ಒಂದೇ ಓವರ್ ನಲ್ಲಿ ಸಿಕ್ಸರ್, ಬೌಂಡರಿ ಚಚ್ಚಿ ಕಪಿಲ್ ದೇವ್ ದಾಖಲೆ ಮುರಿದ ಪಾಂಡ್ಯ

Public TV
2 Min Read

ಪಲ್ಲೆಕೆಲೆ: ಟೆಸ್ಟ್ ನಲ್ಲಿ ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ ಸಿಡಿಸುವುದರ ಜೊತೆಗೆ ಒಂದೇ ಓವರ್ ನಲ್ಲಿ ಅತಿ ಹೆಚ್ಚು ರನ್ ಚಚ್ಚಿದ ಭಾರತೀಯ ಆಟಗಾರನೆಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಇನ್ನಿಂಗ್ಸ್ 116ನೇ ಓವರ್ ನಲ್ಲಿ ಪಾಂಡ್ಯ 26 ರನ್ ಚಚ್ಚಿದ್ದರು. ಈ ಮೂಲಕ 1990ರಲ್ಲಿ ಕಪಿಲ್ ದೇವ್ 24 ರನ್ ಹೊಡೆದಿದ್ದ ದಾಖಲೆಯನ್ನು ಮುರಿದಿದ್ದಾರೆ.

ಎಡಗೈ ಸ್ಪಿನ್ನರ್ ಮಲಿಂದ ಪುಷ್ಪಕುಮಾರ ಎಸೆದ ಆರಂಭದ ಎರಡು ಎಸೆತವನ್ನು ಬೌಂಡರಿಗೆ ಅಟ್ಟಿದ್ದರೆ, ನಂತರ ಮೂರು ಎಸೆತದಲ್ಲಿ ಪಾಂಡ್ಯ ಹ್ಯಾಟ್ರಿಕ್ ಸಿಕ್ಸರ್ ಹೊಡೆಯುವ ಮೂಲಕ 26 ರನ್ ಸೂರೆಗೈದಿದ್ದರು.

ವಿಶ್ವದಾಖಲೆ ಮಿಸ್: ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ಓವರ್ ನಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ವೆಸ್ಟ್ ಇಂಡೀಸ್‍ನ ಬ್ರಿಯಾನ್ ಲಾರಾ ಮತ್ತು ಆಸ್ಟ್ರೇಲಿಯಾದ ಜಾರ್ಜ್ ಬೈಲಿ ಅವರ ಹೆಸರಿನಲ್ಲಿದೆ. ಇವರಿಬ್ಬರು ಒಂದೇ ಒಂದೇ ಓವರ್ ನಲ್ಲಿ 28 ರನ್ ಹೊಡೆದಿದ್ದಾರೆ.

ಅರ್ಧ ಶತಕ ಬಾರಿಸುವವರೆಗೆ ನಿಧಾನ ಗತಿಯಲ್ಲಿ ಆಟವಾಡುತ್ತಿದ್ದ ಪಾಂಡ್ಯ ನಂತರ ಟಿ20 ಮಾದರಿಯಲ್ಲಿ ಹೊಡಿಬಡಿ ಆಟವಾಡಿ ಶತಕ ದಾಖಲಿಸಿದರು.

ಪಾಂಡ್ಯ 61 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅರ್ಧ ಶತಕ ಬಾರಿಸಿದರು. ನಂತರದ 25 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ ಶತಕ ಬಾರಿಸಿದರು. ಒಟ್ಟಾರೆ 86 ಬಾಲ್‍ಗಳಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್ ಗಳ ನೆರವಿನಿಂದ ಶತಕ ದಾಖಲಿಸಿದರು. ಅಂತಿಮವಾಗಿ ಪಾಂಡ್ಯ 108 ರನ್(96 ಎಸೆತ, 8 ಬೌಂಡರಿ, 7 ಸಿಕ್ಸರ್) ಗಳಿಸಿದ್ದಾಗ ಕ್ಯಾಚ್ ನೀಡಿ ಕೊನೆಯವರಾಗಿ ಔಟಾದರು.

329 ರನ್ ಗಳಿಗೆ 2ನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ವೃದ್ದಿಮಾನ್ ಸಾಹ ವಿಕೆಟ್ ಕಳೆದುಕೊಂಡಿತು. ನಂತರ ಬ್ಯಾಟಿಂಗ್ ಮಾಡಲು ಆಗಮಿಸಿದ ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ಹಾರ್ದಿಕ್ ಪಾಂಡ್ಯಗೆ ಉತ್ತಮ ಸಾಥ್ ನೀಡಿದರು. ಶ್ರೀಲಂಕಾ ಪರವಾಗಿ ಸಂದಕನ್ 4, ಪುಷ್ಪಕುಮಾರ 3 ಹಾಗೂ ಫೆರ್ನಾಂಡೋ 2 ವಿಕೆಟ್ ಗಳಿಸಿದರು.

ಭಾರತದ 487 ರನ್‍ಗಳಿಗೆ ಜವಾಬು ನೀಡುತ್ತಿರುವ ಶ್ರೀಲಂಕಾ ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡಿದ್ದು, ಇತ್ತೀಚಿನ ವರದಿ ಬಂದಾಗ ಶ್ರೀಲಂಕಾ 13 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ.

 

 

Share This Article
Leave a Comment

Leave a Reply

Your email address will not be published. Required fields are marked *