ಹೇಡಿತನದ ರಾಜಕಾರಣ ಮಾಡದೇ, ಧೈರ್ಯವಾಗಿ ಮುಂದೆ ಬಂದು ಮಾತನಾಡಿ: ಬಿಎಸ್‍ವೈಗೆ ಎಚ್‍ಡಿಕೆ ಸವಾಲು

Public TV
3 Min Read

– ಬಿಜೆಪಿಯಿಂದ ನನ್ನ ವಿರುದ್ಧ ಐಟಿಗೆ ದೂರು ದಾಖಲು
– ದೂರು ನೀಡಿದ ವೆಂಕಟೇಶ್ ಗೌಡ ಕೆಜೆಪಿ ಕಾರ್ಯಕರ್ತ

ಬೆಂಗಳೂರು: ಹೇಡಿತನದ ರಾಜಕಾರಣ ಮಾಡಬೇಡಿ, ಧೈರ್ಯವಾಗಿ ಮುಂದೆ ಬಂದು ಮಾತನಾಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈಗೆ ಸವಾಲು ಎಸೆದಿದ್ದಾರೆ.

ತನ್ನ ವಿರುದ್ಧ ವೆಂಕಟೇಶ್ ಗೌಡ ಎಂಬವರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ನೇತೃತ್ವದಲ್ಲೆ ಈ ದೂರಿನ ಪತ್ರ ರೆಡಿಯಾಗಿದೆ. ಬಿಜೆಪಿ ಕಚೇರಿಯಿಂದಲೇ ದೂರಿನ ಪ್ರತಿ ಸಿದ್ಧವಾಗಿದೆ ಎಂದು ಆರೋಪಿಸಿದರು.

ನನ್ನ ಇಮೇಜ್ ಹಾಳು ಮಾಡಲು ಇಂತಹ ಆರೋಪ ಮಾಡ್ತಿದ್ದಾರೆ. ಪ್ರಧಾನಿ ಮಂತ್ರಿಗಳಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. 20 ಸಾವಿರ ಕೋಟಿ ರೂ. ಆರೋಪ ಮಾಡಿರುವ ಈ ಹಣವನ್ನು ಕಂಡು ಹಿಡಿದು ರೈತರ ಸಾಲ ಮನ್ನ ಮಾಡಲಿ. ತನಿಖೆ ನಡೆಸುವುದೇ ಆದರೆ ಬ್ಲಾಂಕ್ ಸ್ಟಾಂಪ್ ಪೇಪರ್ ಮೇಲೆ ಬರೆದುಕೊಡಲು ನಾನು ಸಿದ್ಧ ಎಂದು ಎಚ್‍ಡಿಕೆ ತಿಳಿಸಿದರು.

ಹೇಡಿತನದ ರಾಜಕಾರಣ:ಧೈರ್ಯವಾಗಿ ಮುಂದೆ ಬಂದು ಮಾತಾಡಿ. ಹೇಡಿತನದ ರಾಜಕಾರಣ ಮಾಡಬೇಡಿ, ಕುತಂತ್ರದ ರಾಜಕಾರಣಕ್ಕೆ ನನ್ನ ಬಲಿಪಶು ಮಾಡಲು ನೀವು ದೂರು ಕೊಟ್ಟಿದ್ದೀರಿ. ಮಂಗಳವಾರ ಮಧ್ಯಾಹ್ನ ದೂರು ನೀಡಿ ರಾತ್ರಿ ವಾಟ್ಸಪ್ ಮೂಲಕ ಮಾಧ್ಯಮದವರಿಗೆ ಸುದ್ದಿ ಕಳುಹಿಸಿದ್ದೀರಿ. ಸುದ್ದಿಗೋಷ್ಠಿ ನಡೆಸಿ ಎಲ್ಲರ ಮುಂದೆಯೇ ಆರೋಪ ಮಾಡಬಹುದಿತ್ತಲ್ಲ. ನಿಮ್ಮದು ಹೇಡಿತನದ ರಾಜಕಾರಣ. ಜನರ ಮಧ್ಯೆ ನನ್ನ ಇಮೇಜ್ ಕೆಡಿಸಲು ಇಂತಹ ಮಾರ್ಗ ಹಿಡಿಯುತ್ತಿದ್ದೀರಿ ಎಂದು ಬಿಎಸ್‍ವೈ ಅವರನ್ನು ಎಚ್‍ಡಿಕೆ ದೂರಿದರು.

ಸಂಶಯಕ್ಕಾಗಿ ಆರೋಪ: ಬಿಜೆಪಿ ಅವಧಿಯಲ್ಲಿ ನನ್ನ ವಿರುದ್ಧ ಬೇನಾಮಿ ಆಸ್ತಿ ಮಾಡಿದ ಆರೋಪ ಕೇಳಿ ಬಂದಿತ್ತು. ಆಗ ನಾನು ಈ ಸಿಬಿಐ ತನಿಖೆ ಮಾಡಿ ಎಂದು ಉಪವಾಸ ಧರಣಿ ಮಾಡಿದ್ದೆ. ಯಾಕೆ ಈಗ ನನ್ನ ವಿರುದ್ಧ ಇಂತಹ ಆರೋಪಗಳನ್ನು ಮಾಡಲಾಗ್ತಿದೆ ಅಂತ ಗೊತ್ತಿದೆ. ಸಾರ್ವಜನಿಕವಾಗಿ ನನ್ನ ವಿರುದ್ಧ ಸಂಶಯಗಳು ಬರಲಿ ಎಂದು ಸಂಚು ಮಾಡುತ್ತಿದ್ದಾರೆ. ಜನರ ಭಾವನೆ ನನ್ನ ಪರವಾಗಿದೆ ಅಂತ ಎರಡು ರಾಷ್ಟ್ರೀಯ ಪಕ್ಷಗಳಿಗೆ ಗೊತ್ತಾಗಿದೆ. ಹೀಗಾಗಿ ಎರಡು ಪಕ್ಷಗಳು ನನ್ನ ವಿರುದ್ಧ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ಒಬ್ಬ ಮನುಷ್ಯನಿಗೆ ಕಿರುಕುಳ ಕೊಡುವುದಕ್ಕೂ ಇತಿಮಿತಿ ಇದೆ. ಎಲ್ಲ ಕಿರುಕುಳಗಳನ್ನು ಸಹಿಸಿಕೊಂಡು ಬರುತ್ತಿದ್ದೇನೆ. ಎರಡೂ ರಾಷ್ಟ್ರೀಯ ಪಕ್ಷಗಳು ಚುನಾವಣೆಗೋಸ್ಕರ ನನ್ನ ವಿರುದ್ಧ ಪಿತೂರಿ ನಡೆಸುತ್ತಿವೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಎಸ್‍ಐಟಿ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ನಾನು ನಾನು ಆರೋಪಿಯೇ ಅಲ್ಲ ವ್ಯವಸ್ಥಿತವಾಗಿ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದರು.

ದೇವೇಗೌಡರು ಮುಖ್ಯಮಂತ್ರಿ ಆಗಿದಾಗಿನಿಂದ ಇಂದಿನವರೆಗೂ ನಮ್ಮ ಕುಟುಂಬದ ಬಗ್ಗೆ ತನಿಖೆ ಮಾಡಿಸಿ. ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ಪ್ರಾಮಾಣಿಕ ನಿಸ್ಪಕ್ಷಪಾತ ತನಿಖೆ ನಡೆಸಿ. ಈ ತನಿಖೆಗೆ ನಾನು ಸಿದ್ದ ಎಚ್‍ಡಿಕೆ ಬಿಎಸ್‍ವೈಗೆ ಸವಾಲು ಎಸೆದರು.

ಕೆಜೆಪಿ ಸದಸ್ಯ: ನನ್ನ ವಿರುದ್ಧ ಬೇನಾಮಿ ಆಸ್ತಿ ಆರೋಪದಲ್ಲಿ ದೂರು ನೀಡಿದ ವೆಂಕಟೇಶ್ ಗೌಡ ಈ ಮೊದಲು ಕಾಂಗ್ರೆಸ್ ನಲ್ಲಿದ್ದು ಬಳಿಕ ಕೆಜೆಪಿ ಸೇರಿದ್ದ. 2013 ರ ಚುನಾವಣೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ವೆಂಕಟೇಶ್ ಕೆಜೆಪಿ ಅಭ್ಯರ್ಥಿಯಾಗಿದ್ದ. ವೆಂಕಟೇಶ್ ಗೌಡ ಬಗ್ಗೆ ಯಡಿಯೂರಪ್ಪ ಅವರ ಬಳಿ ಸಂಪೂರ್ಣ ಮಾಹಿತಿ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ಮಾನ ಮರ್ಯಾದೆ ಇಲ್ಲ: ಪೇದೆ ಸುಭಾಷ್ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವ್ರು ಬೆಟ್ಟಿಂಗ್ ದಂಧೆ ಯಿಂದ ಪೊಲೀಸ್ ಪೇದೆ ಆತ್ಮಹತ್ಯೆ ಯತ್ನಿಸಿದ್ದಾರೆ. ಬೆಟ್ಟಿಂಗ್ ದಂಧೆ ಬಗ್ಗೆ ಎಷ್ಟುಬಾರಿ ಹೇಳಿದ್ದೇನೆ. ಯಾವುದೇ ಕ್ರಮ ಸರ್ಕಾರ ತೆಗದುಕೊಂಡಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಬೆಟ್ಟಿಂಗ್ ದಂಧೆಯಿಂದ ತಿಂಗಳಿಗೆ 4-5 ಕೋಟಿ ಹಣ ಹೋಗ್ತಿದೆ. ಇವೆಲ್ಲ ಸರ್ಕಾರಕ್ಕೆ ಗಮನ ತಂದಿದ್ದೇನೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಅಂತ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *