ಅಧಿಕಾರಿಗಳೆಲ್ಲ ಕಾಂಗ್ರೆಸ್ ಸರ್ಕಾರವೇ ಇರುತ್ತೆ ಅಂದ್ಕೊಂಡಿದ್ದಾರೆ: ರೇವಣ್ಣ ಗುಡುಗು

Public TV
1 Min Read

ಹಾಸನ: ಅಧಿಕಾರಿಗಳೆಲ್ಲ ಕಾಂಗ್ರೆಸ್ (Congress) ಸರ್ಕಾರವೇ ಇರುತ್ತೆ ಎಂದುಕೊಂಡಿದ್ದಾರೆ. ನನ್ನ ಕೈಗೆ ಸಿಗದೇ ಎಲ್ಲಿಗೆ ಹೋಗ್ತಾರೆ? ಸಮಯ ಬರುತ್ತೆ, ನಾನು ಇವರನ್ನ ಬಿಡ್ತಿನಾ ಎಂದು ಡಿಸಿ, ಎಸ್‍ಪಿ, ಜಿ.ಪಂ. ಸಿಇಓ, ಎಸಿ ವಿರುದ್ಧ ಮಾಜಿಸಚಿವ ಹೆಚ್.ಡಿ.ರೇವಣ್ಣ (H.D Revanna) ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿ, ಎಸ್‍ಪಿಗೆ ಬಡ್ತಿ ನೀಡಿದ್ದಾರೆ. ಇವರೆಲ್ಲ ಕಾಂಗ್ರೆಸ್ ಸರ್ಕಾರವೇ ಇರುತ್ತೆ ಎಂದುಕೊಂಡಿದ್ದಾರೆ. ನಾನು ಹೆದರಿ ಓಡಿ ಹೋಗುತ್ತೇನೆ, ದೇವೇಗೌಡರ ಕುಟುಂಬದ್ದು ಮುಗಿದೇ ಹೋಯಿತು ಎಂದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ದೇಶದ ರಾಜಕೀಯ ನೋಡಿದ್ದೇನೆ. ನಾನು, ಸೋತಿದ್ದೇನೆ, ಗೆದ್ದಿದ್ದೇನೆ. ಕೇಸ್ ಹಾಕಿದರೆ ಹೆದರುತ್ತೇನೆ ಎಂದುಕೊಂಡಿದ್ದಾರೆ. ಇಂತಹ ಬಹಳ ಜನರನ್ನ ನೋಡಿದ್ದೇನೆ. ಇವರು ಮಾಡಿರುವ ಅಕ್ರಮವನ್ನು ಧಾರಾವಾಹಿ ತರ ಬಿಡುಗಡೆ ಮಾಡ್ತಿನಿ ಎಂದಿದ್ದಾರೆ.

ದೇವೇಗೌಡರು (H.D Devegowda) 94 ನೇ ವಯಸ್ಸಿನಲ್ಲಿ ರಾಜ್ಯಸಭೆಗೆ ಒಂದು ದಿನ ತಪ್ಪಿಸಿಕೊಳ್ಳದೆ ಹಾಜರಾಗಿ ರಾಜ್ಯದ ಪರ ಧ್ವನಿ ಎತ್ತುತ್ತಿದ್ದಾರೆ. ಅವರು, ಈ ಜಿಲ್ಲೆಯ ಜನರನ್ನು ಎಂದು ಮರೆಯಲ್ಲ. ಈ ಜಿಲ್ಲೆಗೆ ಏನು ಮಾಡಬೇಕು ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.

ಜಿಲ್ಲೆಯಲ್ಲಿ ಐಐಟಿ, ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೆಲವರು ಕಬಳಿಸುತ್ತಿದ್ದಾರೆ. ಕೆಲವರು ಹಾಸನ ಜಿಲ್ಲೆಯ ಲೂಟಿ ಹೊಡೆಯುತ್ತಿದ್ದಾರೆ. ಅದನ್ನು ತಡೆಯಲು ಏನೇನು ಮಾಡಬೇಕು ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರದಿಂದ ಐಐಟಿ ಬೇರೆ ಜಿಲ್ಲೆಗೆ ಹೋಯ್ತು. ದೇವೇಗೌಡರು ಬದುಕಿರುವುದರೊಳಗೆ ಐಐಟಿ ತರಲು ಪ್ರಯತ್ನ ಮಾಡುತ್ತೇನೆ. ಅದಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Share This Article