ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು- ಸಚಿವರಿಗೆ ಹರ್ಷಿಕಾ ತಿರುಗೇಟು

Public TV
2 Min Read

ಬೆಂಗಳೂರು: ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ಎಂಬುವುದು ನನ್ನ ಪರಿಸ್ಥತಿ. ನಾನು ಯಾರನ್ನು ದೋಷಿಸಿಲ್ಲ. ಕೊಡಗು ಸಂತ್ರಸ್ಥರಿಗೆ ಸರ್ಕಾರ ಚೆನ್ನಾಗಿರುವ ಮನೆ ನಿರ್ಮಿಸಿ ಕೊಡಲಿ ಎಂದು ಮನವಿ ಮಾಡಿದ್ದು ಎಂದು ಸಚಿವ ಸಾರಾ ಮಹೇಶ್‍ಗೆ ನಟಿ ಹರ್ಷಿಕಾ ಪೂಣಚ್ಚ ತಿರುಗೇಟು ನೀಡಿದ್ದಾರೆ.

ವಿಡಿಯೋ ಮೂಲಕ ಶನಿವಾರ ತಾವು ಕೊಡಗು ಸಂಸ್ರಸ್ಥರ ಬಗ್ಗೆ ನೀಡಿದ ಹೇಳಿಕೆಗೆ ಹರ್ಷಿಕಾ ಪೂಣಚ್ಚ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋದಲ್ಲಿ ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ನನ್ನ ಪರಿಸ್ಥತಿ. ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾನು ಹೇಳಿದ್ದು, ಕೆಲವು ಮಾಡೆಲ್ ಮನೆಗಳ ಫೋಟೋ ನೋಡದೆ. ಅದು ನನಗೆ ಇಷ್ಟವಾಗಿಲ್ಲ. ಯಾಕೆಂದರೆ ಆ ಮನೆಗಳು ಶೀಟ್ ಮನೆ ತರಹ, ಗಾಳಿ ಬೆಳಕಿಲ್ಲದಂತೆ ಕೆಟ್ಟದಾಗಿ ಇತ್ತು. ಹೀಗಾಗಿ ರಾಜ್ಯ ಸರ್ಕಾರ ಕೊಡಗು ಸಂತ್ರಸ್ಥರಿಗೆ ಮನೆ ಕಟ್ಟಿಕೊಡುವಾಗ ಚೆನ್ನಾಗಿರುವ ಮನೆ ಕಟ್ಟಿಕೊಡಿ. ಕೊಡಗಿನ ಸಂತ್ರಸ್ಥರ ಸ್ವಾಭಿಮಾನಕ್ಕೆ ದಕ್ಕೆ ಬರದಂತೆ ಒಳ್ಳೆಯ ಮನೆಗಳನ್ನ ಕಟ್ಟಿಕೊಡಿ ಎಂದು ನಾನು ಮನವಿ ಮಾಡಿದ್ದೇನೆ ಅಷ್ಟೆ. ನಾನು ಈ ವಿಷಯಕ್ಕೆ ಯಾರನ್ನೂ ದೂರಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಮಾತನಾಡಲು ಅವರು ಯಾರು? ಏನು ಓದಿದ್ದಾರೆ? ಎಂದು ಕೇಳಿದ್ದಾರೆ. ನಾನು ಇಂಜಿನಿಯರ್ ಬಿ.ಇ ಪದವಿ ಪಡೆದಿದ್ದೇನೆ. ನಾನು ಕೊಡಗಿನ ಮಗಳು, ಭಾರತದ ಪ್ರಜೆ ನನಗೆ ಈ ಬಗ್ಗೆ ಕೇಳುವ ಎಲ್ಲಾ ಹಕ್ಕಿದೆ. ನಮ್ಮ ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಕೂಡ ಸಿನಿಮಾದವರು. ತಮಿಳುನಾಡಿನ ಸಾಕಷ್ಟು ಮಂತ್ರಿಗಳು ಸಿನಿಮಾದವರು. ಅಷ್ಟೇ ಅಲ್ಲದೆ ಸಿನಿಮಾದವರು ಏನು ಮಾಡಬಹುದು ಅನ್ನೋದು ಇತ್ತೀಚಿಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಿದೆ. ದಯವಿಟ್ಟು ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಸಚಿವ ಸಾರಾ ಮಹೇಶ್ ಅವರಿಗೆ ಮಾತಿನ ಚಾಟಿ ಬೀಸಿದ್ದಾರೆ.

ಹಾಗೆಯೇ ಕೊಡಗಿನಲ್ಲಿ ತುರ್ತು ಚಿಕಿತ್ಸಾ ಆಸ್ಪತ್ರೆ ಮಾಡಿ ಎನ್ನುವುದು ನಮ್ಮ ಮನವಿ. ಕೊಡಗಿನಲ್ಲಿ 7 ಲಕ್ಷಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಅಲ್ಲದೆ 35 ಲಕ್ಷಕ್ಕೂ ಅಧಿಕ ಮಂದಿ ಪ್ರವಾಸಿಗರು ಪ್ರತಿ ವರ್ಷ ಕೊಡಗಿಗೆ ಪ್ರವಾಸಕ್ಕೆ ಬರುತ್ತಾರೆ. ಇಷ್ಟೆಲ್ಲಾ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಒಂದು ತುರ್ತು ಚಿಕಿತ್ಸಾ ಆಸ್ಪತ್ರೆ ಇಲ್ಲವೆಂದರೆ ಅದಕ್ಕಿಂತ ಬೇಸರದ ಸಂಗತಿ ಮತ್ತೊಂದಿಲ್ಲ. ಹೀಗಾಗಿ ಕೊಡಗಿಗೆ ತುರ್ತು ಚಿಕಿತ್ಸಾ ಆಸ್ಪತ್ರೆ ಬೇಕು ಎಂದು ನಾವು ಅಭಿಯಾನ ಮಾಡುತ್ತಿದ್ದೇವೆ. ಅದಕ್ಕೆ ನಿಮ್ಮ ಸಹಕಾರ ಬೇಕು. ಆಸ್ಪತ್ರೆ ನಿರ್ಮಾಣ ಮಾಡಿ ಎಂದು ಮನವಿ ಮಾಡುತ್ತಿದ್ದೇವೆ. ಅಲ್ಲದೆ ಮಳೆಗಾಲ ಆರಂಭವಾಗುವ ಮುನ್ನ ಕೊಡಗು ಜನರಿಗೆ ಮನೆ ನಿರ್ಮಿಸಿಕೊಡಿ, ಮಳೆ ಆರಂಭವಾದರೆ ಅವರಿಗೆ ಬೇರೆ ಕಡೆ ಶಿಫ್ಟ್ ಆಗಲು ಕಷ್ಟವಾಗುತ್ತೆ ಎಂದು ಮನವಿ ಮಾಡಿಕೊಂಡರು.

ಸಾರಾ ಮಹೇಶ್ ಹೇಳಿದ್ದೇನು?
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ ಮಹೇಶ್, ಯಾರವರು? ಹರ್ಷಿಕಾ ಪೂಣಚ್ಚ ಏನಾಗಿದ್ದಾರೆ?. ಅವರೇನು ಸಿನಿಮಾ ನಟಿನಾ? ಸಿನಿಮಾ ನಟಿ ಆದರೆ ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು. ಅದನ್ನು ಬಿಟ್ಟು ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಹರ್ಷಿಕಾ ಪೂಣಚ್ಚ ಅವರಿಗೆ ಏನು ಗೊತ್ತು? ಅವರ ವಿದ್ಯಾಭ್ಯಾಸ ಹಿನ್ನೆಲೆ ಏನು?. ವಾಸ್ತವ ಅರ್ಥ ಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು ಎಂದು ಪೂಣಚ್ಚ ವಿರುದ್ಧ ಸಚಿವರು ಕಿಡಿಕಾರಿದ್ದರು.

https://www.youtube.com/watch?v=XQf4MGyd18E

Share This Article
Leave a Comment

Leave a Reply

Your email address will not be published. Required fields are marked *