ಹರ್ಯಾಣದಲ್ಲಿ ಮೈತ್ರಿ ಸರ್ಕಾರ- ಬಿಜೆಪಿಗೆ ಸಿಎಂ, ಜೆಜೆಪಿಗೆ ಡಿಸಿಎಂ

Public TV
2 Min Read

ನವದೆಹಲಿ: ಹರ್ಯಾಣದಲ್ಲಿ ಬಿಜೆಪಿ ಮತ್ತು ಜನನಾಯಕ್ ಜನತಾ ಪಕ್ಷ (ಜೆಜೆಪಿ) ಮೈತ್ರಿ ಮಾಡಿಕೊಂಡಿದೆ.

ಜನನಾಯಕ್ ಜನತಾ ಪಕ್ಷದ ಮುಖ್ಯಸ್ಥ ದುಶ್ಯಂತ್ ಚೌಟಾಲಾ ಅವರು ಶುಕ್ರವಾರ ರಾತ್ರಿ ಬಿಜೆಪಿ ರಾಷ್ಟ್ರಾಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ತೆರಳಿದರು. ಈ ವೇಳೆ ಮೈತ್ರಿ ಮಾತುಕತೆ ನಡೆಸಿದ್ದಾರೆ. ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಪ್ರಕಟಿಸಿದ್ದಾರೆ. ಮಾತುಕತೆಯ ಪ್ರಕಾರ ಮುಖ್ಯಮಂತ್ರಿ ಸ್ಥಾನ ಬಿಜೆಪಿಗೆ ಸಿಕ್ಕಿದ್ದು, ಉಪ ಮುಖ್ಯಮಂತ್ರಿ ಸ್ಥಾನ ಜೆಜೆಪಿಗೆ ಲಭ್ಯವಾಗಲಿದೆ.

ಈ ವೇಳೆ ಮಾತನಾಡಿದ ಅಮಿತ್ ಶಾ, ಬಿಜೆಪಿ ಹಾಗೂ ಜೆಜೆಪಿ ಮುಖಂಡರ ಸಭೆಯಲ್ಲಿ ಮೈತ್ರಿ ಬಗ್ಗೆ ಚರ್ಚೆಯಾಗಿದೆ. ಜನಾದೇಶವನ್ನು ಸ್ವೀಕರಿಸಿ ಎರಡೂ ಪಕ್ಷಗಳು ಸರ್ಕಾರ ಸೇರಿ ಸರ್ಕಾರ ರಚಿಸಲಿವೆ. ಈ ಮೂಲಕ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಹಾಗೂ ಜೆಜೆಪಿಗೆ ಡಿಸಿಎಂ ಸ್ಥಾನ ಹಂಚಿಕೆಯಾಗಿದೆ. ಎರಡೂ ಪಕ್ಷಗಳು ಸೇರಿ ಹರ್ಯಾಣ ಅಭಿವೃದ್ಧಿಗೆ ಶ್ರಮಿಸಲಿವೆ ಎಂದರು.

ಬಿಜೆಪಿ ಪಕ್ಷೇತರ ಶಾಸಕರ ಜೊತೆ ಸರ್ಕಾರ ರಚಿಸಲು ಮುಂದಾಗುತ್ತಿದ್ದಂತೆ ದುಶ್ಯಂತ್ ಚೌಟಾಲಾ ಎಚ್ಚೆತ್ತುಕೊಂಡು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ, ನಮ್ಮ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವ ಭರವಸೆ ನೀಡುತ್ತಾರೋ ಅವರಿಗೆ ನಾವು ಬೆಂಬಲ ಸೂಚಿಸುತ್ತೇವೆ. ಅದು ಯಾವುದೇ ಪಕ್ಷವಾದರೂ ಸರಿ ಎಂದು ಹೇಳಿದ್ದರು.

ರಾಜ್ಯದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. ಹೀಗಾಗಿ ನಮ್ಮ ಪಕ್ಷದ ಕೆಲವರು ಕಾಂಗ್ರೆಸ್‍ಗೆ ಬೆಂಬಲ ನೀಡುವಂತೆ ಸಲಹೆ ನೀಡುತ್ತಿದ್ದಾರೆ. ಕೆಲವರು ಬಿಜೆಪಿಗೆ ಬೆಂಬಲ ನೀಡಿ ಎಂದು ಹೇಳುತ್ತಿದ್ದಾರೆ. ಆದರೆ ಜೆಜೆಪಿಯು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಮುಕ್ತವಾಗಿದೆ. ಯಾರು ನಮ್ಮ ಪ್ರಣಾಳಿಕೆಯ ಬೇಡಿಕೆಗಳಿಗೆ ಒಪ್ಪಿಕೊಳ್ಳುತ್ತಾರೋ ಅವರಿಗೆ ನಾವು ಬೆಂಬಲ ಸೂಚಿಸುತ್ತೇವೆ ಎಂದು ತಿಳಿಸಿದ್ದರು.

ಹರ್ಯಾಣದ ಸ್ಥಳೀಯ ಯುವ ಸಮುದಾಯಕ್ಕೆ ಶೇ.75ರಷ್ಟು ಉದ್ಯೋಗ ಒದಗಿಸಬೇಕು. ವಯಸ್ಕರ ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಒಪ್ಪಿಗೆ ನೀಡಬೇಕು. ಇದಕ್ಕೆ ಒಪ್ಪಿಗೆ ಸೂಚಿಸುವ ಪಕ್ಷಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಸ್ಥಿರ ಸರ್ಕಾರ ಭಯಸುವವರು ನಮ್ಮದೊಂದಿಗೆ ಜೆಜೆಪಿ ಚಿಹ್ನೆ ‘ಕೀ’ ಇಟ್ಟುಕೊಳ್ಳಬೇಕು ಎಂದು ತಿಳಿಸುವ ಮೂಲಕ ಸರ್ಕಾರ ರಚನೆಗೆ ಜೆಜೆಪಿ ಅನಿವಾರ್ಯ ಎಂಬುದನ್ನು ಹೇಳಿದ್ದರು.

ಗುರುವಾರ ಪ್ರಕಟವಾದ ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶವು ಅಂತಂತ್ರ ಸ್ಥಿತಿಯನ್ನು ತಂದೊಡ್ಡಿದೆ. ಒಟ್ಟು 90 ಸ್ಥಾನಗಳ ಪೈಕಿ ಬಿಜೆಪಿ 40, ಕಾಂಗ್ರೆಸ್ 31 ಹಾಗೂ ಜನನಾಯಕ್ ಜನತಾ ಪಕ್ಷ 10 ಸೀಟ್‍ಗಳನ್ನು ಗೆದ್ದಿವೆ. ಪಕ್ಷೇತರರು 7 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಇತರೆ ಪಕ್ಷಗಳು ಎರಡು ಸ್ಥಾನಗಳನ್ನು ಪಡೆದಿವೆ. ಬಿಜೆಪಿ ಸರ್ಕಾರ ರಚಿಸಲು ಕೇವಲ 6 ಸ್ಥಾನಗಳ ಕೊರತೆ ಉಂಟಾಗಿತ್ತು. 31 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಜೆಜೆಪಿ ಹಾಗೂ ಪಕ್ಷೇತರರ ಬೆಂಬಲದಿಂದ ಸರ್ಕಾರ ರಚಿಸಲು ಮುಂದಾಗಿತ್ತು. ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಮಧ್ಯೆ ಪೈಪೋಟಿ ಉಂಟಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *