ರಾಮನಗರದಲ್ಲಿ 3 ವರ್ಷದಿಂದ ಮಲಗಿದ್ದವರು ಈಗ ಎದ್ದು ರಾಜಕೀಯ ಮಾಡ್ತಿದ್ದಾರೆ: ಹೆಚ್‌ಡಿಕೆ

Public TV
2 Min Read

ರಾಮನಗರ: ಜಿಲ್ಲೆಯಲ್ಲಿ ಇಷ್ಟು ದಿನ ಮಲಗಿದ್ದ ನಾಯಕರೆಲ್ಲ ಈಗ ಎದ್ದು ರಾಜಕೀಯ ಮಾಡುತ್ತಿದ್ದಾರೆ ಎಂದು ಡಿಕೆ ಸಹೋದರರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.

ಚನ್ನಪಟ್ಟದಲ್ಲಿ ಇಂದು ಎಲೆಕ್ಟ್ರಿಕ್ ಯುಜಿ ಕೇಬಲ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಅವರನ್ನಾಗಲಿ ಅಥವಾ ಮತ್ತೆ ಯಾರನ್ನೇ ಆಗಲಿ ಟಾರ್ಗೆಟ್ ಮಾಡುತ್ತಿಲ್ಲ. ನನಗೂ ಅವರಿಗೂ ಸಂಬಂಧ ಇಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಆದರೆ ನನ್ನನ್ನ ಅವರು ಟಾರ್ಗೆಟ್ ಮಾಡಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಎಲ್ಲಿಗೂ ಹೋಗಲ್ಲ: ಸಿದ್ದರಾಮಯ್ಯ

ನನ್ನನ್ನು ಇಲ್ಲಿಂದ ಖಾಲಿ ಮಾಡಿಸುತ್ತಾರಂತೆ:
ಅವರು ಕುಮಾರಸ್ವಾಮಿಯನ್ನು ರಾಮನಗರದಿಂದ ಖಾಲಿ ಮಾಡಿಸಬೇಕಂತೆ. ನನ್ನನ್ನು ಖಾಲಿ ಮಾಡಿಸಲು ಆಗುತ್ತಾ ಅನ್ನುವುದು ಅವರಿಗೆ ಗೊತ್ತಿಲ್ಲ. ರಾಮನಗರ ಜಿಲ್ಲೆಗೂ ನನಗೂ ಇರುವ ಸಂಬಂಧ ಬಗ್ಗೆ ಸಾವಿರಾರು ಬಾರಿ ಹೇಳಿದ್ದೇನೆ. ನನಗೂ ಈ ಜಿಲ್ಲೆಗೂ ತಾಯಿ ಮಗನ ಸಂಬಂಧ ಇದೆ ಎಂದು ತಿಳಿಸಿದರು.

ಅವರು ಹಣದ ಮೂಲಕ, ದಬ್ಬಾಳಿಕೆ ಮೂಲಕ ಕುಮಾರಸ್ವಾಮಿಯನ್ನು ಬಗ್ಗುಬಡಿಯಲು ಇನ್ನು ಹತ್ತು ಜನ್ಮ ಎತ್ತಿ ಬರಬೇಕು. ಈ ಜಿಲ್ಲೆಯ ಜನರಿಗೂ ದೇವೇಗೌಡರ ಕುಟುಂಬಕ್ಕೆ ಪೂರ್ವ ಜನ್ಮದ ಸಂಬಂಧ ಇದೆ. ಮೇಕೆದಾಟು ಪಾದಯಾತ್ರೆ ಬಳಿಕ ಜೆಡಿಎಸ್ ಭದ್ರಕೋಟೆ ಛಿದ್ರವಾಗುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಇಲ್ಲಿಂದಲೇ ಮತ್ತೆ ಪಾದಯಾತ್ರೆ ಪ್ರಾರಂಭ ಮಾಡುತ್ತೇವೆ. ಒಂದಲ್ಲ, ಇನ್ನು ಹತ್ತು‌ ಪಾದಯಾತ್ರೆ ಮಾಡಲಿ, ಇದು ದುರಹಂಕಾರದ ಮಾತಲ್ಲ. ಅವರ ನಡವಳಿಕೆಯನ್ನು ಅರ್ಥ ಮಾಡಕೊಂಡಿದ್ದೇನೆ. ಈ ಜಿಲ್ಲೆಯ ಜನರನ್ನು ಗೆಲ್ಲೋದು ಅಷ್ಟು ಸುಲಭವಲ್ಲ. ಪ್ರೀತಿ, ವಿಶ್ವಾಸ, ದುಡಿಮೆ ಇದ್ದರಷ್ಟೇ ಜಿಲ್ಲೆಯಲ್ಲಿ ಉಳಿಯಲು ಸಾಧ್ಯ. ಹಣಕ್ಕೆ ಇಲ್ಲಿ ಬೆಲೆ ಸಿಗಲ್ಲ ಎಂದು ಚಾಟಿ ಬೀಸಿದರು. ಇದನ್ನೂ ಓದಿ: ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ಕೇಂದ್ರ ಸರ್ಕಾರ ಮಾಡುತ್ತಿದೆ: ಎಚ್‍ಡಿಕೆ ವಾಗ್ದಾಳಿ

siddaramaiah

ಪುಟ್ಟರಾಜು, ಸಿದ್ದರಾಮಯ್ಯ ಭೇಟಿ ಬಗ್ಗೆ ಗೊತ್ತಿಲ್ಲ:
ಸಿ.ಎಸ್.ಪುಟ್ಟರಾಜು ಹಾಗೂ ಇತರೆ ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತರೋ ಅದನ್ನು ಕಟ್ಟಿಕೊಂಡು ನನಗೇನು? ಯಾರು ಯಾರನ್ನ ಬೇಕಾದರೂ ಭೇಟಿ ಮಾಡಬಹುದು, ಚರ್ಚೆ ಮಾಡಬಹುದು. ನನಗೆ ನನ್ನ ಪಕ್ಷ, ಕಾರ್ಯಕರ್ತರು, ಜನ ಮುಖ್ಯ. ಕಾರ್ಯಕರ್ತರಿದ್ದರಷ್ಟೇ ಪಕ್ಷ ಮತ್ತು ಮುಖಂಡರು ಬೆಳೆಯೋದು ಎಂದು ಹೇಳಿದರು.

ಇಬ್ರಾಹಿಂ ನಮ್ಮವರು:
ಸಿ.ಎಂ.ಇಬ್ರಾಹಿಂ ಅವರು ನಮಗೆ ಹಳಬರು. ದೇವೇಗೌಡರ ಗರಡಿಯಲ್ಲಿ ಬೆಳೆದವರು. ನಾನು ಸಿದ್ದರಾಮಯ್ಯ ಜೊತೆ ಹೋಗಿ ದೇವೇಗೌಡರನ್ನು ದೂರ ಮಾಡಿಕೊಂಡೆ. ಅವರ ಕೊನೆ ಆಸೆಯಂತೆ ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಹಾಗಾಗಿ ನಾನು ಜೆಡಿಎಸ್ ಸೇರುತ್ತೇನೆಂದು ಸ್ವತಃ ಅವರೇ ಹೇಳಿದ್ದಾರೆ. ಅವರಿಗೆ ನಾನು ಸ್ವಾಗತ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸಿದ್ದರಾಮಯ್ಯ ಮನೆಗೆ ಹೋಗಿದ್ದೆ: ಪುಟ್ಟರಾಜು

ಸರ್ಕಾರಕ್ಕೆ 6 ತಿಂಗಳು ಜನ ತೀರ್ಮಾನ ಮಾಡುತ್ತಾರೆ:
ರಾಜ್ಯ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರ 6 ತಿಂಗಳು ಪೂರೈಸಿದೆ. ಆ ಸರ್ಕಾರದ ಕಾರ್ಯವೈಖರಿ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ. ಇನ್ನೂ ಒಂದು ವರ್ಷ ಇದೆ. ಅದರ ಬಗ್ಗೆ ನಾನೇಕೆ ಹೇಳಲಿ. ಅವರು ಈಗಾಗಲೇ ದೊಡ್ಡ ದೊಡ್ಡ ಜಾಹೀರಾತುಗಳ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ. ಜನಸಾಮಾನ್ಯರ ಪರಿಸ್ಥಿತಿ ಬಗ್ಗೆ ಯಾರೂ ನೋಡುತ್ತಿಲ್ಲ. ಈ 6 ತಿಂಗಳು ಸರ್ಕಾರ ಇತ್ತು ಅನ್ನುವ ಭಾವನೆ ಜನರಲ್ಲಿ ಇಲ್ಲ ಎಂದು ಕುಟುಕಿದರು.

Share This Article
Leave a Comment

Leave a Reply

Your email address will not be published. Required fields are marked *