ಹರ್ಯಾಣದಲ್ಲಿ ಅತಂತ್ರ ಇದ್ದರೂ ಬಿಜೆಪಿ ಸರ್ಕಾರ

Public TV
3 Min Read

– ಕಿಂಗ್ ಮೇಕರ್ ಚೌಟಾಲ್‍ಗೆ ಸಖತ್ ಡಿಮಾಂಡ್
– ಕಾಂಗ್ರೆಸ್‍ಗೆ ಆಕ್ಸಿಜನ್ ಆದ ಸೋನಿಯಾ ಸಾರಥ್ಯ

ಚಂಡೀಗಢ: ಮಹಾರಾಷ್ಟ್ರದಲ್ಲಿ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ್ದರೂ, ಹರಿಯಾಣದಲ್ಲಿ ಭಾರೀ ಪ್ರಮಾಣದಲ್ಲಿ ಹಿನ್ನಡೆ ಅನುಭವಿಸಿದೆ. ಎರಡನೇ ಬಾರಿಗೆ ಅಧಿಕಾರಕ್ಕೇರಲು ಸರಳ ಬಹುಮತ ಪಡೆಯದಿದ್ದರೂ ಪಕ್ಷೇತರರೊಂದಿಗೆ ಸರ್ಕಾರ ರಚನೆಗೆ ಕೈ ಹಾಕಿದೆ.

ಹೊಸ ಪಕ್ಷ ಹುಟ್ಟುಹಾಕಿದ ಜನನಾಯಕ್ ಜನತಾ ಪಾರ್ಟಿಯ ದುಶ್ಯಂತ್ ಚೌಟಾಲಾ ಈಗ ಕಿಂಗ್ ಮೇಕರ್ ಆಗಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಗೆ ಕಾಂಗ್ರೆಸ್ ಕೈ ಹಾಕಿದ್ದರೂ, ಕರ್ನಾಟಕದಂತೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲು ಚೌಟಾಲಾ ಬಿಗಿಪಟ್ಟು ಹಿಡಿದಿದ್ದರಿಂದ ಮಾತುಕತೆ ಮುರಿದು ಬಿದ್ದಿದೆ. ದುಶ್ಯಂತ್ ಚೌಟಾಲಾ ಅವರನ್ನು ಬಿಜೆಪಿ ಕೂಡ ಸಂಪರ್ಕಿಸಿದ್ದು, ಪಕ್ಷೇತರರೊಂದಿಗೆ ಸರ್ಕಾರ ರಚನೆಗೆ ಬಿಜೆಪಿ ಹಕ್ಕು ಪ್ರತಿಪಾದಿಸಿದೆ.

ಹರ್ಯಾಣ ಫಲಿತಾಂಶ: ಹರ್ಯಾಣದ ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರ ರಚಿಸಲು 46 ಸ್ಥಾನಗಳ ಸರಳ ಬಹುಮತ ಅಗತ್ಯವಿದೆ. ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಕೇವಲ 40ಕ್ಕೆ ಸೀಮಿತವಾಗಿದೆ. ಕಾಂಗ್ರೆಸ್ 31 ಸ್ಥಾನಗಳು ಲಭಿಸಿದರೆ, ಜೆಜೆಪಿ 10 ಕ್ಷೇತ್ರದಲ್ಲಿ ಗೆದ್ದು ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿದೆ. ಐಎನ್‍ಎಲ್‍ಡಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟರೆ, ಇತರೆ 8 ಸ್ಥಾನ ಬಂದಿದೆ.

ಬಿಜೆಪಿ ಸೋಲಿಗೆ ಕಾರಣಗಳೇನು?
ಬಿಜೆಪಿಯಲ್ಲಿ ಪಕ್ಷ ನಿಷ್ಠರ ಕಡೆಗಣಿಸಿ, ಪಕ್ಷಾಂತರಿಗಳಿಗೆ ಮಣೆ ಹಾಕಲಾಯಿತು. ಇದರಿಂದಾಗಿ ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ರಾಜ್ಯದಲ್ಲಿ ಮಿತಿಮೀರಿದ ನಿರುದ್ಯೋಗ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದರು. ರಾಜ್ಯದಲ್ಲಿ ಜಾಟ್ ಸಮುದಾಯ ಹೆಚ್ಚಿದ್ದರೂ ಬ್ರಾಹ್ಮಣ ಸಮುದಾಯದ ಖಟ್ಟರ್ ಅವರಿಗೆ ಸಿಎಂ ಪಟ್ಟ ಕೊಟ್ಟಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದಾಗಿ ಜಾಟ್ ಸಮುದಾಯದ ಮತ ವಿಭಜನೆ ಆಯಿತು. ಬಿಜೆಪಿ ನಾಯಕರು ಪ್ರಚಾರದ ವೇಳೆ ಸಂವಿಧಾನದ 370ನೇ ವಿಧಿ ರದ್ದತಿ, ವೀರ್ ಸಾವರ್ಕರ್ ಅವರಿಗೆ ಭಾರತರತ್ನ ವಿಚಾರ ನೀಡುವ ವಿಚಾರವನ್ನು ಅಸ್ತ್ರವಾಗಿ ಬಳಸಿಕೊಂಡಿತ್ತು. ಅದು ಕೂಡ ಬಿಜೆಪಿಗೆ ಫಲಿಸಲಿಲ್ಲ. ಜೊತೆಗೆ ಅತಿಯಾದ ಆತ್ಮವಿಶ್ವಾಸ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಪ್ರಚಾರ ಫಲಕೊಡಲಿಲ್ಲ.

ಕಿಂಗ್ ಮೇಕರ್:
ಕರ್ನಾಟಕದಲ್ಲಿ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರಂತೆ ಹರ್ಯಾಣದಲ್ಲಿ ಜನನಾಯಕ್ ಜನತಾ ಪಾರ್ಟಿಯ ದುಶ್ಯಂತ್ ಚೌಟಾಲಾ ಕಿಂಗ್ ಮೇಕರ್ ಆಗಿದ್ದಾರೆ. ಕರ್ನಾಟಕದಂತೆ ಹೇಗಾದರೂ ಅಧಿಕಾರಕ್ಕೇರಬೇಕು ಅಂತ ಸೋನಿಯಾ ಗಾಂಧಿ ಅವರು ಚೌಟಾಲಾ ಅವರನ್ನು ಸಂಪರ್ಕಿಸಿದ್ದಾರೆ. ಬೆಳಗ್ಗೆ ಅತಂತ್ರ ಫಲಿತಾಂಶದ ಲಕ್ಷಣ ಅರಿತ ತಕ್ಷಣವೇ ದುಶ್ಯಂತ್ ಅವರನ್ನ ಸಂಪರ್ಕಿಸಿದರು. ಬಳಿಕ ಭೂಪಿಂದರ್ ಸಿಂಗ್ ಹೂಡ ಮೂಲಕ ಕೇವಲ ಅರ್ಧಗಂಟೆಯೊಳಗೆ 7 ಬಾರಿ ಸಂಪರ್ಕಿಸಿ ಡಿಸಿಎಂ ಸ್ಥಾನ ನೀಡುವುದಾಗಿ ಹೇಳಿದರು. ಆದರೆ ದುಶ್ಯಂತ್ ಅವರು ಮಾತ್ರ ಸಿಎಂ ಸ್ಥಾನಕ್ಕೆ ಪಟ್ಟುಹಿಡಿದ್ದಾರೆ. ಇತ್ತ ಬಿಜೆಪಿ ಕೂಡ ದುಶ್ಯಂತ್‍ಗೆ ಡಿಸಿಎಂ ಸ್ಥಾನ ಕೊಡುವುದಾಗಿ ಹೇಳಿದೆ.

ಅಖಾಲಿದಳದ ಬಾದಲ್‍ಗಳ ಮೂಲಕ ಚೌಟಾಲಾ ಮನವೊಲಿಕೆಗೆ ಅಮಿತ್ ಶಾ ಯತ್ನಿಸಿದ್ದಾರೆ. ಡಿಮಾಂಡ್ ಹೆಚ್ಚಿಸಿದ್ದರ ಲಾಭಕ್ಕೆ ಹವಣಿಸಿದ ಚೌಟಾಲಾ, ವಿಧಾನಸಭೆಯ ಕೀ ನನ್ನಲ್ಲಿದೆ. ತಾನೂ ಯಾವ ಪಕ್ಷದೊಂದಿಗೆ ಮಾತನಾಡಿಲ್ಲ. ನಾಳೆ ಮಾತನಾಡುತ್ತೇನೆ. ಯಾರು ನನಗೆ ಸಿಎಂ ಪಟ್ಟ ಕೊಡುತ್ತಾರೋ ಅವರ ಜೊತೆ ಕೈಜೋಡಿಸುವುದಾಗಿ ದುಶ್ಯಂತ್ ಹೇಳಿದ್ದಾರೆ. ಈ ಎಲ್ಲ ವಿದ್ಯಮಾನಗಳ ನಡುವೆ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಲುವಾಗಿ ರಾಜ್ಯಪಾಲರ ಭೇಟಿಗೆ ಮನೋಹರ್ ಲಾಲ್ ಖಟ್ಟರ್ ಸಮಯ ಕೇಳಿದ್ದಾರೆ.

ಸೋತ ಪ್ರಮುಖರು, ಸೆಲೆಬ್ರಿಟಿಗಳು:
ಹರ್ಯಾಣದ ತೋಹಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ಸೋಲು ಕಂಡಿದ್ದಾರೆ. ಸೋಲಿನ ಹೊಣೆಹೊತ್ತು ರಾಜೀನಾಮೆ ಕೊಟ್ಟಿದ್ದಾರೆ ಅಂತ ಸುದ್ದಿಯಾಗಿತ್ತು. ಆದರೆ ಇದೆಲ್ಲಾ ವದಂತಿ ಅಂತ ಸುಭಾಷ್ ಬರಾಲಾ ಅಲ್ಲಗಳೆದಿದ್ದಾರೆ. ಕೈಥಾಲ್ ಕ್ಷೇತ್ರದಿಂದ ಚುನಾವಣೆ ಎದುರಿಸಿದ್ದ ಕಾಂಗ್ರೆಸ್‍ನ ರಂದೀಪ್ ಸುರ್ಜೇವಾಲಾ ಸೋತಿದ್ದಾರೆ. ಇತ್ತೀಚೆಗೆ ಬಿಜೆಪಿಗೆ ಸೇರಿದ್ದ ಕುಸ್ತಿಪಟುಗಳಾದ ಬಬಿತಾ ಪೋಗಟ್ ದಾದ್ರಿ ಕ್ಷೇತ್ರದಿಂದ ಹಾಗೂ ಯೋಗೇಶ್ವರ್ ದತ್ ಬರೋದಾ ಕ್ಷೇತ್ರದಿಂದ ಚುನಾವಣೆಗೆ ನಿಂತು ಪರಾಭವಗೊಂಡಿದ್ದಾರೆ. ಬಿಜೆಪಿ ಟಿಕೆಟ್ ನೀಡಿದ್ದ ಟಿಕ್‍ಟಾಕ್ ಸ್ಟಾರ್, ಅದಂಪುರ್ ದ ಅಭ್ಯರ್ಥಿ ಸೋನಾಲಿ ಪೋಗಟ್ ಸೋತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *