ಕಾಂಗ್ರೆಸ್‍ನವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ – ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಕಿಡಿ

Public TV
4 Min Read

– ಜೆಡಿಎಸ್‍ನಲ್ಲಿ ಇದ್ದಾಗಲೇ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ರು
– ಕುಮಾರಸ್ವಾಮಿ ಕಾರ್ಯಕ್ಕೆ ಕಾಂಗ್ರೆಸ್‍ನವರು ಮಸಿ ಬಳಿತಿದ್ದಾರೆ
– ಕೈ ನಾಯಕರನ್ನು ನಿಯಂತ್ರಣಕ್ಕೆ ತನ್ನಿ ಎಂದು ಕೈ ಹೈಮಾಂಡ್‍ಗೆ ಕೈಮುಗಿದ ಎಚ್‍ಡಿಡಿ

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದು ಏಳು ತಿಂಗಳು ತುಂಬದಿದ್ದರೂ ಕಾಂಗ್ರೆಸ್‍ನವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೇರವಾಗಿಯೇ ಅಸಮಾಧಾನವನ್ನು ಹೊರಹಾಕಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, 2004ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರಕ್ಕೆ ನಾವು ಬೆಂಬಲ ಕೊಟ್ಟಿದ್ವಿ. ಆದರೆ ಅವರೇ ನಮ್ಮ ಬೆಂಬಲ ವಾಪಸ್ ಕಳಿಸಿದರು. ಈಗ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡಿ ಸರ್ಕಾರ ಮಾಡುತ್ತಿದ್ದೇವೆ. ಕಾಂಗ್ರೆಸ್ ನಾಯಕರ ಹೇಳಿಕೆಯಿಂದ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳುವ ಪರಿಸ್ಥಿತಿ ಎದುರಾಯಿತು ಎಂದು ಕಿಡಿಕಾರಿದರು.

ನನ್ನ ಚಿಂತೆ ಇರುವುದು ಜೆಡಿಎಸ್ ಪಕ್ಷ ಹೇಗೆ ಉಳಿಸಬೇಕು ಅಂತ. ಪಕ್ಷ ಉಳಿಸುವುದು ಪಕ್ಷದ ಕಾರ್ಯಕರ್ತರ ಮೇಲಿದೆ. ನನ್ನ ರಾಜಕೀಯ ಏಳು-ಬೀಳಿನಲ್ಲಿ ಕೈ ಹಿಡಿದು ನಡೆಸಿದವರು ರಾಜ್ಯದ ಜನರು. ರೈತರು ನಮ್ಮ ಬೆನ್ನಿಗೆ ನಿಂತಿದ್ದಾರೆ. ಇದನ್ನ ನಾಟಕೀಯವಾಗಿ ನಾನು ಹೇಳುತ್ತಿಲ್ಲ ಎಂದು ದೇವೇಗೌಡರು ತಿಳಿಸಿದರು.

ಸಮ್ಮಿಶ್ರ ಸರ್ಕಾರದ 7 ತಿಂಗಳ ಪ್ರಯಾಣದಲ್ಲಿ ಏನೇನೋ ಘಟನೆ ನಡೆದಿವೆ. ಇದರ ಬಗ್ಗೆ ನಾನು ಏನು ಮಾತನಾಡಿಲ್ಲ. ನಮ್ಮ ಪಕ್ಷದಿಂದ ಕಾಂಗ್ರೆಸ್‍ಗೆ ಸೇರಿದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅವರು 5 ವರ್ಷ ಅಧಿಕಾರ ಪೂರ್ಣಗೊಳಿಸಿದರು. ಇದನ್ನು ಬಹಳ ನೋವಿನಿಂದ ಹೇಳುತ್ತಿದ್ದೇನೆ. ನಾನು ಏಕಾಂಗಿ ಆಗಿದ್ದಾಗ ನಾಡಿನ ರೈತರು ನನ್ನ ಬೆಂಬಲಕ್ಕೆ ನಿಂತರು ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

ಕುಮಾರಸ್ವಾಮಿ ಸಿಎಂ ಹುದ್ದೆ ಬೇಡ ಅಂದರೂ ಕಾಂಗ್ರೆಸ್‍ನವರು ಕೊಟ್ಟರು. ಸಿದ್ದರಾಮಯ್ಯ ಅವರು ಜೆಡಿಎಸ್ ಅಧ್ಯಕ್ಷರಾಗಿ ಏನೂ ಕೆಲಸ ಮಾಡಲಿಲ್ಲ. ಆಗ ನನಗಾಗಿರುವ ನೋವು ದೇವರಿಗೆ ಮಾತ್ರ ಗೊತ್ತು. ಈ ಹಿಂದೆ ಕಾಂಗ್ರೆಸ್ ಜೊತೆಗೆ ಮೈತ್ರಿ ಸರ್ಕಾರ ರಚಿಸಿದಾಗ, ಸೋನಿಯಾ ಗಾಂಧಿ ಅವರ ಮೇಲೆ ಒತ್ತಡ ಹಾಕಿದರೆ ನಾನು ಮುಖ್ಯಮಂತ್ರಿ ಆಗುತ್ತಿದೆ ಅಂತ ಸಿದ್ದರಾಮಯ್ಯ ಹೇಳಿದ್ದರು. ನಾನು ದೆಹಲಿಗೆ ಹೋಗುವಾಗಲೂ ನನ್ನ ಸಿಎಂ ಮಾಡಬಹುದಿತ್ತು ಅಂತ ಸಿದ್ದರಾಮಯ್ಯ ಹೇಳಿದ್ದರು. ಇಲ್ಲಿಯವರೆಗೂ ನಾನು ಅದರ ಬಗ್ಗೆ ಏನು ಮಾತನಾಡಿಲ್ಲ ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಬಡವರು, ಏಡ್ಸ್ ಪೀಡಿತರು ಬಂದರೆ ಎತ್ತಿ ಮುದ್ದಾಡುತ್ತಾರೆ. ಆದರೆ ಕಾಂಗ್ರೆಸ್ ಶಾಸಕರಿಗೆ ಸಮಯ ಕೊಡುವುದಿಲ್ಲ ಅಂತ ಆರೋಪ ಮಾಡುತ್ತಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಬಿಟ್ಟು ಉಳಿದೆಲ್ಲ ನಿಗಮ-ಮಂಡಳಿಯನ್ನು ಕುಮಾರಸ್ವಾಮಿ ಕ್ಲಿಯರ್ ಮಾಡಿದ್ದಾರೆ. ಹೀಗಿದ್ದರೂ ಎಲ್ಲರೂ ಮಾತನಾಡುತ್ತಿದ್ದಾರೆ. ಹೀಗೆ ಮಾಡಿದರೆ ಸರ್ಕಾರ ನಡೆಸುವುದಕ್ಕೆ ಹೇಗೆ ಸಾಧ್ಯ? ಕಾಂಗ್ರೆಸ್ ಶಾಸಕರು ಒಬ್ಬೊಬ್ಬರು ನಿತ್ಯ ಒಂದೊಂದು ಮಾತು ಆಡುತ್ತಾರೆ ಎಂದು ಕುಟುಕಿದರು.

ಇದೆಲ್ಲವನ್ನೂ ನಿಯಂತ್ರಣಕ್ಕೆ ತರಬೇಕು ಅಂತ ಕಾಂಗ್ರೆಸ್ ಹೈಕಮಾಂಡ್‍ಗೆ ಕೈ ಮುಗಿದು ಕೇಳಿಕೊಳುತ್ತೇನೆ. ಕುಮಾರಸ್ವಾಮಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದಿದ್ದರು. ಈ ಹೊಂದಾಣಿಕೆ ದೇಶದ ಒಳಿತಿಗಾಗಿ. ಇದನ್ನು ರಾಜ್ಯದ ಕಾಂಗ್ರೆಸ್ ಶಾಸಕರು ಹಾಗೂ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇವಲ 37 ಸ್ಥಾನ ಹೊಂದಿರುವ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಅಂತ ಹೇಳಿದರು. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಯೋಜನೆಗಳನ್ನು ಮುಂದುವರಿಸುತ್ತೇನೆ ಅಂತ ಭರವಸೆ ನೀಡಿದ್ದಾರೆ. ರೈತರಿಗೆ, ವೃದ್ಧರಿಗೆ, ಗರ್ಭಿಣಿಯರಿಗೆ ಹಣ ನೀಡುವ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲ ಮಾಡುತ್ತಿದ್ದರೂ ಸಿಎಂ ವಿರುದ್ಧ ನಿತ್ಯ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ ಎಂದು ಗುಡುಗಿದರು.

ಸಿಎಂ ಕುಮಾರಸ್ವಾಮಿ ಮಾಡುತ್ತಿರುವ ಕಾರ್ಯಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ನೀವು ಐದು ವರ್ಷ ಸಿಎಂ ಆಗಿದ್ದೀರಿ. ನೀವು ಮಾಡಿದ ಕೆಲಸದ ಬಗ್ಗೆ ನಾನು ಒಂದು ಶಬ್ದ ಮಾತನಾಡಲಿಲ್ಲ. ಅಕ್ರಮವೋ ಸಕ್ರಮವೋ ಏನೂ ಮಾತಾಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಎಚ್‍ಡಿಡಿ ಕೆಂಡಾಮಂಡಲವಾದರು.

ಕುಮಾರಸ್ವಾಮಿ ಅವರು ಎಲ್ಲೆ ಮೀರಿ ಯಾವತ್ತೂ ಮಾತನಾಡಿಲ್ಲ. ಇದು ಮೈತ್ರಿ ಸರ್ಕಾರ ನೀವೇ ಸಹಿಸಿಕೊಂಡು ಹೋಗಿ ಅಂತ ನಮ್ಮ ಶಾಸಕರಿಗೆ ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗೆ ನಾನು ಇದೂವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅವರು ಖಾಸಗಿ ವಾಹಿನಿಯಲ್ಲಿ ಮಾತನಾಡಿದ್ದನ್ನು ನೋಡಿದ ಮೇಲೆ ನನಗೂ ಬೇಸರವಾಗಿದೆ ಎಂದರು.

ಜೆಡಿಎಸ್ ಕುಟುಂಬದ ಪಕ್ಷವಲ್ಲ. ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಇಬ್ರಾಹಿಂ ಅಧ್ಯಕ್ಷ ಸ್ಥಾನದಲ್ಲಿದ್ದರು. ಹೀಗಿದ್ದರೂ ಕುಟುಂಬ ಪಕ್ಷ ಎನ್ನುವುದು ಸರಿಯೇ ಎಂದು ಪ್ರಶ್ನಿಸಿ ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ರಾಯಚೂರಿನಲ್ಲಿ ಪರಿಶಿಷ್ಟ ಜಾತಿ, ಪಂಗಡ ಸಮಾವೇಶವನ್ನು ಫೆಬ್ರವರಿ 10 ರಂದು ನಡೆಸಲಾಗುತ್ತದೆ. ಜೊತೆಗೆ ಹುಬ್ಬಳ್ಳಿಯಲ್ಲಿ ರೈತರ ಸಮಾವೇಶ ಮಾಡುತ್ತೇನೆ ಎಂದು ದೇವೇಗೌಡ ಅವರು ಹೇಳಿದರು.

ರಾಷ್ಟ್ರದಲ್ಲಿ ಮೂರು ಸಮ್ಮಿಶ್ರ ಸರ್ಕಾರಗಳು ಆಡಳಿತ ಮಾಡಿವೆ. ನಾನು ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಪ್ರಧಾನಿಯಾಗಿದ್ದೆ. ಇತ್ತ ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಸರ್ಕಾರದಲ್ಲಿ ಷರತ್ತು ಇರಲಿಲ್ಲ. ಅವರ ಸರ್ಕಾರ ಬೀಳುವುದಕ್ಕೆ ನಾನಾಗಲೀ ಕುಮಾರಸ್ವಾಮಿ ಆಗಲಿ ಕಾರಣವಲ್ಲ. ಇವತ್ತು ಅದೇ ಕಾಂಗ್ರೆಸ್ ಬೆಂಬಲದಿಂದ ಕುಮಾರಸ್ವಾಮಿ ಸಿಎಂ ಆಗಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರವಿದ್ದಾಗ ದೊಡ್ಡಳ್ಳಿ ಗೋಲಿಬಾರ್ ನಡೆಯಿತು. ನಾನು ಯಾವ ಸಮುದಾಯವೆಂದು ನೋಡಲಿಲ್ಲ. ಆದರೆ ಇವತ್ತು ಹೇಳಬೇಕಾಗಿದೆ. ಗೋಲೀಬಾರ್‍ನಲ್ಲಿ ಸತ್ತವನು ಕುರುಬ ಸಮುದಾಯಕ್ಕೆ ಸೇರಿದವನು. ಮೃತನ ಕುಟುಂಬಸ್ಥರಿಗೆ ಸಹಾಯ ಮಾಡಿದೆ. ಪ್ರತಿ ಬಾರಿಯೂ ನಾನು ಕುರುಬ ಸಮುದಾಯಕ್ಕೆ ಏನೂ ಮಾಡಲಿಲ್ಲ ಅಂತಾ ಮಾತನಾಡುವವರಿಗೆ ಇದು ತಿಳಿಯಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮತ್ತೆ ಟಾಂಗ್ ಕೊಟ್ಟರು.

https://www.youtube.com/watch?v=ITR67bRRNNE

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *