ಚಾಮುಂಡೇಶ್ವರಿಯಿಂದ ಓಡಿಸಲಾಗಿದೆ, ಬಾದಾಮಿಯಿಂದ ಓಡಿಸುವುದು ಬಾಕಿ ಇದೆ: ಸಿದ್ದು ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

Public TV
2 Min Read

ಬೆಂಗಳೂರು: ಜಿಡಿಎಸ್‌ ಪಕ್ಷವು ಬಿಜೆಪಿಯ ಬಾಲಂಗೋಚಿ, ತುಮಕೂರಿನಿಂದ ಜೆಡಿಎಸ್‌ನ್ನು ಓಡಿಸಿ, ಆ ಪಕ್ಷಕ್ಕೆ ಸಿದ್ದಾಂತವಿಲ್ಲ ಎಂದೆಲ್ಲ ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.

ಈ ಬಗ್ಗೆ ಶನಿವಾರ ಸರಣಿ ಟ್ವೀಟ್‌ ಮಾಡಿರುವ ಎಚ್‌ಡಿಕೆ, ಜೆಡಿಎಸ್‌ ಪಕ್ಷವನ್ನು ತುಮಕೂರಿನಿಂದ ಓಡಿಸುವುದಿರಲಿ, ನಿಮ್ಮನ್ನೇ ಚಾಮುಂಡೇಶ್ವರಿ ಕ್ಷೇತ್ರದಿಂದ ಓಡಿಸಿದ್ದಾರೆ. ಇನ್ನು ಬಾದಾಮಿ ಕ್ಷೇತ್ರದಿಂದ ಓಡಿಸುವುದು ಬಾಕಿ ಇದೆ ಎಂದು ಟಾಂಗ್‌ ನೀಡಿದ್ದಾರೆ. ಇದನ್ನೂ ಓದಿ: ನೀವು ಲಂಚ ಪಡೆದಿಲ್ಲ ಅಂದ್ರೆ ಹ್ಯೂಬ್ಲೋಟ್ ವಾಚ್ ಎಲ್ಲಿಂದ ಬಂತು – ಸಿದ್ದುಗೆ ಬಿಜೆಪಿ ಪ್ರಶ್ನೆ

ಹೆಚ್‌ಡಿಕೆ ಟ್ವೀಟ್‌ನಲ್ಲೇನಿದೆ?
ಒಬ್ಬ ನಾಯಕನನ್ನು ಸೃಷ್ಟಿ ಮಾಡುವ ಯೋಗ್ಯತೆ ಇಲ್ಲ. ಪಕ್ಷ ಕಟ್ಟುವ ಧಂ ಇಲ್ಲ. ಗೆದ್ದಲು ಕಟ್ಟಿದ ಹುತ್ತದಲ್ಲಿ ವಿಷ ಸರ್ಪದಂತೆ ಹೋಗಿ ಸೇರಿಕೊಳ್ಳುವ, ಕಂಡೋರ ಕಷ್ಟದ ಮೇಲೆ ಅಧಿಕಾರ ಅನುಭವಿಸುವ ಸಿದ್ದರಾಮಯ್ಯ.. ನೀವಾ ಜೆಡಿಎಸ್ ಬಗ್ಗೆ ಮಾತನಾಡುವುದು?

ತುಮಕೂರಿನಿಂದ ಜೆಡಿಎಸ್ ಅನ್ನು ಓಡಿಸಿ ಅನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ? ಅಥವಾ ಕಾಂಗ್ರೆಸ್‌ನ ಪಿತ್ರಾರ್ಜಿತ ಆಸ್ತಿಯಾ? ಚಾಮುಂಡೇಶ್ವರಿ ಕ್ಷೇತ್ರದಿಂದ ನಿಮ್ಮನ್ನು ಜನರು ಓಡಿಸಿದ್ದು ಮರೆತುಬಿಟ್ಟಿರಾ? ಈ ಸಲ ಬಾದಾಮಿ ಕ್ಷೇತ್ರದಿಂದಲೂ ಓಡಬೇಕಾಗುತ್ತದೆ, ಕಾಯಿರಿ. ಇದನ್ನೂ ಓದಿ: ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ: ಡಿಕೆಶಿ

ಕಾಂಗ್ರೆಸ್ ಸೇರುವ ಮುನ್ನ ನೀವು ಯಾರ ಬಾಲಂಗೋಚಿ ಆಗಿದ್ದಿರಿ? ಗುರುಸ್ವಾಮಿ ಅವರೆದುರು ಸೋತುಸುಣ್ಣವಾದ ಮೇಲೆ ಅನುಗ್ರಹಕ್ಕೆ ಬಂದು ಯಾರ ಮುಂದೆ ಗಳಗಳನೆ ಅತ್ತು ರಾಜಕೀಯ ಬಿಟ್ಟು, ವಕೀಲಿ ಮಾಡುತ್ತೇನೆ ಎಂದಿರಿ ಅನ್ನುವುದು ನೆನಪಿದೆಯಾ ಸಿದ್ದರಾಮಯ್ಯ? ಆಗ ನಿಮಗೆ ಬಾಲಂಗೋಚಿತನ ನೆನಪಾಗಲಿಲ್ಲವೆ?

ಪ್ರತಿಯೊಂದಕ್ಕೂ, ಈ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡುತ್ತಿದೆ ಎನ್ನುವ ನಿಮ್ಮ ʼಸುಳ್ಳು ನಾಲಗೆʼ, ಅದೇ ಸರ್ಕಾರ ಬರಲು ಮೂಲ ಕಾರಣರಾದ ʼಸಿದ್ದಪುರುಷʼ ಯಾರು ಎನ್ನುವುದನ್ನು ಹೇಳಲಿಲ್ಲವೇ? ಪಕ್ಷದ್ರೋಹ ತಾಯಿಗೆ ಮಾಡುವ ದ್ರೋಹಕ್ಕೆ ಸಮಾನ. ನಿಮ್ಮ ದ್ರೋಹ ಮುಚ್ಚಿಟ್ಟುಕೊಳ್ಳಲು ಜೆಡಿಎಸ್ ಜಪವಾ ಸಿದ್ದರಾಮಯ್ಯ? ಇದನ್ನೂ ಓದಿ: ಪೊಲೀಸರು ಪ್ರಾಮಾಣಿಕರಾಗಿಲ್ಲ ಅಂದ್ರೆ ನಾಗರಿಕರು ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ: ಆರಗ ಜ್ಞಾನೇಂದ್ರ

siddaramaiah

ಮತ್ತೆ ಮುಖ್ಯಮಂತ್ರಿ ಆಗಬೇಕೆನ್ನುವ ದುರಾಸೆ, ಅವಕಾಶ ಸಿಗದೇನೋ ಅನ್ನುವ ಹತಾಶೆ. ಅಭ್ಯರ್ಥಿಗಳಿಲ್ಲ, ಜೆಡಿಎಸ್ ಬಿಟ್ಟರೆ ಗತಿ ಇಲ್ಲ ನಿಮ್ಮ ಯೋಗ್ಯತೆಗೆ. ನಮ್ಮವರನ್ನು ಹೈಜಾಕ್ ಮಾಡಿ ಅವರಿಗೆ ಟಿಕೆಟ್ ಆಮಿಷ ತೋರಿಸಿ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗೆ ತಳ್ಳುವ ನಿಮ್ಮ ʼಕಂತ್ರಿʼ ರಾಜಕೀಯ ಎಲ್ಲರಿಗೂ ಗೊತ್ತಿದೆ.

ಅಕ್ಕಪಕ್ಕದವರ ತಟ್ಟೆಯಲ್ಲಿರುವುದನ್ನು ಎಗರಿಸುವುದು ಸಿದ್ಧಾಂತವೇ? ʼಆಪರೇಷನ್ ಹಸ್ತʼವೂ ಸಿದ್ಧಾಂತವೇ? ಆಶ್ರಯ ಕೊಟ್ಟ ಪಕ್ಷವನ್ನು, ಅಲ್ಲಿನ ಮೂಲನಿವಾಸಿಗಳನ್ನು ಮುಗಿಸುವುದೇ ಸಿದ್ಧಾಂತವೇ? ನೀವು ಜೆಡಿಎಸ್ ಸಿದ್ಧಾಂತದ ಬಗ್ಗೆ ಮಾತನಾಡುತ್ತೀರಿ? ನಾಚಿಕೆಯಾಗಬೇಕು ನಿಮಗೆ.

ಸುಳ್ಳು ನಿಮ್ಮ ರಾಜಕೀಯದ ಅಡಿಪಾಯ. ಸುಳ್ಳೇ ನಿಮ್ಮ ರಾಜಕೀಯ ಅಸ್ತಿತ್ವದ ಪ್ರತೀಕ. ಸುಳ್ಳು ಸುಳ್ಳೇ ನಿಮ್ಮ ನರಿಬುದ್ಧಿ ಅವಕಾಶವಾದಿ ರಾಜಕಾರಣ ನಿಜಸ್ವರೂಪ. ಹೀಗೆಂದು ಮಾಜಿ ಮುಖ್ಯಮಂತ್ರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಟ್ವೀಟ್ ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *