ಮೇಕೆದಾಟು: ತಮಿಳುನಾಡು ವಿರುದ್ಧದ ಖಂಡನಾ ನಿರ್ಣಯಕ್ಕೆ ಜೆಡಿಎಸ್ ಬೆಂಬಲ

Public TV
2 Min Read

ಬೆಂಗಳೂರು: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಕೈಗೊಳ್ಳಲಾಗಿರುವ ವಿವಾದಾತ್ಮಕ ನಿರ್ಣಯಕ್ಕೆ ಪ್ರತಿಯಾಗಿ ರಾಜ್ಯ ವಿಧಾನಸಭೆಯಲ್ಲಿ ಕೈಗೊಂಡಿರುವ ಖಂಡನಾ ನಿರ್ಣಯಕ್ಕೆ ಜೆಡಿಎಸ್ ಪಕ್ಷದ ಬೆಂಬಲವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ವಿಧಾನಸೌಧ ಬಳಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡರಷ್ಟೇ ಸಾಲದು. ಮೊದಲು ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಯ ಒಪ್ಪಿಗೆ ಪಡೆದು ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಶಾದಿ ಮಹಲ್ ಯೋಜನೆ ರದ್ದು: ಬೊಮ್ಮಾಯಿ

ಇದು ನಮ್ಮ ಒಗ್ಗಟ್ಟು ಪ್ರದರ್ಶನದ ನಿರ್ಣಯ ಅಷ್ಟೆ. ಅದು ಈಗ ಆಗಿದೆ. ಆದರೆ ತಕ್ಷಣ ಬೇಕಿರುವುದು ಕೇಂದ್ರದ ಒಪ್ಪಿಗೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಪಕ್ಷದ ಸರ್ಕಾರವಿದೆ. ಕೇಂದ್ರದ ಒಪ್ಪಿಗೆ ಪಡೆದುಕೊಳ್ಳಲು ರಾಜ್ಯ ಸರ್ಕಾರ ಬದ್ಧತೆ ತೋರಬೇಕು ಎಂದು ತಿಳಿಸಿದರು.

ದೇವೇಗೌಡರ ಲೇಖನ ಪ್ರದರ್ಶಿಸಿದ ಮಾಜಿ ಸಿಎಂ
ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಲೇ ಇದೆ. ಗೋದಾವರಿ, ಕೃಷ್ಣಾ, ಪೆನ್ನಾರ್ ಮತ್ತು ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ಸೊನ್ನೆ ಸುತ್ತಲಾಗಿದೆ. ಈಗಾಗಲೇ ಕೇಂದ್ರದಲ್ಲಿ ಒಂದು ಸಭೆ ಮಾಡಿ ಕರ್ನಾಟಕವನ್ನು ಲೆಕ್ಕಕ್ಕೆ ಇಡದೇ ತೆಲಂಗಾಣ, ಆಂಧ್ರ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳು ಮಾತ್ರ ನೀರು ಹಂಚಿಕೊಂಡಿವೆ. ಇದೇ ಕಾರಣಕ್ಕಾಗಿಯೇ ನದಿ ಜೋಡಣೆ ವಿಚಾರದಲ್ಲಿ ಕನ್ನಡಿಗರು ತಬ್ಬಲಿಗಳು ಆಗುತ್ತಿದ್ದಾರೆ ಎಂದು ‘ ಜನತಾ ಪತ್ರಿಕೆ’ ಯಲ್ಲಿ ಸ್ವತಃ ದೇವೇಗೌಡರೇ ಬರೆದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ದೇವೇಗೌಡರು ‘ಜನತಾ ಪತ್ರಿಕೆ’ಯಲ್ಲಿ ಬರೆದಿರುವ ಲೇಖನವನ್ನು ಪ್ರದರ್ಶಿಸಿದರು. ಇದನ್ನೂ ಓದಿ: ಕೆಪಿಎಸ್‍ಸಿಗೆ ಹೊಸ ರೂಪ ಕೊಡ್ತೀವಿ: ಬೊಮ್ಮಾಯಿ

ಕಾಂಗ್ರೆಸ್ ಪಕ್ಷಕ್ಕೆ ಚಾಟಿ
ರಾಜ್ಯ ಸರ್ಕಾರವು ಕೇಂದ್ರದ ಮನವೊಲಿಸಲು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆದರೂ ಸರ್ಕಾರ ಮಂಡಿಸಿದ ಈ ನಿರ್ಣಯಕ್ಕೆ ನಾವೆಲ್ಲಾ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದೇವೆ. ಪ್ರತಿಪಕ್ಷ ನಾಯಕರು ನಮ್ಮನ್ನೆಲ್ಲಾ ಕರೆದು ನಿರ್ಣಯದ ಕರಡು ಸಿದ್ಧ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಆದರೆ ನೀರಾವರಿ ಬಗ್ಗೆ ಅಭಿಪ್ರಾಯ ಭೇದ ಇರಬಾರದು. ನಮ್ಮ ನಿಲುವಿನಲ್ಲಿ ಗಟ್ಟಿತನ ಇಲ್ಲದಿರುವುದರಿಂದಲೇ ನಮ್ಮ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಅವರು ಕಾಂಗ್ರೆಸ್ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *