ಅಭಿನಂದನ್ ಬಿಡುಗಡೆಗಾಗಿ ಪಾಕಿಗೆ ಎಚ್ಚರಿಕೆ ನೀಡಿದ್ವಿ: ಮೋದಿ

Public TV
2 Min Read

ಗಾಂಧಿನಗರ: ವಾಯುಸೇನೆಯ ಪೈಲಟ್ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕು. ಒಂದು ವೇಳೆ ಸುರಕ್ಷಿತವಾಗಿ ಒಪ್ಪಿಸದೇ ಇದ್ದಲ್ಲಿ ನಂತರ ನಡೆಯುವ ಪರಿಣಾಮಗಳನ್ನು ಎದುರಿಸಲು ನೀವು ಸಿದ್ಧರಾಗಿರಬೇಕು ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ವಿಚಾರವನ್ನು ಪ್ರಧಾನಿ ಮೋದಿ ಬಹಿರಂಗ ಪಡಿಸಿದ್ದಾರೆ.

ಗುಜರಾತಿನ ಪಠಣ್‍ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಪೈಲಟ್ ಪಾಕ್ ವಶದಲ್ಲಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿತ್ತು. ಈ ವೇಳೆ ಸರ್ಕಾರ ಸುದ್ದಿಗೋಷ್ಠಿ ನಡೆಸಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿತ್ತು ಎಂದು ಮೋದಿ ತಿಳಿಸಿದರು.

“ಒಂದು ವೇಳೆ ನಮ್ಮ ಪೈಲಟ್‍ಗೆ ಏನಾದರೂ ತೊಂದರೆಯಾದಲ್ಲಿ ಆ ನಂತರ ಪರಿಸ್ಥಿತಿ ಹೇಗಿರುತ್ತದೆ ಅಂದರೆ ಇಡೀ ವಿಶ್ವಕ್ಕೆ ಈ ಪರಿಸ್ಥಿತಿಗೆ ಮೋದಿಯೇ ಕಾರಣ ಎಂದು ಹೇಳಬೇಕಾಗುತ್ತದೆ” ಎನ್ನುವ ಕಠಿಣ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದ್ದೇವು ಎಂದು ಹೇಳಿದರು.

“ಈಗ ಪರಿಸ್ಥಿತಿ ಏನಾದರೂ ವಿಕೋಪಕ್ಕೆ ಹೋದರೆ 12 ಕ್ಷಿಪಣಿಗಳ ಮೂಲಕ ಮೋದಿ ದಾಳಿ ನಡೆಸಲು ಸಿದ್ಧವಾಗಿದ್ದಾರೆ. ಒಂದು ವೇಳೆ ಎರಡನೇ ದಿನ ಪಾಕಿಸ್ತಾನ ಭಾರತದ ಪೈಲಟ್ ಅಭಿನಂದನ್ ಅವರನ್ನು ಬಿಡುಗಡೆ ಮಾಡದೇ ಇದ್ದರೆ ಆ ರಾತ್ರಿ ಪಾಕಿಸ್ತಾನದ ಪಾಲಿಗೆ ಕರಾಳ ರಾತ್ರಿ ಆಗಲಿದೆ” ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯ ವಿಚಾರವನ್ನು ತಮ್ಮ ಭಾಷಣದಲ್ಲಿ ಮೋದಿ ಪ್ರಸ್ತಾಪಿಸಿದರು.

ಈ ಹೇಳಿಕೆಯನ್ನು ಅಮೆರಿಕ ಹೇಳಿದ್ದು ಹೊರತು ನಾನು ಹೇಳಿಲ್ಲ. ಈ ಸಮಯದಲ್ಲಿ ನಾನು ಏನು ಹೇಳುವುದಿಲ್ಲ. ಸೂಕ್ತ ಸಮಯ ಬಂದಾಗ ನಾನೇ ಈ ವಿಚಾರವನ್ನು ಬಹಿರಂಗ ಪಡಿಸುತ್ತೇನೆ ಎಂದು ಮೋದಿ ತಿಳಿಸಿದರು.

ಭಾಷಣದಲ್ಲಿ ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಪ್ರಸ್ತಾಪಿಸಿದ ಮೋದಿ, ಪ್ರಧಾನಿ ಸೀಟ್ ಇರುತ್ತದೋ ಇಲ್ಲವೋ ಗೊತ್ತಿಲ್ಲ. ನಾನು ಇರುವವರೆಗೂ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ. ಒಂದೋ ನಾನು ಜೀವಂತವಾಗಿರಬೇಕು ಇಲ್ಲವೇ ಉಗ್ರರು ಜೀವಂತವಾಗಿರಬೇಕು. ಈ ನಿರ್ಧಾರವನ್ನು ನಾನು ಈಗಾಗಲೇ ಕೈಗೊಂಡಾಗಿದೆ ಎಂದು ತಿಳಿಸಿದರು.

ಗುರುವಾರ ರಾಜ್ಯದಲ್ಲಿ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ, ಈ ರಾಜ್ಯದ ಮಣ್ಣಿನ ಮಗನಾದ ನನ್ನನ್ನು ರಕ್ಷಿಸುವ ಕರ್ತವ್ಯ ನಿಮ್ಮ ಮೇಲಿದೆ. ಹೀಗಾಗಿ ಎಲ್ಲ 26 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿಕೊಂಡರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಆದರೆ ಗುಜರಾತಿನಲ್ಲಿ 26 ಸ್ಥಾನ ಗೆಲ್ಲದೇ ಇದ್ದಲ್ಲಿ ಮೇ 23ರ ಟಿವಿ ವಾಹಿನಿಗಳಲ್ಲಿ ಈ ವಿಚಾರದ ಬಗ್ಗೆ ಮುಖ್ಯ ಚರ್ಚೆಯಾಗುತ್ತದೆ ಎಂದು ವ್ಯಂಗ್ಯವಾಗಿ ಹೇಳಿದರು.

ಬಾಲಕೋಟ್ ನಲ್ಲಿರುವ ಉಗ್ರರ ನೆಲೆಯ ಮೇಲೆ ದಾಳಿ ನಡೆಸಿದ ಬಳಿಕ ಫೆ.27 ರಂದು ಪಾಕಿಸ್ತಾನ ಭಾರತದ ಮೇಲೆ ವಾಯು ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಪಾಕ್ ವಿಮಾನದ ಜೊತೆಗಿನ ಡಾಗ್ ಫೈಟ್ ಕಾಳಗದಲ್ಲಿ ಎಫ್-16 ವಿಮಾನವನ್ನು ಅಭಿನಂದನ್ ಹೊಡೆದು ಉರುಳಿಸಿದ್ದರು. ಈ ವೇಳೆ ಪಾಕ್ ಅಭಿನಂದನ್ ಅವರಿದ್ದ ಮಿಗ್ -21 ವಿಮಾನದ ಮೇಲೆ ಕ್ಷಿಪಣಿ ದಾಳಿ ಮಾಡಿತ್ತು. ಪರಿಣಾಮ ಅಭಿನಂದನ್ ವಿಮಾನ ಪತನಗೊಂಡು ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಬಿದ್ದಿತ್ತು. ನಂತರ ಪಾಕ್ ಸೇನೆ ಅಭಿನಂದನ್ ಅವರನ್ನು ವಶಕ್ಕೆ ಪಡೆದು ಮಾರ್ಚ್ 1 ರಂದು ರಾತ್ರಿ ಬಿಡುಗಡೆ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *