ಟಿ-20ಯಲ್ಲಿ ಧೋನಿ, ರೋಹಿತ್ ಮಾಡದ ಸಾಧನೆ ಮಾಡಿದ ಹರ್ಮನ್‍ಪ್ರೀತ್ ಕೌರ್

Public TV
2 Min Read

ನವದೆಹಲಿ: ಭಾರತದ ಮಹಿಳಾ ಟಿ-20 ಕ್ರಿಕೆಟ್ ತಂಡದ ನಾಯಕಿ ಹರ್ಮನ್‍ಪ್ರೀತ್ ಕೌರ್ ಎಂ.ಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರು ಮಾಡಿರದ ಸಾಧನೆಯನ್ನು ಟಿ-20ಯಲ್ಲಿ ಮಾಡಿದ್ದಾರೆ.

ಶುಕ್ರವಾರ ಸೂರತ್‍ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧ ಟಿ-20 ಪಂದ್ಯವನ್ನು ಆಡಿದ ಹರ್ಮನ್‍ಪ್ರೀತ್ ಕೌರ್, ಈ ಮೂಲಕ ಭಾರತ ಪರವಾಗಿ 100 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ ಮೊದಲ ಆಟಗಾರ್ತಿಯಾಗಿದ್ದಾರೆ. ಈವರೆಗೆ ಪುರುಷರ ವಿಭಾಗದಲ್ಲೂ ಕೂಡ ಯಾರು ಈ ಸಾಧನೆ ಮಾಡಿಲ್ಲ.

ಭಾರತದ ಪರ ಪುರುಷರ ವಿಭಾಗದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿರುವ ಮಾಜಿ ನಾಯಕ ಎಂ.ಎಸ್ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮಾ ಇಬ್ಬರು ತಲಾ 98 ಪಂದ್ಯಗಳನ್ನು ಆಡಿದ್ದಾರೆ. ಆದರೆ ಹರ್ಮನ್‍ಪ್ರೀತ್ ಕೌರ್ ಅವರು ಇವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.

2006 ರಲ್ಲಿ ಚುಟುಕು ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಧೋನಿ ಅವರು ಇಲ್ಲಿಯವರಿಗೆ 98 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದಾರೆ. ಇದಾದ ನಂತರ 2007 ರಲ್ಲಿ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ರೋಹಿತ್ ಕೂಡ 98 ಪಂದ್ಯಗಳನ್ನು ಆಡಿದ್ದಾರೆ. ಆದರೆ 2009 ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಹರ್ಮನ್‍ಪ್ರೀತ್ ಕೌರ್ ಆಗಲೇ 100 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದಾರೆ.

ಟಿ-20 ಪಂದ್ಯಗಳಲ್ಲಿ ಭಾರತದ ಪರ ಉತ್ತಮ ಆಲ್‍ರೌಂಡರ್ ಆಗಿರುವ ಹರ್ಮನ್‍ಪ್ರೀತ್ ಕೌರ್, ಆಡಿರುವ 100 ಪಂದ್ಯಗಳಲ್ಲಿ 28.61 ಸರಾಸರಿಯಲ್ಲಿ ಬ್ಯಾಟ್ ಬೀಸಿ ಒಟ್ಟು 2,003 ರನ್ ಗಳಿಸಿದ್ದಾರೆ. ತಂಡಕ್ಕೆ ಅಗತ್ಯವಿದ್ದ ಸಮಯದಲ್ಲಿ ಬೌಲಿಂಗ್ ಕೂಡ ಮಾಡುವ ಕೌರ್ ಒಟ್ಟು 27 ವಿಕೆಟ್ ಕಿತ್ತು ಮಿಂಚಿದ್ದಾರೆ. ಇದರ ಜೊತೆ ಭಾರತದ ಮಹಿಳಾ ಟಿ-20 ತಂಡದ ನಾಯಕಿಯಾಗಿಯೂ ಕಾರ್ಯನಿರ್ವಹಿಸುತಿದ್ದಾರೆ.

ಹರ್ಮನ್ ಅವರ ಈ ಸಾಧನೆ ಕುರಿತು ಟ್ವೀಟ್ ಮಾಡಿರುವ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಮಹಿಳಾ ತಂಡದ ಮುಖ್ಯ ಕೋಚ್ ಡಬ್ಲ್ಯು.ವಿ ರಾಮನ್ ಅವರು ಹರ್ಮನ್‍ಪ್ರೀತ್ ಕೌರ್ ಕ್ಯಾಪ್ ನೀಡಿ ಅಭಿನಂದನೆ ಅಲ್ಲಿಸಿದ ವಿಡಿಯೋ ಹಾಕಿ 100 ಅಂತಾರಾಷ್ಟ್ರೀಯ ಪಂದ್ಯವಾಡಿದ ನಾಯಕಿಗೆ ವಿಶೇಷ ಕ್ಯಾಪ್ ಎಂದು ಬರೆದುಕೊಂಡಿದೆ.

ಸದ್ಯ ಭಾರತದ ಮಹಿಳಾ ತಂಡ ಸೌತ್ ಅಫ್ರಿಕಾ ವಿರುದ್ಧ ಆರು ಪಂದ್ಯಗಳ ಟಿ-20 ಸರಣಿಯನ್ನು ಆಡುತ್ತಿದ್ದು, ಈ ಸರಣಿಯ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಉಳಿದ ಮೂರು ಪಂದ್ಯಗಳಲ್ಲಿ ಗೆದ್ದಿರುವ ಭಾರತ 3-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

Share This Article
Leave a Comment

Leave a Reply

Your email address will not be published. Required fields are marked *