ನಾನ್ಯಾಕೆ ಕಾಂಗ್ರೆಸ್ ಬಿಟ್ಟೆ ಅಂತ ಸಿದ್ದರಾಮಯ್ಯನವರನ್ನೇ ಕೇಳಿ: ಎಚ್.ವಿಶ್ವನಾಥ್

Public TV
2 Min Read

– ಸಿದ್ದರಾಮಯ್ಯ ನಾನು ಕಣ್ಣಿನಲ್ಲೇ ಮಾತನಾಡುತ್ತೇವೆ

ಬೆಂಗಳೂರು: ನಾನ್ಯಾಕೆ ಕಾಂಗ್ರೆಸ್ ಬಿಟ್ಟೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯನವರನ್ನೇ ಕೇಳಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

ನಗರದ ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಗ್ರಹಚಾರಕ್ಕೆ ಅವತ್ತು ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿತ್ತು. ಏನು ಮಾಡೋದು ಹೇಳಿ? ಆದರೆ ಈಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಪ್ರಬುದ್ಧ ನಾಯಕರಾಗಿದ್ದಾರೆ. ಹೀಗಾಗಿ ಅವರನ್ನು ನಾವು ಒಪ್ಪಿಕೊಂಡಿದ್ದೇವೆ ಎಂದರು.

ಸಮನ್ವಯ ಸಮಿತಿಯಲ್ಲಿ ಸ್ಥಾನ ಪಡೆಯದ ವಿಚಾರವಾಗಿ ಮಾತನಾಡಿದ ಅವರು, ಸಮಿತಿಯಲ್ಲಿ ಎರಡು ಪಕ್ಷಗಳಿವೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ನಾನು ಹೊರಗೆ ಇದ್ದೇವೆ. ಬಾಗಿಲನ್ನು ತೆರೆದು ಕೈ ಮುಗಿದು ನಿಂತಿದ್ದೇವೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ನಾನು ಕಣ್ಣಿನಲ್ಲೇ ಮಾತನಾಡುತ್ತೇವೆ. ಯಾವುದೇ ಭಿನ್ನಾಭಿಪ್ರಾಯ ನಮ್ಮಲ್ಲಿ ಇಲ್ಲ. ಮುಂದೆ ಇಬ್ಬರು ಕುಳಿತು ಮಾತನಾಡುತ್ತೇವೆ. ಅವರನ್ನ ಬೆಳೆಸಿದ್ದು ಒಕ್ಕಲಿಗರು. ಈ ಮೂಲಕ ಅಹಿಂದ ವರ್ಗಕ್ಕೆ ಬೆಂಬಲ ಸಿಕ್ಕಿದೆ. ಇದರಲ್ಲಿ ಅವಮಾನ ಎಲ್ಲಿಂದ ಬರುತ್ತೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯು ಬಿಜೆಪಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ. ನಮಗೆ ಯಾವುದೇ ಪ್ರತಿಷ್ಠೆ ಇಲ್ಲ. ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಅಂತ ಹೇಳಿಕೊಂಡು ಪ್ರತಿಷ್ಠೆ ತೋರಲ್ಲ. ಜನರು ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ ಎಂದರು.

ಮಂಡ್ಯದಲ್ಲಿ ಕಾಂಗ್ರೆಸ್-ಬಿಜೆಪಿ ಬಾವುಟ ಒಟ್ಟಿಗೆ ಪ್ರಚಾರ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಿಶ್ವನಾಥ್ ಅವರು, ಇದರಲ್ಲಿ ತಪ್ಪೇನಿದೆ? ಒಟ್ಟಿಗೆ ಬಾವುಟ ಹಿಡಿದರೆ ವೋಟ್ ಬೀಳುತ್ತೆ ಅಂತ ಹೇಳುವುದಕ್ಕೆ ಆಗುತ್ತಾ? ಜನರು ಅದೆಲ್ಲನ್ನು ತೀರ್ಮಾನ ಮಾಡುತ್ತಾರೆ. ಸುಮಲತಾ ಬಿಜೆಪಿ ಅಭ್ಯರ್ಥಿಯಾಗಿದ್ದು, ಬಿಜೆಪಿ ಅವರಿಗೆ ಬೆಂಬಲ ನೀಡಿದೆ ಎಂದರು.

ಎಚ್.ಡಿ.ದೇವೇಗೌಡರು ಇಡೀ ಭಾರತವನ್ನ ಪ್ರತಿನಿಧಿಸಿದ್ದರು. ಅವರು ಹಾಸನ, ಮಂಡ್ಯ, ತುಮಕೂರು ಅಂತ ಸೀಮಿತ ಆಗಲ್ಲ. ಅವರಿಗೆ ಇಡೀ ಭಾರತವೇ ಕ್ಷೇತ್ರವಾಗಿದ್ದು, ಎಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂದು ದೇವೇಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದನ್ನು ಸಮರ್ಥಿಸಿಕೊಂಡರು.

ದೋಸ್ತಿ ಸರ್ಕಾರದಲ್ಲಿ ಮಂಡ್ಯಕ್ಕೆ ಹೆಚ್ಚು ಅನುದಾನ ಕೊಟ್ಟರೆ ಏನು ತಪ್ಪು? ಬೇರೆ ಜಿಲ್ಲೆಗಳಿಗೂ ಅನುದಾನ ಕೊಟ್ಟಿದ್ದಾರೆ. ರಾಜ್ಯ ಯಾವ ಜಿಲ್ಲೆಗೂ ಅನ್ಯಾಯ ಮಾಡಿಲ್ಲ. ಆದರೆ ಹಾಸನ ಹಾಗೂ ಮಂಡ್ಯಗೆ ಸ್ವಲ್ಪ ಹೆಚ್ಚು ಅನುದಾನ ಕೊಟ್ಟಿರಬಹುದು ಎಂದರು.

ಲೋಕಸಭೆ ಚುನಾವಣೆ ಬಳಿಕವೂ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇರುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ನಾಳೆ ಏನಾಗುತ್ತೋ ನೋಡೋಣ. ಈಗ ಅದು ಬೇಡ ಎಂದು ತಿಳಿಸಿದರು.

ರಾಜ್ಯದ ಜನರು ಮಂಡ್ಯದಿಂದ ಬೇಜಾರು ಆಗಿಲ್ಲ. ಆದರೆ ಮಂಡ್ಯ ಬಗ್ಗೆ ತೋರಿಸುತ್ತಿರುವವರ ಬಗ್ಗೆ ಬೇಸರವಾಗಿದ್ದಾರೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ.ದೇವೇಗೌಡ, ಬಿಜೆಪಿ ಸಂಸದ ಸದಾನಂದಗೌಡ, ಬಿ.ಎಸ್.ಯಡಿಯೂರಪ್ಪ ಬಗ್ಗೆಯೂ ಯಾರು ತೋರಿಸುತ್ತಿಲ್ಲ. ಕೇವಲ ಮಂಡ್ಯ, ಮಂಡ್ಯ ಅಂತ ತೋರಿಸುತ್ತಿದ್ದಾರೆ ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು.

ನನ್ನ ಮೇಲೆ ಯಾಕೆ ಐಟಿ ದಾಳಿ ಮಾಡುತ್ತಾರೆ. ನನ್ನ ಬಳಿ ಏನಿದೆ? ನಾವು ತಿರುಗಾಡುವವರು. ನನ್ನ ಬಳಿಯೂ ಏನು ಇಲ್ಲ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಬಳಿಯೂ ಏನು ಇಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *