ಮಸೂದ್‌, ಫಾಝಿಲ್‌ ಕುಟುಂಬಸ್ಥರಿಗೆ ಹೆಚ್‌ಡಿಕೆ ಸಾಂತ್ವನ – 5 ಲಕ್ಷ ಪರಿಹಾರ ವಿತರಣೆ

Public TV
3 Min Read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಸೂದ್‌ ಹಾಗೂ ಫಾಝಿಲ್‌ ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಎರಡೂ ಕುಟುಂಬದ ಸದಸ್ಯರಿಗೆ ತಲಾ 5 ಲಕ್ಷ ರೂ. ಪರಿಹಾರ ಚೆಕ್‌ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಹತ್ಯೆಗೀಡಾಗಿದ್ದ ಯುವಕ ಮಸೂದ್‌ ಹಾಗೂ ಮಂಗಳೂರಿನ ಸುರತ್ಕಲ್‌ನ ಮಂಗಳಾಪೇಟೆಯಲ್ಲಿ ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಯುವಕ ಫಾಝಿಲ್‌ ಪೋಷಕರನ್ನು ಭೇಟಿಯಾಗಿ ಕುಮಾರಸ್ವಾಮಿ ಸಾಂತ್ವನ ಹೇಳಿದರು. ಹೆಚ್‌ಡಿಕೆ ಜೊತೆಗೆ ಜೆಡಿಎಸ್‌ ನಾಯಕರಾದ ಭೋಜೇಗೌಡ, ಸಿ.ಎಂ.ಇಬ್ರಾಹಿಂ, ಬಿ.ಎಂ.ಫಾರೂಕ್‌ ಕೂಡ ಇದ್ದರು. ಇದನ್ನೂ ಓದಿ: ಪ್ರವೀಣ್‌ ಮನೆಗೆ ಮಾಜಿ ಸಿಎಂ ಹೆಚ್‌ಡಿಕೆ ಭೇಟಿ – ನೆಟ್ಟಾರು ಕುಟುಂಬಕ್ಕೆ 5 ಲಕ್ಷ ಪರಿಹಾರ

ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಅವರಿಗೂ 5 ಲಕ್ಷ ರೂ. ಪರಿಹಾರದ ಚೆಕ್‌ ನೀಡಿದ್ದರು.

ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್‌ಡಿಕೆ, ಎರಡು ಮೂರು ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸಕ್ಕೆ ಬಂದಿಲ್ಲ. ಕರಾವಳಿಯಲ್ಲಿ ನಡೆದ ಹತ್ಯೆ ವಿಷಯದಲ್ಲಿ ಚರ್ಚೆ ಮಾಡೋಕೆ ಬರುತ್ತೇನೆಂದು ಅಂದುಕೊಂಡಿರಲಿಲ್ಲ. ಇದು ನನಗೆ ನೋವು ತಂದಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೃತ್ಯ ಹಲವು ಸಮಯದಿಂದ ನಡೆಯುತ್ತಿದೆ. ಸಣ್ಣಪುಟ್ಟ ಪ್ರಕರಣಗಳನ್ನು ಇಲ್ಲಿ ದೊಡ್ಡದಾಗಿ ಮಾಡಲಾಗುತ್ತೆ. ಹಿಂದೂ ಮುಸ್ಲಿಂ ಸಮಾಜದ ನಡುವೆ ಕಂದಕ ಸೃಷ್ಟಿ ಮಾಡಿದ್ದಾರೆ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಕೊಂದು ಬೆಂಗಳೂರಿನಲ್ಲಿ ಬಚ್ಚಿಟ್ಟುಕೊಂಡಿದ್ದ ಹಂತಕರು..!

ಬೇರೆ ರಾಜಕಾರಣಿಗಳ ಥರ ನಾನು ಫ್ಲೈಯಿಂಗ್ ವಿಸಿಟ್ ಮಾಡಿಲ್ಲ. ಮೂರು ಕುಟುಂಬಗಳಿಂದ ಮಾಹಿತಿ ಪಡೆದು ಬಂದಿದ್ದೇನೆ. ಹತ್ಯೆ ನಡೆಸಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಮೂರು ಕುಟುಂಬದ ಒಕ್ಕೊರಲಿನ ಆಗ್ರಹವಾಗಿದೆ. ಯಾವ ರಾಜಕಾರಣಿ, ಮಂತ್ರಿ, ಸಂಘಟನೆ ಮುಂಚೂಣಿಯಲ್ಲಿದ್ದ ನಾಯಕರ ಹತ್ಯೆಯಾಗಿಲ್ಲ. ಸಂಘಟನೆ ಹೆಸರಲ್ಲಿ ಯುವಕರನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಬಿಜೆಪಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟರು.

ಎರಡು ರಾಷ್ಟ್ರೀಯ ಪಕ್ಷಗಳ ಶಾಸಕರನ್ನು ಇಲ್ಲಿ ಹಲವು ವರ್ಷಗಳಿಂದ ಆಯ್ಕೆ ಮಾಡಿದ್ದಾರೆ. ಕಾನೂನಿನ ವೈಫಲ್ಯದ ಬಗ್ಗೆ ಈಗ ಕಾಂಗ್ರೆಸ್ ಚರ್ಚೆ ಮಾಡುತ್ತಿದೆ. ನಿಮ್ಮ ಸರ್ಕಾರ ಇದ್ದಾಗ ಕರಾವಳಿಗೆ ಕೊಟ್ಟ ಕೊಡುಗೆ ಏನು? ಇಲ್ಲಿನ ಜನರಿಗೆ ಯಾವ ರಕ್ಷಣೆ ನೀಡಿದ್ದೀರಿ? ಈಗ ಬಿಜೆಪಿ ಮಂತ್ರಿಗಳು ಯಾವು ಕೊಡುಗೆ ನೀಡಿದ್ದೀರಿ ಎಂದು ರಾಷ್ಟ್ರೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಮೂರು ನಾಲ್ಕು ತಿಂಗಳ ಹಿಂದೆ ಇದು ಇಲ್ಲಿಗೆ ನಿಲ್ಲಲ್ಲ ಎಂದಿದ್ದೆ. ಈಗ ಇದು ಪ್ರಾರಂಭ ಆಗಿದೆ. ಮುಖ್ಯಮಂತ್ರಿಗಳು ಇಲ್ಲಿ ಬಂದು ಏನು ಸಾಧನೆ ಮಾಡಿ ಹೋದ್ರು? ಎರಡು ಸಮಾಜದಲ್ಲಿ ವಿಶ್ವಾಸ ಮೂಡಿಸುವ ಸಂದೇಶ ಕೊಡಬಹುದೆಂದು ಅಂದುಕೊಂಡಿದ್ದೆ. ಆದ್ರೆ ಈ ವಿಶ್ವಾಸ ಹುಸಿಯಾಯಿತು. ಪ್ರವೀಣ್ ಕುಟುಂಬಕ್ಕೆ ಎಷ್ಟು ಪರಿಹಾರ ಕೊಟ್ಟರೂ ತಕರಾರಿಲ್ಲ. ಮುಖ್ಯಮಂತ್ರಿ ಇಲ್ಲಿದ್ದಾಗಲೇ ಸುರತ್ಕಲ್‌ನಲ್ಲಿ ಹತ್ಯೆ ನಡೆದಿದೆ. ಮುಖ್ಯಮಂತ್ರಿ ಅಲ್ಲಿಗೂ ಭೇಟಿ ನೀಡಿ ವಿಶ್ವಾಸ ತುಂಬಬೇಕಿತ್ತು. ಆದ್ರೆ ಹತ್ಯೆಯಾದಲ್ಲಿಗೆ ಸಿಎಂ ಭೇಟಿ ನೀಡಿಲ್ಲ. ಯಾರನ್ನು ಮೆಚ್ಚಿಸುವುದಕ್ಕೆ ಈ ರೀತಿ ವರ್ತಿಸುತ್ತಿದ್ದೀರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ- ಪರಾರಿಯಾಗುವ ರಸ್ತೆ ಮಾರ್ಗ ಬದಲಿಸಲು ಹೇಳಿರುವ ರೌಡಿ ಸುಹಾಸ್

ಸಣ್ಣಪುಟ್ಟ ಸಮುದಾಯಕ್ಕೆ ಸೇರಿದ ಯುವಕರನ್ನು ಹತ್ಯೆ ನಡೆಸುತ್ತೀರಿ. ಮಸೂದ್ ಕುಟುಂಬಕ್ಕೆ ಭೇಟಿ ಕೊಟ್ಟಿದ್ದೆ. ಒಂದು ಕರುವನ್ನು ಯಾರೊ ಒಬ್ಬರು ಸಾಕುವುದಕ್ಕೆ ಕೊಟ್ಟಿದ್ದರು ಎಂದು ಮನೆಯವರು ಹೇಳಿದ್ದಾರೆ. ಮಸೂದ್ ಆ ಕರುವನ್ನು ಮೇಯಿಸಲು ಕರೆದೊಯ್ಯುತ್ತಿದ್ದ. ಕೆಲ ಯುವಕರು ಈತನನ್ನು ಗುರಾಯಿಸುತ್ತಿದ್ದರು. ಘರ್ಷಣೆ ನಡೆದು ಸಂಧಾನಕ್ಕೆ ಕರೆದಿದ್ದರು. ಆದ್ರೆ ಸಂಧಾನಕ್ಕೆ ಕರೆದವರು ಮಸೂದ್ ಹತ್ಯೆ ಮಾಡಿದ್ದಾರೆ. ಹತ್ಯೆ ನಡೆದ ದಿನವೇ ಕರುವೂ ಸತ್ತು ಹೋಗಿದೆ ಎಂದು ತಿಳಿಸಿದರು.

ಪೊಲೀಸ್ ಮಹಾನಿರ್ದೇಶಕರು ನಾನು ಬಂದ ಫ್ಲೈಟ್‌ನಲ್ಲಿ ಬಂದ್ರು. ಡಿಜಿ ಬಂದಿದ್ದು ನೋಡಿ ಮಹತ್ವದ ಹೇಳಿಕೆ ಕೊಡ್ತಾರೆ ಅಂದುಕೊಂಡಿದ್ದೆ. ಹತ್ಯೆ ನಡೆದಾಗಲೇ ಪೊಲೀಸ್ ಮಹಾನಿರ್ದೇಶಕರು ಬರಬೇಕಿತ್ತು. ಬೆಂಗಳೂರಿನಲ್ಲಿ ಯಾವ ಮಹಾ ಘನಂದಾರಿ‌ ಕೆಲಸ ಇದೆ. ವರ್ಗಾವಣೆ ಸೇರಿದಂತೆ ಕೆಲ ಹಣದ ವ್ಯವಹಾರ ನಡೆಸುತ್ತಿದ್ರಾ? ನನಗೆ ಹೇಳುವುದಕ್ಕೆ ಯಾವುದೇ ಮುಲಾಜಿಲ್ಲ ಎಂದು ಕಿಡಿಕಾರಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *