ಜವಳಿ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ!

Public TV
1 Min Read

ಚಂಡೀಗಢ: ಹರಿಯಾಣದ ಗುರುಗ್ರಾಮ್‌ನಲ್ಲಿರುವ ಜವಳಿ ಕಾರ್ಖಾನೆಯಲ್ಲಿ (Cloth Manufacturing Unit) ಗುರುವಾರ ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಎಷ್ಟು ತೀವ್ರವಾಗಿತ್ತು ಎಂದರೆ ಹಲವು ಅಗ್ನಿಶಾಮಕ ದಳದ ವಾಹನಗಳು ಗಂಟೆಗಟ್ಟಲೆ ಪ್ರಯತ್ನಿಸಿದರೂ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆದರೂ ಪಕ್ಕದ ಕಾರ್ಖಾನೆಗೆ ಬೆಂಕಿ ತಗುಲದಂತೆ ತಡೆಯಲಾಯಿತು.

ಮನೇಸರ್‌ನಲ್ಲಿರುವ (Manesar) ಈ ಕಾರ್ಖಾನೆಯಲ್ಲಿ ನಡೆದ ಅಗ್ನಿ ಅವಘಢಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಸುಮಾರು 35 ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟವು. ಇದನ್ನೂ ಓದಿ: ಗೋವುಗಳನ್ನು ಹಿಡಿದ ಪೊಲೀಸರು- ಹಿಂದೂ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ

ಮನೇಸರ್‌ನ ಸೆಕ್ಟರ್ 8 ರಲ್ಲಿನ ಪ್ಲಾಟ್ ಸಂಖ್ಯೆ 408 ರಲ್ಲಿ ಇರುವ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕುರಿತು ಗುರುವಾರ ಸಂಜೆ 5.30ಕ್ಕೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಲಭಿಸಿದೆ. ಕೂಡಲೇ ಹಲವು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕಾಗಮಿಸಿದವು. ಆದರೆ ಗಾಳಿಯ ರಭಸಕ್ಕೆ ಬೆಂಕಿ ವ್ಯಾಪಿಸಿದ್ದು ನಿಯಂತ್ರಿಸಲು ಕಷ್ಟವಾಯಿತು. ಗುರುಗ್ರಾಮ್ ಸೆಕ್ಟರ್ 29 ಮತ್ತು ಸೆಕ್ಟರ್ 37 ರಿಂದ ವಾಹನಗಳನ್ನು ಕೂಡ ಸ್ಥಳಕ್ಕೆ ಕರೆಸಲಾಯಿತು. ಸುಮಾರು 35 ವಾಹನಗಳು ಸ್ಥಳಕ್ಕೆ ತಲುಪಿದವು. ಆದರೆ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ನಡುವೆ ಹತ್ತಿರದಲ್ಲಿದ್ದ ಕಂಪನಿಗೆ ಬೆಂಕಿ ಹರಡುವುದನ್ನು ನಿಲ್ಲಿಸಲಾಯಿತು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.

ಜವಳಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಹಾನಿ ಸಂಭವಿಸಿದೆ. ಆದರೆ ಈ ಅವಘಡದಲ್ಲಿ ಯಾವುದೇ ಸಾವು -ನೋವು ಸಂಭವಿಸಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಗ್ನಿ ಅವಘಡದ ಬಗ್ಗೆ ಮಾಹಿತಿ ಬಂದ ತಕ್ಷಣ ಎಲ್ಲ ಸಿಬ್ಬಂದಿ ಹೊರಗೆ ಬಂದರು. ಇದರಿಂದಾಗಿ ಎಲ್ಲರ ಪ್ರಾಣ ಉಳಿಯಿತು ಎಂಬುದಾಗಿ ವರದಿಯಾಗಿದೆ.

Share This Article