ಎಚ್‍ಡಿಡಿ, ನಿಖಿಲ್, ಪ್ರಜ್ವಲ್ ಗೆಲುವು ಖಚಿತ: ರಾಜಗುರು ದ್ವಾರಕನಾಥ್

Public TV
2 Min Read

– ಸಿಎಂ ಟೆಂಪಲ್ ರನ್‍ನಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತೆ

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ದೇವೇಗೌಡ, ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಹಾಗೂ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಗೆಲುವು ಖಚಿತ ಎಂದು ರಾಜಗುರು ದ್ವಾರಕನಾಥ್ ಭವಿಷ್ಯ ನುಡಿದಿದ್ದಾರೆ.

ಸಿಎಂ ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಗೊಂದಲದಲ್ಲಿ ಇಲ್ಲ, ಪ್ರಶಾಂತವಾಗಿದ್ದಾರೆ. ಸುಮ್ಮನೆ ಆರೋಪ ಮಾಡುವ ಜನರ ಮಾತುಗಳ ಬಗ್ಗೆ ಹೆಚ್ಚು ವಿಚಾರ ಮಾಡದಂತೆ, ಯಾವುದಕ್ಕೂ ಧೈರ್ಯ ಕಳೆದುಕೊಳ್ಳದಂತೆ ಸಿಎಂಗೆ ಸಲಹೆ ನೀಡಿದ್ದೇನೆ ಎಂದರು.

ಕುಕ್ಕೆಯ ವಿಚಾರವಾಗಿ ಸಿಎಂ ಕುಮಾರಸ್ವಾಮಿಯವರು ನನ್ನ ಜೊತೆ ಮಾತಾನಾಡಿದ್ದಾರೆ. ಸಾರ್ವಜನಿಕ ದೇಣಿಗೆಯ ಮೂಲಕ ರಥ ನಿರ್ಮಿಸುವ ಸಲಹೆಯನ್ನು ನೀಡಿದ್ದೇನೆ. ಇದರ ಜೊತೆಗೆ ಹುಂಡಿಯಲ್ಲಿ ಭಕ್ತರು ಹಾಕಿದ ಚಿನ್ನ, ಬೆಳ್ಳಿಯನ್ನು ಬಳಕೆ ಮಾಡುವಂತೆ ಹೇಳಿದ್ದೇನೆ. ಟ್ಯಾಕ್ಸ್ ಪೇಯರ್ಸ್ ಹಣವನ್ನು ನಾವು ಬಳಕೆ ಮಾಡುವುದು ಬೇಡ ಅಂತ ಸಿಎಂಗೆ ಸಲಹೆ ನೀಡಿರುವೆ. ಅವರು ಕೂಡ ಟ್ಯಾಕ್ಸ್ ಪೇಯರ್ಸ್ ಹಣವನ್ನು ಬಳಕೆ ಮಾಡುವುದಕ್ಕೆ ಒಪ್ಪಿಲ್ಲ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಸಿಎಂ ಕುಮಾರಸ್ವಾಮಿ ಅವರು ಟೆಂಪಲ್‍ರನ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯದ ಮಹಾರಾಜ ದೇವಸ್ಥಾನಕ್ಕೆ ಹೋಗಬೇಕು. ಜನರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳಬೇಕಾಗುತ್ತದೆ. ಮಹಾರಾಜನಾಗಿ ನಾಡಿನ ಜನತೆಗೆ ನಡೆ ನುಡಿ ಕಲಿಸುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೊಲ್ಲೂರು ಮೂಕಾಂಬಿಕಾ ದೇವಾಸ್ಥಾನವನ್ನು ಶಾರದಪೀಠಕ್ಕೆ ಕೊಡುವ ಬಗ್ಗೆ ಗುಸು ಗುಸು ಸುದ್ದಿಯಾಗುತ್ತಿದೆ. ಈ ಕುರಿತು ಕುಮಾರಸ್ವಾಮಿ ಅವರನ್ನು ಕೇಳಿದ್ದೇನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಸಲಹೆಯನ್ನು ಕೇಳದೆ ಯಾವುದಕ್ಕೂ ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಕ್ಕೆ ನಿರ್ಬಂಧ ಮಾಡಲ್ಲ, ಸಹಜವಾಗಿ ಇರುವೆ ಅಂತ ಮಾತು ಕೊಟ್ಟಿದ್ದಾರೆ. ಇನ್ನು ಮುಂದೆ ಅವರಿಗೆ ಬೇಕಾದರೆ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ನಿರ್ಬಂಧವನ್ನು ಮಾಡುವುದಿಲ್ಲ. ನಗುನಗುತ್ತಾ ಇರುವುದಾಗಿ ಹೇಳಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ತಡೆಯುವುದಕ್ಕೆ ಆಗಲ್ಲ. ಆದರೆ ಬಿಜೆಪಿ ಒಂದೇ ಬಹುಮತದಿಂದ ಬರಲ್ಲ ಅಂತ ಕುಮಾರಸ್ವಾಮಿ ಅವರಿಗೆ ನಾನು ಹೇಳಿದ್ದೇನೆ.

ಕಚ್ಚಾಡಿಕೊಂಡು ಮೈತ್ರಿಯಿಂದ ಹೊರಬಿದ್ದರೆ ಕಾಂಗ್ರೆಸ್‍ಗೆ ಸರ್ಕಾರವಂತೂ ರಚನೆ ಮಾಡುವುದಕ್ಕೆ ಆಗಲ್ಲ. ಬಿಜೆಪಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅವಕಾಶ ಇಲ್ಲ. ಏಕೆಂದರೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೇವರ ಅನುಗ್ರಹವಿದೆ. ಕುಮಾರಸ್ವಾಮಿ ಸರ್ಕಾರ ಬಿದ್ದರೆ ನನಗೆ, ಪ್ರಜೆಗಳಿಗೆ ದುಃಖವಾಗುತ್ತದೆ ಎಂದು ದ್ವಾರಕನಾಥ್ ಗುರೂಜಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *