ಆಫರ್ ನೀಡಿದ್ದಕ್ಕೆ ಸಿದ್ದರಾಮಯ್ಯಗೆ ಥ್ಯಾಂಕ್ಸ್: ಹೆಚ್.ವಿಶ್ವನಾಥ್

Public TV
2 Min Read

– ಹೈಕಮಾಂಡ್ ಮೆಚ್ಚಿಸಲು ಡಿಕೆಶಿ ಓಡಾಟ
– ದೇವೇಗೌಡರಿಗೆ ಅನ್ಯಾಯ ಮಾಡಿಲ್ಲ

ಬೆಂಗಳೂರು: ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ನಲ್ಲಿರುವ ಹೆಚ್.ವಿಶ್ವನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಮಾಜಿ ಸಿಎಂ ಸಿದ್ದರಾಮಯ್ಯನವರ ಸುದ್ದಿಗೋಷ್ಠಿ ಕುರಿತು ಪ್ರತಿಕ್ರಿಯಿಸಿದರು.

ನಾವು ಯಾರು ಮಂತ್ರಿಯಾಗಲು ಅಧಿಕಾರಬೇಕೆಂದು ಹೊರ ಬಂದವರಲ್ಲ. ಯಾವುದೇ ಮಂತ್ರಿ ಸ್ಥಾನದ ಆಸೆಗಾಗಿ ರಾಜೀನಾಮೆ ನೀಡಿಲ್ಲ. ಸರ್ಕಾರ ಆಡಳಿತ ವೈಖರಿ ವಿರೋಧಿಸಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಆಫರ್ ನೀಡಿದ್ದಕ್ಕೆ ಸಿದ್ದರಾಮಯ್ಯನವರಿಗೆ ನನ್ನ ಕಡೆಯಿಂದ ಥ್ಯಾಂಕ್ಸ್. ಇಂದು ಬೆಳಗ್ಗೆಯಿಂದ ರೂಮ್ ಬಿಟ್ಟು ಹೊರಗಡೆ ಹೋಗಿಲ್ಲ. ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಅವರು ಮುಂಬೈಗೆ ಬಂದಿರುವ ಮಾಹಿತಿ ನನಗಿಲ್ಲ ಎಂದು ವಿಶ್ವನಾಥ್ ತಿಳಿಸಿದರು.

 

ಶಾಸಕ ಶಿವಲಿಂಗೇಗೌಡರು ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಜೆಡಿಎಸ್ ವರಿಷ್ಠ ದೇವೇಗೌಡರ ರಾಜಕೀಯ ಸಹಕಾರವನ್ನು ಮರೆಯುವಂತಹ ವ್ಯಕ್ತಿ ನಾನಲ್ಲ. ಇತ್ತೀಚೆಗೆ ರಾಜಕೀಯದಲ್ಲಾದ ಬದಲಾವಣೆ, ನಮಗಾದ ಅವಮಾನಗಳ ಬಗ್ಗೆ ದೇವೇಗೌಡರಿಗೆ ಗೊತ್ತಿದೆ. ನಾನು ಇಂದು ಸಹ ದೇವೇಗೌಡರಿಗೆ ಗೌರವ ನೀಡುತ್ತೇನೆ. ನಾನು ರಾಜೀನಾಮೆ ನೀಡಿ ದೇವೇಗೌಡರಿಗೆ ಅನ್ಯಾಯ ಮಾಡಿದ್ದೇನೆ ಎಂಬ ಅಭಿಪ್ರಾಯ ನನಗಿಲ್ಲ ಎಂದರು.

ಯಾರು ಬಂದು ನಮ್ಮನ್ನು ಭೇಟಿ ಮಾಡಿದರೂ ಏನೂ ಉಪಯೋಗವಿಲ್ಲ. ಸರ್ಕಾರ ಉಳಿಸಿಕೊಳ್ಳಲು ನಾನು ಪ್ರಯತ್ನ ಮಾಡುತ್ತಿದ್ದೇನೆ ಎಂಬುದನ್ನು ಎಐಸಿಸಿಗೆ ತೋರಿಸಿಕೊಳ್ಳಲು ಸಚಿವ ಡಿ.ಕೆ.ಶಿವಕುಮಾರ್ ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾವು ಗೋವಾಕ್ಕೆ ಹೋಗುತ್ತಿಲ್ಲ. ಮುಂಬೈನ ಸೊಫಿಟೆಲ್ ಹೋಟೆಲ್ ನಲ್ಲಿ ಇದ್ದೇವೆ. ನಾಳೆ ಸ್ಪೀಕರ್ ರಮೇಶ್ ಕುಮಾರ್ ಕರೆದರೆ ಬೆಂಗಳೂರಿಗೆ ಬರುತ್ತೇವೆ. ಬೆಂಗಳೂರಿಗೆ ಬರುವ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ. ಊಟಕ್ಕೆ ತೆರಳಿದಾಗ ಎಲ್ಲರ ಜೊತೆ ಕುಳಿತು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಶಿವಲಿಂಗೇಗೌಡರು ಹೇಳಿದ್ದೇನು?
ಪಕ್ಷೇತರ ಶಾಸಕ ನಾಗೇಶ್ ಸಂಪುಟ ಸೇರ್ಪಡೆಗೊಂಡು ಎಂಟು ದಿನ ಕಳೆದಿಲ್ಲ. ಇಂದು ರಾಜೀನಾಮೆ ನೀಡಿ ವಿಮಾನ ಹತ್ತಿದ್ದಾನೆ. ಪ್ರಜಾಪ್ರಭುತ್ವಕ್ಕೆ ಗೌರವ ನೀಡದೇ ಅತ್ತಿಂದ ಇತ್ತ ಅಂತಾ ಓಡಾಡಿಕೊಂಡಿದ್ದಾರೆ. ರಾಜೀನಾಮೆ ನೀಡಿರುವ ಎಲ್ಲ 14 ಶಾಸಕರಿಗೂ ಈ ಮಾತು ಅನ್ವಯವಾಗುತ್ತದೆ. ನಮ್ಮ ಪಕ್ಷದ ಹೆಚ್.ವಿಶ್ವನಾಥ್ ಯಾಕೆ ಹೋದರೋ, ಯಾಕೆ ಮಣ್ಣು ತಿಂದರೋ ನನಗೆ ಗೊತ್ತಿಲ್ಲ. ದೇವೇಗೌಡರು ನನಗೆ ರಾಜಕೀಯ ಪುನರ್ಜನ್ಮ ನೀಡಿದ ಪಿತಾಮಹರು. ನನಗೆ ರಾಜ್ಯಾಧ್ಯಕ್ಷ ಪಟ್ಟವನ್ನು ನೀಡಿದರು. ಇಂತಹ ಮಹಾನ್ ನಾಯಕನನ್ನು ಮರೆಯೋದು ಉಂಟಾ ಅಂತಾ ಹೇಳಿದ್ದ ಹೆಚ್.ವಿಶ್ವನಾಥ್ ದ್ರೋಹ ಮಾಡಿದರು ಎಂದು ಶಿವರಾಮೇಗೌಡರು ವಾಗ್ದಾಳಿ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *