ಕುಬೇರ ಉದ್ಯೋಗಪತಿಗಳಿಂದ ಕೊರೊನಾ ತೆರಿಗೆ ಸಂಗ್ರಹಿಸಿ: ಕುಮಾರಸ್ವಾಮಿ

Public TV
2 Min Read

– ವಿದ್ಯುತ್ ಬಿಲ್, ಪೆಟ್ರೋಲ್, ಡೀಸೆಲ್ ದರ ಕಡಿತ ಮಾಡಿ
– ಕೇಂದ್ರ, ರಾಜ್ಯ ಸರ್ಕಾರಗಳಿಗೆ ಒತ್ತಾಯ

ಬೆಂಗಳೂರು: ದೇಶದ ಜಿಡಿಪಿ ಕುಸಿತವಾಗೋ ಮುನ್ಸೂಚನೆ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೆ ಹಣ ಉಳಿಸುವ ಮಾರ್ಗಗಳನ್ನ ಸರ್ಕಾರ ಹುಡುಕಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯ ಮಾಡಿದ್ದಾರೆ. ಮೊದಲಿಗೆ, “ರಿಸರ್ವ್ ಬ್ಯಾಂಕ್ ಒಳಗೊಂಡಂತೆ ಅನೇಕ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ತೀವ್ರ ಕುಸಿತಕ್ಕೆ ಇಳಿಯುವ ಮುನ್ಸೂಚನೆ ಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯನ ಕೈಯಲ್ಲಿ ಹಣ ಉಳಿಸುವ ಮಾರ್ಗೋಪಾಯಗಳನ್ನು ಹುಡುಕಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ‘ಕಾಸ್ಟ್ ಆಫ್ ಲಿವಿಂಗ್’ ಕಡಿಮೆ ಮಾಡುವುದು ಸರ್ಕಾರಗಳ ಆದ್ಯತೆ ಆಗಲಿದೆ” ಎಂದಿದ್ದಾರೆ.

ಲಾಕ್‍ಡೌನ್ ತೆಗೆದ ತಕ್ಷಣವೇ ಆರ್ಥಿಕ ಸ್ಥಿತಿ ಯಥಾಸ್ಥಿತಿಗೆ ಮರಳಲಾರದು. ಜಿಡಿಪಿ ಬೆಳವಣಿಗೆ ಈ ಹಿಂದೆ ಇದ್ದ ಸ್ಥಿತಿಗೆ ಮರಳಲು ವರ್ಷಗಳೇ ಬೇಕಾಗಬಹುದು ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಈ ಹಠಾತ್ ಶಾಕ್‍ನಿಂದ ಜನಸಾಮಾನ್ಯರು ಸುಧಾರಿಸಿಕೊಳ್ಳಬೇಕು. ಇದಕ್ಕೆ ಅನುವಾಗುವಂತೆ ಬಾಡಿಗೆ ಮುಂದೂಡಿಕೆ ಬದಲಾಗಿ ಭಾಗಶಃ ಬಾಡಿಗೆ ವಿನಾಯಿತಿ, ಖಾಸಗಿ ಸ್ಕೂಲು, ಕಾಲೇಜುಗಳ ಫೀಸ್ ಕಡಿತ ಮಾಡಿ. ಅಲ್ಲದೇ ವಿದ್ಯುತ್ ಬಿಲ್, ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿತ ಘೋಷಣೆ ಮಾಡುವುದು ಸೂಕ್ತ ಎಂದು ಅಭಿಪ್ರಾಯವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.

ಅನೇಕ ಖಾಸಗಿ ಕಂಪನಿಗಳು ಈಗಾಗಲೇ ಸಿಬ್ಬಂದಿ ಕಡಿತ ಮತ್ತು ಸಂಬಳ ಕಡಿತ ಮಾಡುವ ತೀರ್ಮಾನ ತೆಗೆದುಕೊಂಡಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ. ಹೀಗಾಗಿ ಸರ್ಕಾರ ಜನಕಲ್ಯಾಣ ಯೋಜನೆಗಳ ಮೇಲೆ ಹೆಚ್ಚು ಖರ್ಚು ಮಾಡಬೇಕಾಗಿರುವುದರಿಂದ ಕುಬೇರ ಉದ್ಯೋಗಪತಿಗಳಿಂದ ಕೊರೊನಾ ತೆರಿಗೆಯನ್ನು ಸಂಗ್ರಹಿಸಲಿ” ಎಂದಿದ್ದಾರೆ.

“ರೈತರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಜೀವನೋಪಾಯಗಳ ರಕ್ಷಣೆ ಮಾಡುವುದು ತುರ್ತಿನ ಆದ್ಯತೆಯಾಗಿದೆ. ಟ್ಯಾಕ್ಸಿ ಮತ್ತು ಆಟೋ ಚಾಲಕರು, ಗಾರ್ಮೆಂಟ್ ಕೆಲಸಗಾರರು, ಕಟ್ಟಡ ಕಾರ್ಮಿಕರು ಇತ್ಯಾದಿ ನಗರ ಪ್ರದೇಶದ ಬಡ ಸಮುದಾಯಕ್ಕೋಸ್ಕರ ಸರ್ಕಾರ ಹೆಚ್ಚಿನ ಪರಿಹಾರ ಒದಗಿಸುವ ಕೆಲಸ ಮಾಡಬೇಕಾಗಿದೆ” ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *