ಎಸ್‍ಎಂಕೆಗೆ ತಿರುಗೇಟು ನೀಡಿ, ಸುಮಲತಾಗೆ ಟಾಂಗ್ ಕೊಟ್ಟ ಸಿಎಂ

Public TV
2 Min Read

ಬೆಂಗಳೂರು: ಸಿಎಂ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಮತ್ತು ಸುಮಲತಾ ಅವರು ತನ್ನ ವಿರುದ್ಧ ಹೇಳಿದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಸರಣಿ ಟ್ವೀಟ್ ಮಾಡಿದ ಎಚ್‍ಡಿಕೆ ಸಿಎಂ ಆದಮೇಲೆ ನೀವು ಬಿಜೆಪಿಗೆ ಕಾಲಿಟ್ಟಾಗಲೇ ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದೀರಿ ಎಂದು ಎಸ್‍ಎಂಕೆಗೆ ಹೇಳಿದರೆ ರೈತರನ್ನು ಉದ್ಧಾರ ಮಾಡಲು ನಿಮ್ಮ ಸಲಹೆ ತುಂಬಾ ಮುಖ್ಯ ಕೇಳಲು ನಾವು ಕಾತರರಾಗಿದ್ದೇವೆ ಎಂದು ಸುಮಲತಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಇದರ ಜೊತೆ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಅತ್ಯಂತ ಪವಿತ್ರವಾದ ಪ್ರಕ್ರಿಯೆ. ಇದು ಮತದಾರರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವುದನ್ನು ಪರಿಗಣಿಸುವ ವ್ಯವಸ್ಥೆ. ಬೆಟ್ಟಿಂಗ್ ಆರೋಗ್ಯಕರವಾದ ಬೆಳವಣಿಗೆ ಅಲ್ಲ. ಇದು ಶಿಕ್ಷಾರ್ಹ ಅಪರಾಧ. ಯಾರೂ ಇಂತಹ ಅಕ್ರಮಗಳಲ್ಲಿ ತೊಡಗಿಸಿಕೊಳ್ಳಬಾರದೆಂದು ನಾನು ವಿನಂತಿಸುತ್ತೇನೆ ಎಂದು ಸಿಎಂ ಮನವಿ ಮಾಡಿದ್ದಾರೆ.

ಎಸ್‍ಎಂಕೆಗೆ ಹೇಳಿದ್ದು ಏನು?
ಮಾನ್ಯ ಕೃಷ್ಣ ಸಾಹೇಬರಿಗೆ ಗೌರವಯುತ ನಮಸ್ಕಾರಗಳು. ನೀವು ತುಂಬಾ ಮುಂದೆ ಹೆಜ್ಜೆ ಹಾಕಿಬಿಟ್ಟಿರುವುದರಿಂದ ನೀವು ನಡೆದು ಬಂದ ಹಾದಿ ಮರೆತುಹೋಗಿದೆ ಎಂದು ಭಾವಿಸುತ್ತೇನೆ. 50 ವರ್ಷ ಕಾಲ ನೀವು ಅಧಿಕಾರದ ಬೆಣ್ಣೆಯನ್ನು ಸಾಕಷ್ಟು ಮೆದ್ದಿರಿ. ಎರಡು ಬಾರಿ ಕೇಂದ್ರ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ, ಪಕ್ಕದ ರಾಜ್ಯದಲ್ಲಿ ರಾಜ್ಯಪಾಲರಾಗಿ ಅಧಿಕಾರ ಅನುಭವಿಸಿದಿರಿ.

ಇಷ್ಟೆಲ್ಲ ಆದಮೇಲೆ ನೀವು ಬಿಜೆಪಿಗೆ ಕಾಲಿಟ್ಟಾಗಲೇ ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದೀರಿ. ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೀರಿ ಬಹಳ ಸಂತೋಷ. ಆದರೆ ನಮ್ಮ ಕುಟುಂಬದಲ್ಲಿ ಯಾರೂ ಹಿಂಬಾಗಿಲ ಪ್ರವೇಶ ಪಡೆದಿಲ್ಲ. ಜನ ಆರಿಸಿದಾಗ ಮಾತ್ರ ಅಧಿಕಾರ ಪಡೆದಿದ್ದಾರೆ. ಆದರೆ ನೀವು ರಾಜ್ಯಸಭೆಗೆ ಹಿಂಬಾಗಿಲ ಮೂಲಕ ಪ್ರವೇಶ ಪಡೆಯಲು ದೇವೇಗೌಡರ ಸಹಾಯ ಪಡೆದದ್ದು ನೆನಪಿದೆ ಎಂದು ಭಾವಿಸುತ್ತೇನೆ.

ಸುಮಲತಾಗೆ ಟಾಂಗ್:
ಗೌರವಾನ್ವಿತ ಸುಮಲತಾ ಅವರೇ, ನಿಮ್ಮ ರೈತಪರ ಮಾತು ಓದಿ ಇನ್ನಿಲ್ಲದಷ್ಟು ಸಂತೋಷವಾಯಿತು. ನನಗಾಗಲೀ ನನ್ನ ತಂದೆಯವರಿಗಾಗಲೀ ರೈತರ ಬಗ್ಗೆ ಏನೇನೂ ಗೊತ್ತಿಲ್ಲ. ಮಣ್ಣಿನ ಮಕ್ಕಳು ಎಂದು ಈ ದೇಶದ ಜನ ಪ್ರೀತಿಯಿಂದ ಕರೆದರು. ನಮ್ಮದು ರೈತರಿಗೆ ಮಿಡಿದ ಮನ. ಆದರೆ ಈಗ ದಿಢೀರನೆ ಪ್ರತ್ಯಕ್ಷರಾಗಿ ಪ್ರತೀ ದಿನ ಹೊಲ ಗದ್ದೆಗಳಲ್ಲಿ ದುಡಿದು, ಉತ್ತು ಬಿತ್ತಿದ ಅನುಭವ ಹಂಚಿಕೊಳ್ಳುತ್ತಿದ್ದೀರಿ. ರೈತರನ್ನು ಉದ್ಧಾರ ಮಾಡಲು ನಿಮ್ಮ ಸಲಹೆ ತುಂಬಾ ಮುಖ್ಯ ಕೇಳಲು ನಾವು ಕಾತರರಾಗಿದ್ದೇವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *