ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರಿಗೆ ಕಾನೂನಿನಡಿ ಶಿಕ್ಷೆಯಾಗಬೇಕು- ಹರ್ಷಿಕಾ ಆಗ್ರಹ

Public TV
2 Min Read

ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣದ ಕುರಿತು ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ (Harshika Poonacha) ಧ್ವನಿಯೆತ್ತಿದ್ದಾರೆ. ಸೆಕ್ಸ್ ಸ್ಕ್ಯಾಂಡಲ್ ಬಗ್ಗೆ ನಟಿ ಮಾತನಾಡಿದ್ದಾರೆ. ತಪ್ಪು ಮಾಡಿದ್ರೆ ಕಾನೂನು ಅಡಿಯಲ್ಲಿ ತಕ್ಕ ಶಿಕ್ಷೆಯಾಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹರ್ಷಿಕಾ ಬರೆದುಕೊಂಡಿದ್ದಾರೆ.

ದುರದೃಷ್ಟವಶಾತ್ ವೈರಲ್ ಆಗಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ. ಅದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿ. ವೀಡಿಯೋಗಳು ಕಾನೂನುಬದ್ಧ ಮತ್ತು ನೈಜವಾಗಿದ್ದರೆ, ಅಂತಹ ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರು ಖಂಡಿತವಾಗಿಯೂ ದೇಶದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗಬೇಕು ಎಂದು ನಟಿ ಬರೆದುಕೊಂಡಿದ್ದಾರೆ.

ಈ ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವ ಅಸಂಖ್ಯಾತ ಮಹಿಳೆಯರ ಕುರಿತಾಗಿ ನನ್ನ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರೆಲ್ಲರೂ ಸಭ್ಯ ಮತ್ತು ಸರಳ ಕುಟುಂಬದ ಸಾಮಾನ್ಯ ಮಹಿಳೆಯರಂತೆ ಕಾಣುತ್ತಾರೆ. ಈ ಸಂತ್ರಸ್ತರ ಮುಖಗಳನ್ನು ವಿವಿಧ ಗುಂಪುಗಳು ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ರಾಜಕಾರಣಿಗಳ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಬದುಕೇ ಬೇಡ ಎಂದು ಕುಗ್ಗಿದ ದಿನಗಳ ಬಗ್ಗೆ ‘ಕೆಜಿಎಫ್’ ನಟಿ ಓಪನ್ ಟಾಕ್

ಅಲ್ಲಿರುವ ಮಹಿಳೆಯರ ಮುಖವನ್ನು ಬ್ಲರ್ ಮಾಡಬಹುದಿತ್ತು. ಭವಿಷ್ಯದಲ್ಲಿ ಅವರು ಸಮಾಜವನ್ನು ಹೇಗೆ ಎದುರಿಸುತ್ತಾರೆ. ಇನ್ನು ಮುಂದೆ ನಮ್ಮ ಜನ ಅವರನ್ನು ಯಾವ ದೃಷ್ಟಿಕೋನದಲ್ಲಿ ನೋಡಬಹುದು ಎಂದು ವಿವರಿಸಿ ಹೇಳಬೇಕಾಗಿಲ್ಲ. ಅವರ ಕುಟುಂಬ ಮತ್ತು ಮಕ್ಕಳ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ? ಎಂದು ನಟಿ ಕೇಳಿದ್ದಾರೆ. ಅವರು ಈಗ ಅನುಭವಿಸುತ್ತಿರುವ ಮಾನಸಿಕ ಆಘಾತವನ್ನು ಒಮ್ಮೆ ಯೋಚಿಸಿ ನೋಡಿ ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ.

ಈ ವೀಡಿಯೋಗಳನ್ನು ಸಾರ್ವಜನಿಕರಿಗೆ ಹರಡಲು ಕಾರಣರಾದ ವ್ಯಕ್ತಿಗಳಿಗೂ ಸಮಾನವಾಗಿ ಶಿಕ್ಷೆಯಾಗಬೇಕು. ನಾನು ಯಾವಾಗಲೂ ಗೌರವ, ಸುರಕ್ಷತೆ ಮತ್ತು ಮಹಿಳೆಯರಿಗೆ ಸಮಾನತೆಗಾಗಿ ನಿಂತಿದ್ದೇನೆ ಮತ್ತು ನಾನು ಯಾವಾಗಲೂ ಇದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಸಮಸ್ಯೆಗೆ ಒಳಗಾದ ಎಲ್ಲಾ ಅಮಾಯಕ ಕುಟುಂಬಗಳಿಗೆ ಶಕ್ತಿ ಮತ್ತು ಧೈರ್ಯವನ್ನು ನೀಡಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ನಟಿ ಬರೆದುಕೊಂಡಿದ್ದಾರೆ.

Share This Article