ನಮ್ಮನ್ನ ಎಂದೂ ಅವ್ರು ಕೆಲ್ಸದವರಂತೆ ನೋಡಿಲ್ಲ: ಕೇಶ ವಿನ್ಯಾಸಕಾರ ಕಾರ್ತಿಕ್ ಭಾವುಕ

Public TV
3 Min Read

ಬೆಂಗಳೂರು: ನಮ್ಮನ್ನು ಎಂದೂ ಪುನೀತ್ ಅವರು ಕೆಲಸದವರಂತೆ ನೋಡಿಲ್ಲ ಎಂದು ಅವರ ಕೇಶ ವಿನ್ಯಾಸಕಾರ ಕಾರ್ತಿಕ್ ಭಾವುಕರಾಗಿ ಮಾತನಾಡಿದ್ದಾರೆ.

ಕಾರ್ತಿಕ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ನಮ್ಮನ್ನು ಎಂದೂ ಅವರು ಕೆಲಸದವರಂತೆ ನೋಡಿಲ್ಲ. ಬದಲಾಗಿ ಮನೆಗೆ ಹೋದಾಗಲೆಲ್ಲ ಕೆಲವೊಮ್ಮೆ ಅವರ ಜೊತೆ ಡೈನಿಂಗ್ ಟೇಬಲ್ ನಲ್ಲಿ ಕೂರಿಸಿ ಊಟ ಬಡಿಸುತ್ತಿದ್ದರು ಎಂದು ಪುನೀತ್ ಸರಳತೆ ಬಗ್ಗೆ ಹೇಳಿ ಭಾವುಕರಾದರು.

ಹತ್ತು-ಹನ್ನೆರಡು ವರ್ಷದಿಂದ ಪುನೀತ್ ಅವರ ಜೊತೆಗೆ ಇದ್ದೇನೆ. ಶುಕ್ರವಾರ ಬೆಳಗ್ಗೆ ನಾನು ಅವರ ಜೊತೆ ಮಾತನಾಡಿದ್ದು, ಅವರ ಪೂರ್ತಿ ದಿನ ಏನು ಮಾಡುತ್ತಾರೆ ಎಂಬುದನ್ನು ನಾನು ಕೇಳಿದ್ದೇನೆ. ಇಡೀ ವಾರ ಅವರಿಗಿದ್ದ ಕೆಲಸಗಳ ಬಗ್ಗೆ ಮಾತನಾಡಿದ್ದೆವು. ಏನೇನು ಮಾಡಬೇಕು ಎಂದು ಹೇಳಿಕೊಂಡಿದ್ದರು ಎಂದು ತಿಳಿಸಿದರು.

ನಾನು ಬಾಸ್ ಮನೆಗೆ ಹೋದಾಗ ವರ್ಕೌಟ್ ಮಾಡುತ್ತಿದ್ದರು. ಆಗ ನಾನು ಹೋದೆ. 15-20 ನಿಮಿಷ ನನ್ನ ಜೊತೆ ಖುಷಿಯಾಗಿಯೇ ಮಾತನಾಡಿದ್ದರು. ನಂತರ ಅವರು ಕಿಕ್ ಬಾಕ್ಸಿಂಗ್ ಮಾಡಿ ಸ್ಟೀಮ್ ಗೆ ಹೋಗುತ್ತೇನೆ ಎಂದರು. ಅದಕ್ಕೆ ನಾನು ಮನೆಗೆ ಬಂದೆ. ಬಂದು 1 ಗಂಟೆಯಾಗಿದೆ, ಅಷ್ಟರಲ್ಲಿ ಈ ವಿಷಯ ತಿಳಿಯಿತು. ಆದರೆ ಇದನ್ನು ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದರು. ಇದನ್ನೂ ಓದಿ: ದೇವರು ಎಂದು ನಾವು ತಿಳಿಸುಕೊಂಡಿದ್ದೆವು, ನಮ್ಮ ನೋವನ್ನು ಯಾರ ಬಳಿ ಹೇಳೋದು: ಸೆಕ್ಯೂರಿಟಿ ಕಣ್ಣೀರು

ಕೆಬಿಸಿ ಪ್ರಾರಂಭವಾದ 2ನೇ ಸೀಸನ್ ನಿಂದ ಪುನೀತ್ ಅವರ ಜೊತೆಯಲ್ಲಿಯೇ ಇದ್ದೇನೆ. ಅವರು ಎಲ್ಲೇ ಶೂಟಿಂಗ್ ಗೆ ಹೋದರೂ ನನನ್ನು ಕರೆದುಕೊಂಡು ಹೋಗುತ್ತಿದ್ದರು ಎಂದು ಭಾವುಕರಾಗಿದ್ದಾರೆ. ನಾನು ರಾಕೇಶ್ ಎಂಬವರು ಬೌನ್ಸ್ ನಲ್ಲಿ ಕೆಲಸ ಮಾಡುತ್ತಿದ್ದೇವು. ಪುನೀತ್ ಅವರಿಗೆ ರಾಕೇಶ್ ಅಥವಾ ನಾನು ಹೇರ್ ಕಟ್ ಮಾಡುತ್ತಿದ್ದೆವು. ಆದರೆ ಕೆಬಿಸಿ ಪ್ರಾರಂಭವಾದಾಗ ನಾನು ಅವರ ಜೊತೆಯೇ ಕೆಲಸ ಮಾಡಲು ಪ್ರಾರಂಭ ಮಾಡಿದೆ. ಅವರೇ ಕರೆದು ಬನ್ನಿ ಎಂದು ಹೇಳಿದ್ದರು. 12 ವರ್ಷದಿಂದ ನನ್ನನ್ನು ಅವರು ಎಲ್ಲಿಯೂ ಬಿಟ್ಟುಕೊಡಲಿಲ್ಲ ಎಂದು ಹೇಳಿದರು.

PUNEET

ನಮಗೆ ಆಯಾಸವಾಗುವುದೆ ಹೊರತು ಅವರಿಗಲ್ಲ!

ಅಪ್ಪು ಅವರಿಗೆ ಯಾವತ್ತು ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಯಾವತ್ತು ಅವರು ಆರೋಗ್ಯದಲ್ಲಿ ಸಮಸ್ಯೆ ಇದೆ ಎಂದು ಹೇಳಿಲ್ಲ. ಆ ರೀತಿ ಬಂದೂ ಇಲ್ಲ. ಏಕೆಂದರೆ ಅವರು ಡ್ಯಾನ್ಸ್, ಫ್ಯಾಟ್ ಮಾಡಬೇಕಾದರೆ ಎಷ್ಟೂ ತಾಲೀಮು ಮಾಡುತ್ತಾರೆ. ಎಂದೂ ಅವರು ತಮಗೆ ತೊಂದರೆಯಾಗುತ್ತಿದೆ ಎಂದು ಹೇಳಿಲ್ಲ. ಯಾವತ್ತು ಆಯಾಸ ಎಂದು ಹೇಳಿಲ್ಲ. ಅವರನ್ನು ನೋಡಿ ನಮಗೆ ಆಯಾಸವಾಗುವುದೆ ಹೊರತು ಅವರಿಗೆ ಎಂದೂ ಆಗಿಲ್ಲ ಎಂದು ತಿಳಿಸಿದರು.

ಪುನೀತ್ ಅವರು ಬೆಳಗ್ಗೆ ಎದ್ದ ತಕ್ಷಣ ವ್ಯಾಯಾಮ ಮಾಡಿ, ಸ್ನಾನ ಮಾಡುತ್ತಿದ್ದರು. ಅವರ ಮನೆಗೆ ನಾವು ಹೋಗಿ ಮೇಕಪ್ ಮತ್ತು ಹೇರ್ ಸ್ಟೈಲ್ ಮಾಡಿಯೇ ನಾವು ಅಲ್ಲಿಂದ ಹೋಗುತ್ತಿದ್ದೆವು. ಇದೇ ಅವರು ದಿನದ ರೂಟಿನ್ ಆಗಿತ್ತು ಎಂದು ತಿಳಿಸಿದರು.

