ಕೊರೊನಾ ವೈರಸ್ ತಪ್ಪಿಸಲು ಸರಳ ಹೆಜ್ಜೆ- ಭಜ್ಜಿ ಪೋಸ್ಟ್

Public TV
1 Min Read

ನವದೆಹಲಿ: ಕೊರೊನಾ ವೈರಸ್‍ನಿಂದಾಗಿ ಜನರು ಮನೆಯಿಂದ ಹೋರಗೆ ಬರಲು ಭಯಪಡುವಂತಾಗಿದೆ. ಅಷ್ಟೇ ಅಲ್ಲದೆ ಆತ್ಮೀಯರೊಂದಿಗೆ ಕೈಕುಲುಕಿ ಮಾತನಾಡಲು ದೂರ ಸರಿಯುತ್ತಿದ್ದಾರೆ. ಏಕೆಂದರೆ ಚೀನಾದ ವುಹಾನ್ ನಗರದಿಂದ ಹುಟ್ಟಿದ ಈ ಸಾಂಕ್ರಾಮಿಕ ರೋಗವು ಸ್ಪರ್ಶಿಸುವ ಮೂಲಕವೂ ಹರಡುತ್ತಿದೆ. ಇದೇ ಕಾರಣಕ್ಕಾಗಿ ಆರೋಗ್ಯ ಕೇಂದ್ರಗಳು ಕಾಲಕಾಲಕ್ಕೆ ಕೈ ತೊಳೆಯಬೇಕು ಮತ್ತು ಯಾರೊಂದಿಗೂ ಕೈಕುಲುಕಬಾರದು ಎಂದು ಜನರಿಗೆ ಸಲಹೆ ನೀಡುತ್ತಿದೆ. ಅಂತಹ ಒಂದು ಸಲಹೆಯನ್ನು ಭಾರತೀಯ ತಂಡದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ನೀಡಿದ್ದಾರೆ.

ಕೊರೊನಾ ವೈರಸ್ ತಪ್ಪಿಸಲು ಸರಳ ತಂತ್ರವನ್ನು ಹರ್ಭಜನ್ ಸಿಂಗ್ ವಿವರಿಸಿದ್ದು, ಇದರಿಂದ ಜನರು ಸೋಂಕಿಗೆ ಒಳಗಾಗುವುದಿಲ್ಲ ಎಂದು ತಿಳಿಸಿದ್ದಾರೆ. ವಾಸ್ತವವಾಗಿ ಭಜ್ಜಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ, ಕೊಲಾಜ್ ಮಾಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಒಡತಿ ಪ್ರೀತಿ ಜಿಂಟಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಇದ್ದರೆ, ಎರಡನೇ ಫೋಟೋದಲ್ಲಿ ಪ್ರೀತಿ ಜಿಂಟಾ ಮತ್ತು ಹರ್ಭಜನ್ ಸಿಂಗ್ ಕಾಣಿಸಿಕೊಂಡಿದ್ದಾರೆ.

ವಿಶೇಷವೆಂದರೆ ಧೋನಿ ಪ್ರೀತಿ ಜಿಂಟಾ ಅವರೊಂದಿಗೆ ಕೈಕುಲುಕಿದ್ದಾರೆ. ಆದರೆ ಹರ್ಭಜನ್ ಸಿಂಗ್ ಪ್ರೀತಿ ಜಿಂಟಾ ಅವರ ಕೈಕುಲುಕದೆ ಕೈ ಮುಗಿಯುತ್ತಾರೆ. ಈ ಮೂಲಕ ಭಜ್ಜಿ ತಮ್ಮ ಪೋಸ್ಟ್ ನಲ್ಲಿ, ‘ಕೊರೊನಾ ವೈರಸ್ ತಪ್ಪಿಸಲು ಕೇವಲ ಒಂದು ಸರಳ ಹೆಜ್ಜೆ’ ಎಂದು ಬರೆದುಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಸ್ಪಿನ್ನರ್ ಹರ್ಭಜನ್ ಸಿಂಗ್ ಇದನ್ನು ತಮಾಷೆಯ ಸ್ವರದಲ್ಲಿ ಹೇಳಿದ್ದಾರೆ. ಸದ್ಯದ ಪರಿಸ್ಥಿಯಲ್ಲಿ ಯಾವುದೇ ವ್ಯಕ್ತಿಯೊಂದಿಗೆ ಕೈ ಕುಲುಕಿ ಮಾತನಾಡುವುದನ್ನು ತಪ್ಪಿಸುವುದು ಅಗತ್ಯವಾಗಿದೆ. ಆರೋಗ್ಯ ಸಂಸ್ಥೆಗಳು ಇದನ್ನೇ ಹೇಳುತ್ತಿವೆ.

ಕೊರೊನಾ ವೈರಸ್‍ನಿಂದಾಗಿ ಬಿಸಿಸಿಐ ಎಲ್ಲಾ ಪಂದ್ಯಾವಳಿಗಳನ್ನು ಮುಂದೂಡಿದೆ. ಮಾರ್ಚ್ 29ರಿಂದ ಪ್ರಾರಂಭವಾಗುವ ಐಪಿಎಲ್ ಅನ್ನು ಕೂಡ ಏಪ್ರಿಲ್ 15ರವರೆಗೆ ಮುಂದೂಡಲ್ಪಟ್ಟಿದೆ. ಈಗಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಆಟಗಾರನು ತಮ್ಮ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರು ಕೂಡ ಕೈ ತೊಳೆಯುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *