ಚಂಡೀಗಢ: ಹರಿಯಾಣ (Haryana IPS Officer) ಐಪಿಎಸ್ ಅಧಿಕಾರಿ ವೈ.ಪೂರನ್ ಕುಮಾರ್ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ಇದೇ ಪ್ರಕರಣದ ತನಿಖೆಯಲ್ಲಿದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೋಹ್ಟಕ್‌ನ ಸೈಬರ್ ಸೆಲ್‌ನಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಆಗಿ ಕರ್ತವ್ಯನಿರ್ವಹಿಸುತ್ತಿದ್ದ ಸಂದೀಪ್ ಕುಮಾರ್, ವೈ.ಪೂರನ್ ಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದರು. ಅವರು, ‘ಸತ್ಯಕ್ಕಾಗಿ’ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಜಾತಿ ಕಿರುಕುಳಕ್ಕೆ ಬೇಸತ್ತು IPS ಅಧಿಕಾರಿ ಸಾವು – IAS ಪತ್ನಿ ದೂರು ನೀಡಿದ್ರೂ FIR ದಾಖಲಿಸದ ಪೊಲೀಸರು
ರೋಹ್ಟಕ್‌ನ ಹೊಲವೊಂದರಲ್ಲಿ ಸಂದೀಪ್ ಕುಮಾರ್ ತನ್ನ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ವೀಡಿಯೊ ಮತ್ತು ಮೂರು ಪುಟಗಳ ಡೆತ್‌ನೋಟ್ ಬಿಟ್ಟು ಹೋಗಿದ್ದಾರೆ. ವೈ.ಪೂರನ್ ಕುಮಾರ್ ಒಬ್ಬ ‘ಭ್ರಷ್ಟ ಪೊಲೀಸ್’ ಆಗಿದ್ದರು. ತಮ್ಮ ಭ್ರಷ್ಟಾಚಾರ ಬಯಲಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡರು ಎಂದು ಸಂದೀಪ್ ಕುಮಾರ್ ಆರೋಪಿಸಿದ್ದಾರೆ.
ಭ್ರಷ್ಟಾಚಾರದ ಆರೋಪಗಳು ಬೆಳಕಿಗೆ ಬಂದ ನಂತರ ವೈ ಪೂರನ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಪೂರನ್ ಕುಮಾರ್ ಅವರ ಗನ್‌ಮ್ಯಾನ್ ಮದ್ಯ ಗುತ್ತಿಗೆದಾರರಿಂದ 2.5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಸಂದೀಪ್ ಕುಮಾರ್ ಅವರನ್ನು ಹಿಡಿದಿದ್ದರು ಎಂದು ತಿಳಿದುಬಂದಿದೆ. ಗ್ಯಾಂಗ್‌ಸ್ಟರ್ ಬೆದರಿಕೆ ಹಾಕಿದ ನಂತರ ಗುತ್ತಿಗೆದಾರ ಪೂರನ್ ಅವರನ್ನು ಭೇಟಿಯಾಗಿದ್ದ. ಲಂಚದ ಆರೋಪಗಳು ಬೆಳಕಿಗೆ ಬಂದಾಗ, ಐಪಿಎಸ್ ಅಧಿಕಾರಿ ಅದಕ್ಕೆ ಜಾತಿ ಬಣ್ಣ ನೀಡಲು ಪ್ರಯತ್ನಿಸಿದ್ದರು. ಕೊನೆಗೆ ಭ್ರಷ್ಟಾಚಾರ ಬೆಳಕಿಗೆ ಬರುತ್ತೆಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಪೂರನ್ ಅವರನ್ನು ರೋಹ್ಟಕ್ ವ್ಯಾಪ್ತಿಯಲ್ಲಿ ನಿಯೋಜಿಸಿದ ನಂತರ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಭ್ರಷ್ಟ ಅಧಿಕಾರಿಗಳಾಗಿ ಬದಲಾಯಿಸಿದರು. ಇವರೆಲ್ಲ ಈ ಜನರು ಫೈಲ್‌ಗಳನ್ನು ನಿರ್ಬಂಧಿಸಿದರು. ಅರ್ಜಿದಾರರಿಗೆ ಕರೆ ಮಾಡಿ ಹಣ ಕೇಳುವ ಮೂಲಕ ಮಾನಸಿಕವಾಗಿ ಹಿಂಸೆ ನೀಡಿದರು. ವರ್ಗಾವಣೆಗೆ ಪ್ರತಿಯಾಗಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಯಿತು ಎಂದು ಸಂದೀಪ್ ತಮ್ಮ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಗುಂಡು ಹಾರಿಸಿಕೊಂಡು ಎಡಿಜಿಪಿ ಆತ್ಮಹತ್ಯೆ – ಜಪಾನ್ ಪ್ರವಾಸದಲ್ಲಿರೋ ಪತ್ನಿ ಐಎಎಸ್ ಅಧಿಕಾರಿ
ಅವರ ಭ್ರಷ್ಟಾಚಾರದ ಬೇರುಗಳು ತುಂಬಾ ಆಳವಾಗಿ ಬೇರೂರಿವೆ. ತಮ್ಮ ವಿರುದ್ಧದ ದೂರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆಸ್ತಿಗಳ ತನಿಖೆಯಾಗಬೇಕು. ಇದು ಜಾತಿ ಸಮಸ್ಯೆಯಲ್ಲ. ಸತ್ಯ ಹೊರಬರಬೇಕು. ಅವರು ಭ್ರಷ್ಟರಾಗಿದ್ದರು ಎಂದು ಸಂದೀಪ್ ಗಂಭೀರ ಆರೋಪ ಮಾಡಿದ್ದಾರೆ.
ನಾನು ಈ ಸತ್ಯಕ್ಕಾಗಿ ನನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಿದ್ದೇನೆ. ನಾನು ಪ್ರಾಮಾಣಿಕತೆಯೊಂದಿಗೆ ನಿಲ್ಲುತ್ತೇನೆ ಎಂದು ನನಗೆ ಹೆಮ್ಮೆ ಇದೆ. ದೇಶವನ್ನು ಜಾಗೃತಗೊಳಿಸಲು ಇದು ಮುಖ್ಯವಾಗಿದೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಐಪಿಎಸ್ ಅಧಿಕಾರಿಯಾಗಿದ್ದ ವೈ.ಪೂರನ್ ಆತ್ಮಹತ್ಯೆಗೂ ಮುನ್ನ ಆರೋಪ ಮಾಡಿದ್ದ 10 ಪೊಲೀಸ್ ಅಧಿಕಾರಿಗಳ ಪೈಕಿ ರೋಹ್ಟಕ್ ಪೊಲೀಸ್ ಮುಖ್ಯಸ್ಥ ನರೇಂದ್ರ ಬಿಜಾರ್ನಿಯಾ ಹೆಸರು ಕೂಡ ಇತ್ತು. ನರೇಂದ್ರ ಅವರನ್ನು ಸಂದೀಪ್ ಹೊಗಳಿದ್ದಾರೆ.