ಪುನೀತ್ ಅವರು ಎಲ್ಲೇ ಹೋದರು ಮೊದಲು ಕೇಳುತ್ತಿದ್ದಿದ್ದು, ಸರ್ಕಾರಿ ಶಾಲೆ ಹೇಗಿದೆ ಎಂದು. ಅಲ್ಲಿ ಅವರಿಗೆ ಏನು ಅವಶ್ಯಕತೆ ಇದೆ. ಕಂಪ್ಯೂಟರ್ ಬೇಕಾ? ಶೋಸ್ ಬೇಕಾ ಎಂಬುದನ್ನು ಮೊದಲು ಅವರು ತಿಳಿದುಕೊಳ್ಳುತ್ತಿದ್ದರು. ನಂತರ ಅದಕ್ಕೆ ಏನು ಬೇಕು ಅದನ್ನು ಅವರು ಮಾಡುತ್ತಿದ್ದರು ಎಂದು ದಾನಗುಣವನ್ನು ವಿವರಿಸಿದರು. ನನಗೆ ಅಥವಾ ಇನ್ನೊಬ್ಬರಿಗೆ ಈ ವಿಚಾರವನ್ನು ಅವರು ಹೇಳಿ ಕೆಲಸ ಮಾಡಿ ಮುಗಿಸುತ್ತಾರೆ. ಕೆಲವೊಮ್ಮೆ ಅವರು ಮಾಡಿದ ಕೆಲಸ ಪಕ್ಕದಲ್ಲಿ ಇರುವವರಿಗೂ ಸಹ ತಿಳಿಯುವುದಿಲ್ಲ. ಒಂದು ಕೈಯಲ್ಲಿ ಮಾಡಿದ ದಾನ ಇನ್ನೊಂದು ಕೈಗೆ ಗೊತ್ತಾಗಬಾರದು ಎಂಬುದಕ್ಕೆ ಅವರು ಉತ್ತಮ ಉದಾಹರಣೆ ಎಂದರು.

ಪುನೀತ್ ಅವರು ಕೋಪಗೊಂಡಿದ್ದು, ಏರುಧ್ವನಿಯಲ್ಲಿ ಮಾತನಾಡಿದ್ದು, ನನಗೆ ಗೊತ್ತೇ ಇಲ್ಲ. ಅವರು ಯಾವಾಗಲೂ ನನ್ನನ್ನು ಭೇಟಿಯಾದಾಗ ಸರ್ ಊಟ ಮಾಡಿದ್ರಾ? ಕಾಫಿ ಆಯ್ತ ಎಂದು ಕೇಳುತ್ತಿದ್ದರು. ನಮ್ಮ ಬಗ್ಗೆ ಅವರಿಗೆ ಹೇಳದೆಯೇ ಎಲ್ಲ ಗೊತ್ತಗುತ್ತಿತ್ತು. ಅವರು ಮನುಷ್ಯರು ಎನ್ನುವುದಕ್ಕಿಂತ ನಮಗೆಲ್ಲ ಅವರು ದೇವರು ಎಂದು ಹೇಳಿದರು.

ಕೊರೊನಾ ದಿನಗಳಲ್ಲಿ ನಮಗೆ ಕೆಲಸ ಇಲ್ಲದಿದ್ದಾಗ ನಮ್ಮೆಲ್ಲರನ್ನು ಮೇಡಂ ಮತ್ತೆ ಬಾಸ್ ನೋಡಿಕೊಂಡಿದ್ದಾರೆ. 2 ವರ್ಷ ನಮ್ಮನ್ನ ಅವರೇ ನೋಡಿಕೊಂಡಿದ್ದರು. ನಮಗೆ ಬೇಕಾದ ಹಣವನ್ನು ಅವರೇ ಅಕೌಂಟ್ ಗೆ ಹಾಕುತ್ತಿದ್ದರು. ಪ್ರಸ್ತುತ ಆ ರೀತಿ ಜನರು ಎಲ್ಲಿ ಇದ್ದಾರೆ. ಮೇಡಂ ಮತ್ತು ಬಾಸ್ ಎಲ್ಲರಿಗೂ ತುಂಬಾ ಸಹಾಯ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಅಪ್ಪುರನ್ನು ಪ್ರತಿ ದಿನವೂ ಆರಾಧಿಸೋಣ: ರಮ್ಯಾ

ಒಂದು ವೇಳೆ ಗುಂಪಿನಲ್ಲಿ ಯಾರಾದರೂ ಅವರಿಗೆ ಸಹಾಯ ಕೇಳಿದರೆ ನಮಗೆ ಸೂಕ್ಷ್ಮವಾಗಿ ಹೇಳುತ್ತಿದ್ದರು. ಆಗ ನಮ್ಮ ಬಳಿ ಅವರ ನಂಬರ್ ತೆಗೆದುಕೊಂಡು ಅವರು ಏನು ಕೆಲಸ ಮಾಡುತ್ತಿದ್ದೇರೆ, ವಿಳಾಸ ತಿಳಿದುಕೊಳ್ಳಿ ಎಂದು ಹೇಳುತ್ತಿದ್ದರು. ನಂತರ ಯಾರಿಗೂ ತಿಳಿಯದಂತೆ ಅವರಿಗೆ ಸಹಾಯ ಮಾಡುತ್ತಿದ್ದರು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *