ಸಿಗಂಧೂರು ಅಷ್ಟೇ ಅಲ್ಲ, ಯಾವುದೇ ದೇವಾಲಯದಲ್ಲಿ ಪ್ರಮಾಣ ಮಾಡಲು ಸಿದ್ಧ: ಹರತಾಳು ಹಾಲಪ್ಪ

Public TV
2 Min Read

-ಶಿವಮೊಗ್ಗದಲ್ಲಿ ಅನೈತಿಕ ಸಂಬಂಧದ ಕೆಸರೆರಚಾಟ

ಶಿವಮೊಗ್ಗ: ಸಿಗಂಧೂರು ದೇವಾಲಯ ಅಷ್ಟೇ ಅಲ್ಲ, ದೇಶದ ಯಾವುದೇ ದೇವಾಲಯದಲ್ಲಿ ಪತ್ನಿ ಸಹಿತ ಬಂದು ಪ್ರಮಾಣ ಮಾಡುಲು ಸಿದ್ಧವೆಂದು ಶಾಸಕ ಹರತಾಳ ಹಾಲಪ್ಪ ಅವರು ಬೇಳೂರು ಗೋಪಾಲಕೃಷ್ಣರಿಗೆ ಸವಾಲು ಹಾಕಿದ್ದಾರೆ.

ಬೇಳೂರು ಗೋಪಾಲಕೃಷ್ಣ ಹೇಳಿಕೆಗೆ ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಕಾರ್ಯದ ಹಿನ್ನೆಲೆಯಲ್ಲಿ ಗೋಪಾಲಕೃಷ್ಣ ಹೇಳಿಕೆಗೆ ಉತ್ತರಿಸುವುದಕ್ಕೆ ತಡವಾಗಿದೆ. ಆದರೆ ಈಗ ಚುನಾವಣೆ ಮುಗಿದಿದೆ. ಈಗ ನಾನು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಮೊದಲು ಶರಾವತಿ ಡೆಂಟಲ್ ಕಾಲೇಜು ಈಡಿಗ ಸಮುದಾಯಕ್ಕೆ ಸೇರಿದ್ದು, ಇದು ಸುಳ್ಳು ಎಂದು ಮಧು ಬಂಗಾರಪ್ಪನವರು ಪ್ರಮಾಣ ಮಾಡಲಿ ಎಂದು ಹಾಕಿದ್ದ ಸವಾಲಿಗೆ, ಬೇಳೂರು ನನ್ನ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದರು.

ಸಿಗಂಧೂರು ದೇವಾಲಯದಲ್ಲಿ ಪ್ರಮಾಣ ಮಾಡುವಂತೆ ಸವಾಲು ಹಾಕಿದ್ದಾರೆ. ಸಿಂಗಧೂರ ಅಷ್ಟೇ ಅಲ್ಲ, ದೇಶದ ಯಾವುದೇ ದೇವಾಲಯಕ್ಕೆ ಪತ್ನಿ ಸಹಿತ ಬಂದು ಪ್ರಮಾಣ ಮಾಡಲು ನಾನು ಸಿದ್ಧ. ಆದರೆ ಬೇಳೂರು ಮೊದಲು ಡೆಂಟಲ್ ಕಾಲೇಜು ವಿಷಯಕ್ಕೆ ಸಂಬಂಧಿಸಿದಂತೆ ಮಧು ಬಂಗಾರಪ್ಪರನ್ನು ಕರೆತರಲಿ. ಗೋಪಾಲಕೃಷ್ಣ ತಮ್ಮ ಪತ್ನಿ ಸಹಿತ ಬರಲಿ, ನಾನೂ ನನ್ನ ಪತ್ನಿಯನ್ನು ಕರೆದುಕೊಂಡು ಬರುತ್ತೀನಿ. ಬೇಳೂರು ಅವರ ಪಟ್ಟಿಯನ್ನು ತರುತ್ತೇನೆ. ಆ ಪಟ್ಟಿಯಲ್ಲಿ ಇರುವವರ ಜೊತೆ ಸಂಬಂಧ ಇಲ್ಲವೆಂದು ಬೇಳೂರು ಮೊದಲು ಪ್ರಮಾಣ ಮಾಡಲಿ ಎಂದು ಕಿಡಿಕಾರಿದರು.

ನನ್ನ ಮೇಲಿನ ಪ್ರಕರಣ ಸುಳ್ಳು ಎಂದು ದೇವಿಯ ಎದುರು ಪ್ರಮಾಣ ಮಾಡಲು ನಾನು ಸಿದ್ಧ. ಅದರಂತೆ ನೈತಿಕತೆಯ ಬಗ್ಗೆ ಮಾತನಾಡುವ ಅವರು, ಆ ಪಟ್ಟಿ ದೇವರ ಮುಂದಿಟ್ಟು ಪ್ರಮಾಣ ಮಾಡಲಿ. ಅಲ್ಲದೇ ನನ್ನ ಪ್ರಕರಣದಲ್ಲಿ ನಮ್ಮದೇನೂ ಪಾತ್ರ, ಸಂಚು ಇಲ್ಲವೆಂದು ಬೇಳೂರು ಮತ್ತು ಮಧು ಬಂಗಾರಪ್ಪ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಬೇಳೂರು ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳಲು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರ ಹೇಳಿಕೆ ಬಗ್ಗೆ ಕಾನೂನು ಪ್ರಕಾರ ಕ್ರಮವನ್ನು ಕೈಗೊಳ್ಳುತ್ತೇನೆ. ಈಗಾಗಲೇ ದೇವಾಲಯ, ನ್ಯಾಯಾಲಯ ಹಾಗೂ ಜನತಾ ನ್ಯಾಯಾಲಯದಲ್ಲಿ ನಾನು ಗೆದ್ದಿದ್ದೆನೆ. ನೈತಿಕವಾಗಿ ನಾನು ಸರಿ ಇದ್ದೇನೆ. ಬೇಳೂರು ಗೋಪಾಲಕೃಷ್ಣ ಆರೋಪಕ್ಕೆ ಇನ್ನು ಮುಂದೆ ಯಾವುದೇ ಉತ್ತರ ನೀಡಲ್ಲ. ಅವರಷ್ಟೇ ಮುತ್ಸದ್ಧಿಯಿಂದ ಉತ್ತರ ಕೊಡಿಸುತ್ತೇನೆ ಎಂದು ಹೇಳಿದರು.

ಡೆಂಟಲ್ ಕಾಲೇಜು ವಿಷಯ ಚುನಾವಣೆ ಸಂದರ್ಭದಲ್ಲಿ ಬಳಸಿಕೊಂಡಿದ್ದೇನೆ. ಏಕೆಂದರೆ ನಾನೂ ಸಹ ಈಡಿಗ ಸಮಾಜಕ್ಕಾಗಿ ಕೆಲಸ ಮಾಡಿದ್ದೇನೆ. ಆದರೆ ಶರಾವತಿ ಡೆಂಟಲ್ ಕಾಲೇಜು ಈಡಿಗ ಸಮಾಜದ್ದು ಎಂಬ ಬಗ್ಗೆ ಯಾವುದೇ ದಾಖಲೆ ಇಲ್ಲ. ಅಲ್ಲದೇ ಬಂಗಾರಪ್ಪ ಈ ಬಗ್ಗೆ ನನ್ನ ಬಳಿ ಹೇಳಿದ್ದು ಸತ್ಯವೆಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *