ನವದೆಹಲಿ: ಅನೇಕ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಈತನಿಗೆ ಸುಮಾರು 20 ವರ್ಷಗಳಾಗಿದ್ದು, ಟೈಲರಿಂಗ್ ಆಗಿ ಕೆಲಸ ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಆರೋಪಿ Pedophilia ಎಂಬ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ತಿಳಿದು ಬಂದಿದೆ. ಈಗ ಮೂವರು ಬಾಲಕಿಯರ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈವರೆಗೆ ಎಷ್ಟು ಹುಡುಗಿಯರಿಗೆ ಕಿರುಕುಳ ನೀಡಿದ್ದಾನೆ ಎಂದು ತನಿಖೆ ಶುರು ಮಾಡಿದ್ದಾರೆ.
ಏನಿದು ಪ್ರಕರಣ?
ಆಗಸ್ಟ್ 24 ರಂದು ಮಧ್ಯಾಹ್ನ ನಜಾಫ್‍ಘಡ್ ಪೊಲೀಸರಿಗೆ 12 ವರ್ಷದ ಬಾಲಕಿ ಮನೆಯ ಸಮೀಪ ನಾಪತ್ತೆಯಾಗಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಆದರೆ ಸ್ವಲ್ಪ ಸಮಯದಲ್ಲೇ ಬಾಲಕಿ ಮನೆಗೆ ಬಂದಿದ್ದಾಳೆ. ನಾವು ನೋಡಿದಾಗ ಬಾಲಕಿ ಭಯ ಪಟ್ಟಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು. ನಂತರ ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ರಿಪೋರ್ಟ್ ತೆಗೆದುಕೊಂಡಿದ್ದಾರೆ. ಜೊತೆಗೆ ಬಾಲಕಿಯ ಹೇಳಿಕೆಯನ್ನು ಆಧರಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು.
ಆರೋಪಿ ಪತ್ತೆ:
ಹೆಡ್ ಕಾನ್‍ಸ್ಟೆಬಲ್ ವೇದ ಪ್ರಕಾಶ್ ಅವರು ತಮ್ಮ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಸುಮಾರು 40-50 ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಒಬ್ಬ ಯುವಕನನ್ನು ಶಂಕಿಸಿದ್ದರು. ನಂತರ ಪೊಲೀಸರು ಬಾಲಕಿಗೆ ಆ ದೃಶ್ಯ ತೋರಿಸಿದಾಗ ಆಕೆಯನ್ನು ಗುರುತಿಸಿದ್ದಾಳೆ. ಈ ವೇಳೆ ಮತ್ತಿಬ್ಬರು ಬಾಲಕಿಯರು ತಮ್ಮ ಕುಟುಂಬದೊಂದಿಗೆ ಪೊಲೀಸ್ ಠಾಣೆ ಬಂದು ದೂರು ದಾಖಲಿಸಿದ್ದಾರೆ. ಈ ಇಬ್ಬರು ಬಾಲಕಿಯರು 12 ಮತ್ತು 14 ವರ್ಷ ವಯಸ್ಸಿನವರಾಗಿದ್ದು, ಆರೋಪಿ ತಮ್ಮಿಬ್ಬರನ್ನು ಹೆದರಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದನು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಇಬ್ಬರು ಬಾಲಕಿಯರ ಹೇಳಿಕೆಗಳ ನಂತರ, ಸಿಸಿಟಿವಿಯ ತುಣುಕನ್ನು ಮತ್ತೆ ಪರಿಶೀಲಿಸಿದ್ದಾರೆ. ಆಗ ಅದರಲ್ಲಿ ಆರೋಪಿಯ ಬೈಕ್ ಕಾಣಿಸಿಕೊಂಡಿದೆ. ನಂತರ ಬೈಕಿನ ನಂಬರ್ ಆಧಾರದ ಮೇಲೆ ಪೊಲೀಸರು ಆರೋಪಿಯ ಮನೆಗೆ ಹೋಗಿ ಆತನನ್ನು ಬಂಧಿಸಿದ್ದಾರೆ.
ಆರೋಪಿಯ ಕಳೆದು ಒಂದು ತಿಂಗಳಿನಿಂದ ಈ ಕೃತ್ಯ ಎಸಗುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಹೆಚ್ಚು ಪೋರ್ನ್ ವಿಡಿಯೋಗಳನ್ನು ಇಷ್ಟಪಡುತ್ತಿದ್ದನು. ಇದರಿಂದಾಗಿ ಆತ Pedophilia ಎಂಬ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆದರೆ ಆರೋಪಿಗೆ ಈವರೆಗೆ ಎಷ್ಟು ಕೃತ್ಯಗಳನ್ನು ಎಸಗಿದ್ದಾನೆ ಎಂಬುದು ನೆನಪಿಲ್ಲ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.