ನಿಮ್ಮ ಬ್ರ್ಯಾಂಡ್ ಬೆಂಗಳೂರಿನ ಕಥೆ ಏನು? ದಯಾಮರಣ ಕೋರಿ 300 ಜನ ಗುತ್ತಿಗೆದಾರರು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್ಸಿನವರೇ ಇದಕ್ಕೆ ನಿಮ್ಮ ಉತ್ತರ ಏನು? ದೆಹಲಿಯಲ್ಲಿ ಸಚಿವರ ಸಭೆ ಮಾಡಿದ್ದು ಲೋಕಸಭಾ ಸೀಟು ಗೆಲ್ಲಿಸಲೇ ಅಥವಾ ಸೂಟ್‍ಕೇಸ್ ತುಂಬಿಸಲೋ? ಸನ್ಮಾನ್ಯ ಶಿವಕುಮಾರ್ ಅವರೇ ನಿಮ್ಮದು ಬ್ರ್ಯಾಂಡ್ ಬೆಂಗಳೂರೇ ಅಥವಾ ಬ್ಲ್ಯಾಕ್ ಬೆಂಗಳೂರೇ? ಸಿಎಂ ಹಣ ಬಿಡುಗಡೆ ಮಾಡಿದರೆ ಡಿಸಿಎಂ ತಡೆ ಹಿಡೀತಾರೆ. ವೇಣುಗೋಪಾಲರವರು ಹಣ ಬಿಡುಗಡೆಗೆ ಮತ್ತು ಸುರ್ಜೇವಾಲಾರವರು ಹಣ ತಡೆಹಿಡಿಯಲು ಸೂಚಿಸಿದ್ದರೇ? ಈ 11 ಪ್ರಶ್ನೆಗಳಿಗೆ ಉತ್ತರವನ್ನು ನಾವು ನಿರೀಕ್ಷೆ ಮಾಡುತ್ತಿದ್ದು, ಜನರೂ ನಿರೀಕ್ಷೆ ಮಾಡುತ್ತಾರೆ ಎಂದು ನುಡಿದರು.

ಈ ಗುತ್ತಿಗೆದಾರರೆಲ್ಲರೂ ಬಿಜೆಪಿಯ ಮೂರು ವರ್ಷಗಳ ಆಡಳಿತದ ವೇಳೆ ಆಕಾಶದಿಂದ ಇಳಿದಿದ್ದಾರಾ? ಒಬ್ಬರು 29 ವರ್ಷದಿಂದ ಗುತ್ತಿಗೆದಾರರಾಗಿದ್ದವರು ಇಲ್ಲಿದ್ದಾರೆ. 29 ವರ್ಷದಿಂದ ಯಾರು ಆಡಳಿತ ಮಾಡಿದ್ದರು? ಕಾಂಗ್ರೆಸ್ ಪಕ್ಷದ ಆಡಳಿತ ಇತ್ತಲ್ಲವೇ? ಇಲ್ಲಿ ಹಲವು ದಶಕಗಳಿಂದ ಇದ್ದ ಅಧಿಕಾರಿಗಳಿದ್ದಾರೆ. ಅವರಿಗೆಲ್ಲ ತರಬೇತಿ ನೀಡಿದವರು ನೀವೇ ತಾನೇ? ನಿಮ್ಮ ಯೂನಿವರ್ಸಿಟಿಯಲ್ಲಿ ಈ ಕಂಟ್ರಾಕ್ಟರ್‌ಗಳು, ಇಂಜಿನಿಯರ್‌ಗಳು ಓದಿದ್ದಾರೆ. ಅಲ್ಲೇ ಪದವಿ, ಪಿಹೆಚ್.ಡಿ ಪಡೆದವರು. ಎಲ್ಲ ನಿಮ್ಮ ಯೂನಿವರ್ಸಿಟಿಯಲ್ಲೇ ಇರುವಾಗ ಈಗ ಕಳಪೆ ಎಂದರೆ ಹೇಗೆ ಎಂದು ಕೇಳಿದರು. ಇದನ್ನೂ ಓದಿ: ಕಾರವಾರ ನೌಕಾನೆಲೆಯಲ್ಲಿ ಬೋಟ್ ಇಂಜಿನ್‍ಗೆ ಬೆಂಕಿ – ತಪ್ಪಿದ ಅನಾಹುತ

ಎಲ್ಲ ಅಧಿಕಾರಿಗಳು, ಗುತ್ತಿಗೆದಾರರು ನಿಮ್ಮ ಲೆಕ್ಕದಲ್ಲಿ ಕಳ್ಳರು. ಹೊಸ ಸರ್ಕಾರ ಬಂದ ಮೇಲೆ ನೀವೆಲ್ಲ ಸತ್ಯ ಹರಿಶ್ಚಂದ್ರರಾ? ಇಂಜಿನಿಯರ್, ವೈದ್ಯರು ಸೇರಿ ಎಲ್ಲ ವೃತ್ತಿಯಲ್ಲೂ ಸಣ್ಣ ಪ್ರಮಾಣದ ಕಳ್ಳರಿರುತ್ತಾರೆ. ಶೇ. 5ರಿಂದ 10 ಜನ ಇದ್ದಾರು. ಅವರನ್ನು ನೋಡಿ ತನಿಖೆಗೆ ಒಳಪಡಿಸಿ. ಎಲ್ಲ ಕಂಟ್ರಾಕ್ಟರ್‌ಗಳ ವಿರುದ್ಧ ಕಳ್ಳರೆಂಬ ಪದ ಬಳಕೆ ಎಷ್ಟು ಸರಿ. ಇವರೆಲ್ಲ ಕಳ್ಳರಾದರೆ ನೀವೇನು ದರೋಡೆಕೋರರೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ಸಿನವರು ಸತ್ಯ ಹರಿಶ್ಚಂದ್ರರೇ?
ಹೊಸ ಸರ್ಕಾರ ಬಂದಾಗ 6 ತಿಂಗಳು ವಿರೋಧ ಪಕ್ಷ, ಜನರು ಮಾತನಾಡುವುದಿಲ್ಲ. ಮಾಧ್ಯಮದವರು ಅವರ ತಂಟೆಗೆ ಹೋಗುವುದಿಲ್ಲ. ಇಲ್ಲಿ ಬಂದು ಎರಡೇ ತಿಂಗಳಿಗೆ ಹಗರಣಗಳೇ ಹೆಚ್ಚುತ್ತಿದೆ. ದಿನನಿತ್ಯ ವರ್ಗಾವಣೆ ದಂಧೆ ನಡೆಯುತ್ತಿದೆ. ಹಲವು ಸಚಿವರ ವಿರುದ್ಧ ಕಮಿಷನ್ ಆರೋಪ ಬಂದಿದೆ. ನೀವೇನು ಸತ್ಯಹರಿಶ್ಚಂದ್ರರೇ? 2013ರಿಂದ ತನಿಖೆ ನಡೆಸಿ ಎಂದು ಸವಾಲೆಸೆದರು.

ಭ್ರಷ್ಟಾಚಾರ ಕೇಸಿನಲ್ಲಿ ಜಾಮೀನಿನಲ್ಲಿ ಇರುವವರು ನೀವಲ್ಲವೇ? ನೀವು ಸತ್ಯ ಹರಿಶ್ಚಂದ್ರನಂತೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ. ಎರಡು ತಿಂಗಳಿಂದ ನಿವೇಶನದ ಒಂದು ಪ್ಲಾನ್‍ಗೆ ಕೂಡ ಒಪ್ಪಿಗೆ ಸಿಗುತ್ತಿಲ್ಲ. ನಿವೇಶನದಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡದೆ ಇರುವುದರ ಗೂಡಾರ್ಥ ಏನು? ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದಾರಾ? 26 ಕಂಡೀಷನ್ ಹಾಕಿದ್ದಾರೆ. ನನ್ನ ಪ್ರಕಾರ ಇದಕ್ಕೆ 26 ವರ್ಷ ಬೇಕೇನೋ? ದಾಖಲೆ ಪಡೆದು ಕೊಡಲು ಕನಿಷ್ಠ ನಾಲ್ಕೈದು ವರ್ಷ ಬೇಕಾದೀತು. ಕಳೆ ಕಿತ್ತ ಮಾಹಿತಿಯನ್ನೂ ಕೋರಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಮೋದಿ ಸರ್ಕಾರದ ನೀತಿಗಳಿಂದಲೇ ಭಾರತ ವಿಶ್ವದ ಐದನೇ ಬಲಿಷ್ಠ ಆರ್ಥಿಕತೆಯಾಗಿದೆ: ನಿರ್ಮಲಾ ಸೀತಾರಾಮನ್

ಪಾಲಿಕೆಗಳಲ್ಲಿ ವರ್ಗಾವಣೆ ಮಾಡಬೇಕಾದರೆ, ನನ್ನ ಗಮನಕ್ಕೆ ತರದೆ ಮಾಡಬಾರದೆಂದು ಪತ್ರ ಬರೆದಿದ್ದಾರೆ. ನಾನು ಕೂಡ 4 ಸಾರಿ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೆ. ಯಾವತ್ತೂ ಕೂಡ ಇಂಥ ಒಂದು ಪತ್ರವನ್ನೂ ಬರೆದಿಲ್ಲ. ಬಿಲ್ ಎಲ್ಲವನ್ನೂ ಪಾವತಿಸದೆ ನಿಲ್ಲಿಸಲು ನಾನು ಯಾವತ್ತೂ ಹೇಳಿರಲಿಲ್ಲ. ಕೆಲಸ ಕಾರ್ಯ ಸ್ಥಗಿತವಾದರೆ ಬ್ರ್ಯಾಂಡ್ ಬೆಂಗಳೂರು ಅನುಷ್ಠಾನ ಹೇಗೆ ಸಾಧ್ಯ? ಲೋಡ್‍ಗಟ್ಟಲೆ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿದೆ. ಕಸ ತೆಗೆಯುವವರಿಲ್ಲ. ಕಾಮಗಾರಿ ನಡೆಸುವವರಿಲ್ಲ. ಬ್ರ್ಯಾಂಡ್ ಬೆಂಗಳೂರು ಮಾಡಲು ಸಾಧ್ಯವೇ? ಅರ್ಧದಲ್ಲಿ ನಿಂತ ಮೋರಿ, ರಸ್ತೆ ಮತ್ತಿತರ ಕಾಮಗಾರಿ ನಿಲ್ಲಬಾರದು. ಕಂಟ್ರಾಕ್ಟರ್‌ಗಳಿಗೆ ನ್ಯಾಯಯುತವಾಗಿ ಬಾಕಿ ಇರುವ ಹಣ ಬಿಡುಗಡೆ ಮಾಡಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಇದೇ ವೇಳೆ ಅವರು ಗುತ್ತಿಗೆದಾರರ ಅಹವಾಲು ಸ್ವೀಕರಿಸಿದರು. ಶಾಸಕರಾದ ರವಿಸುಬ್ರಮಣ್ಯ, ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ಯ, ಬೈರತಿ ಬಸವರಾಜ್, ರಘು, ರಾಮಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್