Divorce Rumours: ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ರೆ 70% ಕರಗಲಿದೆ ಪಾಂಡ್ಯ ಸಂಪತ್ತು!

By
2 Min Read

ಮುಂಬೈ: 2024ರ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಅವರು ಇಡೀ ತಂಡದ ಕಳಪೆ ಪ್ರದರ್ಶನದಿಂದ ಸೋಲಿನೊಂದಿಗೆ ಆವೃತ್ತಿಗೆ ವಿದಾಯ ಹೇಳಿದ್ದರು. ಇದೀಗ ವೈಯಕ್ತಿಕ ಜೀವನದಲ್ಲಿ ಬಿರುಗಾಳಿಯೇ ಎದ್ದಿದೆ. ಹಾರ್ದಿಕ್‌ ಪಾಂಡ್ಯ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್‌ಗೆ ವಿಚ್ಛೇದನ ನೀಡುವುದು ಬಹುತೇಕ ಖಚಿತವಾಗಿದೆ. ಅಧಿಕೃತ ಘೊಷಣೆಯೊಂದೇ ಬಾಕಿಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾರ್ದಿಕ್‌ ಪಾಂಡ್ಯ ಅವರು ಪತ್ನಿಗೆ ವಿಚ್ಛೇದನ (Divorce) ನೀಡಿದ್ದೇ ಆದಲ್ಲಿ ಅವರ 70% ಆಸ್ತಿ ಪತ್ನಿ ನತಾಶಾಗೆ ಸೇರಲಿದೆ ಎಂದು ವರದಿಯಾಗಿದೆ.

ಪಾಂಡ್ಯ ಮತ್ತು ನತಾಶಾ ದೀರ್ಘಕಾಲದಿಂದ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರೂ ಕೊನೆಯದ್ದಾಗಿ ಫೆ.14ರಂದು ಇನ್‌ಸ್ಟಾದಲ್ಲಿ ಫೋಟೋವೊಂದನ್ನ ಹಂಚಿಕೊಂಡಿದ್ದರು. ಇದಾದ ನಂತರ ಇಬ್ಬರೂ ಅಂತರ ಕಾಯ್ದುಕೊಂಡಿದ್ದರು. ಕಳೆದ ಮಾರ್ಚ್‌ 4 ರಂದು ನತಾಶಾ ಅವರ ಹುಟ್ಟುಹಬ್ಬದ ದಿನವೂ ಪಾಂಡ್ಯ ಒಂದು ಸ್ಟೇಟಸ್‌ ಸಹ ಹಂಚಿಕೊಂಡಿರಲಿಲ್ಲ. ಜೊತೆಗೆ ಪಾಂಡ್ಯ ಅವರ ನಾಯಕತ್ವದಲ್ಲಿ ನಡೆದ ಯಾವುದೇ ಪಂದ್ಯ ನೋಡುವುದಕ್ಕೂ ನತಾಶಾ (Natasa Stankovic) ಸ್ಟೇಡಿಯಂಗಳಿಗೆ ಬರಲಿಲ್ಲ. ಸರ್ಬಿಯಾದ ಮಾಡೆಲ್‌ ಸಹ ಆಗಿದ್ದ ಸ್ಟಾಂಕೋವಿಕ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ʻಪಾಂಡ್ಯʼ ಉಮನಾಮ ತೆಗೆದುಹಾಕಿ ನತಾಶಾ ಸ್ಟಾಂಕೋವಿಕ್ ಎಂದು ಬದಲಾಯಿಸಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರ ವಿಚ್ಛೇದನ ಖಚಿತವಾಗಿದೆ ಎಂಬ ವದಂತಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

70% ಆಸ್ತಿ ನತಾಶಾ ಪಾಲು:
ವದಂತಿಗಳ ಪ್ರಕಾರ ಪಾಂಡ್ಯ ಅವರು ಪತ್ನಿಯಿಂದ ವಿಚ್ಛೇದನ ಪಡೆದರೆ ಜೀವನಾಂಶ ಕಾರಣದಿಂದ 70% ಆಸ್ತಿಯನ್ನು ನತಾಶಾಗೆ ನೀಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್‌ ಪಾಂಡ್ಯ ಒಟ್ಟಾರೆ 165 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಮುಂಬೈನಲ್ಲಿ 30 ಕೋಟಿ ರೂ.ಗೆ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದರೊಂದಿಗೆ ಅವರು ವಡೋದರಾದಲ್ಲಿ ದುಬಾರಿ ಬೆಲೆಯ ವಿಲ್ಲಾ ಹೊಂದಿದ್ದಾರೆ. ವಿಚ್ಛೇದನ ಪಡೆದರೆ ಅವರು 70% ಆಸ್ತಿಯನ್ನು (70% Property) ಪತ್ನಿಗೆ ಬಿಟ್ಟುಕೊಡಬೇಕಾಗುತ್ತದೆ ಎಂದು ಹೇಳಲಾಗಿದೆ. ಆದ್ರೆ ಈ ಬಗ್ಗೆ ಹಾರ್ದಿಕ್ ಅಥವಾ ಅವರ ಪತ್ನಿ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಸೋಷಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ:
ಹಾರ್ದಿಕ್‌ ಪಾಂಡ್ಯ ಅವರ ವಿಚ್ಛೇದಿತ ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಕ್ಸ್‌ ಜಾಲತಾಣದಲ್ಲಿ ಪರ ವಿರೋಧಗಳು ಚರ್ಚೆಯಾಗುತ್ತಿವೆ. ಕೆಲವರು ಹಾರ್ದಿಕ್‌ ಪಾಂಡ್ಯ ಪರ ಬ್ಯಾಟ್‌ ಬೀಸಿದ್ದು, ಪುರುಷರಿಗಾಗಿ ನಮ್ಮ ಸಮಾಜದ ನಿಯಮಗಳು ಯಾವಾಗಲೂ ಕಠಿಣವಾಗಿರುತ್ತವೆ ಎಂದು ಹೇಳಿದ್ದಾರೆ. ಮತ್ತೊಬ್ಬರು ʻಹಾರ್ದಿಕ್‌ ಬ್ರೋ ನೀವು ಈಗಲೇ ಎಲ್ಲಾ ಆಸ್ತಿಯನ್ನು ನಿಮ್ಮ ತಾಯಿ ಹೆಸರಿಗೆ ವರ್ಗಾವಣೆ ಮಾಡಿಬಿಡಿʼ ಎಂಬ ಸಲಹೆಯನ್ನೂ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು 2020ರ ಜನವರಿ 20 ರಂದು ತಮ್ಮ ವಿಹಾರ ನೌಕೆಯಲ್ಲಿ ನತಾಶಾಗೆ ಪ್ರಪೋಸ್‌ ಮಾಡಿದ್ದರು. ಮೊದಲ ಮಗುವಿನ ನಂತರ ಪ್ರೇಮಿಗಳ ದಿನದಂದು ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Share This Article