ಮೈತ್ರಿ ಸರ್ಕಾರ ಬದುಕಿಸುವ ಋಷಿಮುನಿ ಇಲ್ಲ: ಹೆಚ್.ವಿಶ್ವನಾಥ್

Public TV
2 Min Read

– ಕರ್ನಾಟಕದಲ್ಲಿ ರಾಕ್ಷಸ ರಾಜಕಾರಣ ಅಂತ್ಯವಾಗ್ಬೇಕು
– ಡಿಕೆಶಿ ಓರ್ವ ಶೋಮ್ಯಾನ್

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್ ನಿಂದ ಸಿಎಂ ಆಫರ್ ಸಿಕ್ಕಿದ್ದು ನಿಜ ಎಂದು ಕಾಂಗ್ರೆಸ್ ಟ್ರಬಲ್ ಶೂಟರ್, ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅತೃಪ್ತ ಶಾಸಕ ಹೆಚ್.ವಿಶ್ವನಾಥ್, ಮುಗಿಯುವ ಹಂತದಲ್ಲಿ ಈ ರೀತಿಯ ಹೇಳಲಾಗಿದೆ. ಮೈತ್ರಿ ಧರ್ಮ ಕರ್ನಾಟಕ ರಾಜಕಾರಣದಲ್ಲಿ ಮುಗಿದು ಹೋಗಿದೆ. ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷದ ನಾಯಕರನ್ನು ಹೀನಾಯವಾಗಿ ಸೋಲಿಸಲಾಗಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಸೋಲಿಗೆ ಕಾರಣವೇನು ಎಂಬುದರ ಬಗ್ಗೆಯೂ ಚರ್ಚೆ ಆಗಲಿಲ್ಲ. ಇದೀಗ ಅಧಿಕಾರಕ್ಕಾಗಿ ಸಿಎಂ ಸ್ಥಾನ ಬಿಟ್ಟುಕೊಡ್ತೀವಿ ಅನ್ನೋದು ಮೂರ್ಖತನವಾಗುತ್ತದೆ. ಕರ್ನಾಟಕದಲ್ಲಿಯ ರಾಕ್ಷಸ ರಾಜಕಾರಣ ಕೊನೆಯಾಗಿಸಲು ಈ ಮೈತ್ರಿ ಸರ್ಕಾರ ಹೋಗಬೇಕಿದೆ. ಜೆಡಿಎಸ್ ಆಫರ್ ನೀಡಿದ್ರೂ ಕಾಂಗ್ರೆಸ್‍ನಲ್ಲಿ ಸಿಎಂ ಆಗಲು ಯಾರು ತಯಾರಿಲ್ಲ ಎಂದು ವ್ಯಂಗ್ಯವಾಡಿದರು.

ಋಷಿಮುನಿಗಳಿಲ್ಲ:
ಕೊನೆ ಗಳಿಗೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಈ ರೀತಿ ಹೇಳುತ್ತಿದ್ದಾರೆ. ಸತ್ತ ಹೆಣವನ್ನು ಬದುಕಿಸಲು ಋಷಿಗಳು ಯಾರು ನಮ್ಮ ಬಳಿ ಇಲ್ಲ. ಸಾಯುತ್ತಿರುವ ಸರ್ಕಾರವನ್ನು ಬದುಕಿಸಲು ಕಮಂಡಲದಿಂದ ನೀರು ತೆಗೆದು ಚುಮುಕಿಸಲು ಋಷಿಗಳು ಯಾರು ಇಲ್ಲ ಎಂಬುದನ್ನು ಎರಡೂ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ. ಸಿಎಂ ಆಫರ್ ಕುರಿತು ಹೈಕಮಾಂಡ್ ಮಟ್ಟದಲ್ಲಿಯೂ ಚರ್ಚೆಗಳು ನಡೆದರೂ ಏನು ಮಾಡಲು ಸಾಧ್ಯವಿಲ್ಲ. ಅಧರ್ಮದಲ್ಲಿ ಹೋಗುತ್ತಿರುವ ಮೈತ್ರಿ ಸರ್ಕಾರ ಕೊನೆಯಾಗಬೇಕಿದೆ. ಸಿದ್ದರಾಮಯ್ಯನವರು ಸಿಎಂ ಆದ್ರೂ ಯಾವ ಶಾಸಕರು ತಮ್ಮ ರಾಜೀನಾಮೆಯನ್ನು ಹಿಂಪಡೆಯಲ್ಲ. ಎಲ್ಲರ ನಿರ್ಧಾರ ಅಚಲವಾಗಿದ್ದು, ಯಾವ ಶಾಸಕರು ಸ್ವಹಿತಾಸಕ್ತಿಗಾಗಿ ರಾಜೀನಾಮೆ ನೀಡಿಲ್ಲ. ಯಾರಿಗೋ ಅಧಿಕಾರ ಸಿಗಬೇಕು ಅಥವಾ ಅಧಿಕಾರ ಕೊಡಿಸಬೇಕು ಎಂದು ನಾವು ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ರೆಸಾರ್ಟಿನಲ್ಲಿರುವ ಶಾಸಕರನ್ನು ಫ್ರೀಯಾಗಿ ಬಿಟ್ಟರೆ ಹಲವರು ನಮ್ಮನ್ನು ಸೇರಿಕೊಳ್ಳಲಿದ್ದಾರೆ. ಹಾಗಾಗಿ ಎಲ್ಲರನ್ನು ರೆಸಾರ್ಟಿನ ಬಂಧನದಲ್ಲಿ ಇರಿಸಲಾಗಿದೆ. ಇಲ್ಲಿ ಯಾರು ಮಂತ್ರಿಯಾಗುವ ಉದ್ದೇಶದಿಂದ ರಾಜೀನಾಮೆ ನೀಡಿಲ್ಲ. ಡಿ.ಕೆ.ಶಿವಕುಮಾರ್ ಓರ್ವ ಶೋಮ್ಯಾನ್. ಪ್ರಚಾರಕ್ಕಾಗಿ ಈ ರೀತಿಯ ಮಾತುಗಳನ್ನಾಡುತ್ತಾರೆ. ಮುಂಬೈನಲ್ಲಿ ಬಂದರೂ ಯಾರನ್ನು ಭೇಟಿಯಾಗಿಲ್ಲ. ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡುವುದು. ಫೋಟೋ ತೆಗೆಸಿಕೊಳ್ಳುವುದು ಶಿವಕುಮಾರ್ ಅವರ ಕೆಲಸ ಎಂದು ಹೆಚ್.ವಿಶ್ವನಾಥ್ ಟೀಕಿಸಿದರು.

ಡಿಕೆಶಿ ಹೇಳಿದ್ದೇನು?
ಕಾಂಗ್ರೆಸ್ ಪಕ್ಷದ ಯಾರಾದರೂ ಸಿಎಂ ಆಗಬಹುದು. ಒಟ್ಟಿನಲ್ಲಿ ಮೈತ್ರಿ ಸರ್ಕಾರ ಉಳಿಯಬೇಕು ಎಂದು ಜೆಡಿಎಸ್‍ನವರು ನಮ್ಮ ಬಳಿ ಕೇಳಿಕೊಂಡಿರುವುದು ನಿಜ. ಕಾಂಗ್ರೆಸ್‍ನವರು ಯಾರಾದರೂ ಮುಖ್ಯಮಂತ್ರಿಯಾಗಿ ಎಂದು ಜೆಡಿಎಸ್‍ನವರು ಮುಕ್ತ ಕಂಠದಿಂದ ಹೇಳಿದ್ದಾರೆ. ಈ ಕುರಿತು ಹೈಕಮಾಂಡ್‍ಗೂ ಜೆಡಿಎಸ್ ನಾಯಕರು ತಿಳಿಸಿದ್ದಾರೆ. ಇಂತಹ ವಿಷಯಗಳನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಾನಾಗಲಿ(ಡಿ.ಕೆ.ಶಿವಕುಮಾರ್), ಡಾ.ಜಿ.ಪರಮೇಶ್ವರ್ ಇಲ್ಲವೇ ಸಿದ್ದರಾಮಯ್ಯನವರು ಯಾರಾದರೂ ಸರಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯಾಗಬಹುದು. ಒಟ್ಟಿನಲ್ಲಿ ಮೈತ್ರಿ ಸರ್ಕಾರ ಉಳಿಯಬೇಕೆಂದು ಕೇಳಿಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *