ನ್ಯೂಯಾರ್ಕ್: ಹೆಚ್-1ಬಿ ವೀಸಾಕ್ಕೆ (US H1B Visa) ಹೊಸದಾಗಿ ಸಲ್ಲಿಕೆಯಾಗುವ ಅರ್ಜಿಗಳ ಶುಲ್ಕ ಹೆಚ್ಚಳ ವಾಸ್ತವ್ಯ ಅವಧಿಯ ವಿಸ್ತರಣೆ ಕೋರಿದ ಅರ್ಜಿಗಳಿಗೆ ಅನ್ವಯಿಸುವುದಿಲ್ಲ. ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆಗಳ (ಯುಎಸ್ಸಿಐಎಸ್) ಇಲಾಖೆ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಈ ವಿಚಾರ ತಿಳಿಸಲಾಗಿದೆ.
ಹೊಸ ಶುಲ್ಕ ನೀತಿ ಪ್ರಶ್ನಿಸಿ ಅಮೆರಿಕ ವಾಣಿಜ್ಯ ಮಂಡಳಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದರ ಬೆನ್ನಲ್ಲೇ, ಈ ಹೊಸ ಮಾರ್ಗಸೂಚಿಯನ್ನು ಯುಎಸ್ಸಿಐಎಸ್ ಬಿಡುಗಡೆ ಮಾಡಿದೆ. ಇನ್ನೂ ಹೆಚ್-1ಬಿ ವೀಸಾ ಹೊಂದಿರುವವರು ಅಮೆರಿಕಕ್ಕೆ ಬರಲು, ಇತರ ದೇಶಗಳಿಗೆ ಸಂಚರಿಸುವುದಕ್ಕೆ ಕೂಡ ಈ ಆದೇಶ ನಿರ್ಬಂಧ ಹೇರುವುದಿಲ್ಲ ಎಂದು ತಿಳಿಸಲಾಗಿದೆ.
ಹೆಚ್-1ಬಿ ವೀಸಾಕ್ಕಾಗಿ ಹೊಸದಾಗಿ ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದ ಶುಲ್ಕವನ್ನು 1 ಲಕ್ಷ ಡಾಲರ್ಗೆ (88 ಲಕ್ಷ ರೂ.) ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಟ್ರಂಪ್ ಸೆ.19ರಂದು ಆದೇಶಿಸಿದ್ದರು.