ಮೇ 17ರ ಒಳಗಡೆ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಿ: ಕೋರ್ಟ್‌

Public TV
1 Min Read

ಲಕ್ನೋ: ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಮೇ 17ರ ಒಳಗಡೆ ಪೂರ್ಣಗೊಳಿಸುವಂತೆ ವಾರಣಾಸಿ ಸ್ಥಳೀಯ ಕೋರ್ಟ್‌ ಮಹತ್ವದ ಆದೇಶ ಪ್ರಕಟಿಸಿದೆ.

ಅಷ್ಟೇ ಅಲ್ಲದೇ ಸಮೀಕ್ಷೆ ನಡೆಸಲಿರುವ ಆಯುಕ್ತರನ್ನು ಬದಲಾಯಿಸಬಾರದು ಮತ್ತು ಮಸೀದಿಯ ನೆಲಮಹಡಿಯನ್ನು ತರೆಯಬೇಕು. ಸರ್ವೆ ಕಾರ್ಯಕ್ಕೆ ಅಡ್ಡಿ ಮಾಡಿದರೆ ಜಿಲ್ಲಾಡಳಿತ ಎಫ್‌ಐಆರ್‌ ಹಾಕಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಈ ಆದೇಶದಿಂದ ಹಿಂದೂ ಅರ್ಜಿದಾರರಿಗೆ ದೊಡ್ಡ ಮುನ್ನಡೆ ಸಿಕ್ಕಿದ್ದು ಜ್ಞಾನವಾಪಿ ಮಸೀದಿ ಹೋರಾಟಗಾರರಿಗೆ ಹಿನ್ನಡೆಯಾಗಿದೆ.

 

ಏನಿದು ಪ್ರಕರಣ?
ಜ್ಞಾನವಾಪಿ ಮಸೀದಿ ಹೊರ ಗೋಡೆಗೆ ತಾಗಿಕೊಂಡೇ ಇರುವ ಶೃಂಗಾರ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪೂಜೆ ನರೆವೇರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿ ದೆಹಲಿ ಮೂಲದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು 2021ರ ಏಪ್ರಿಲ್ 21ರಂದು ವಾರಣಾಸಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಲ್ಲಿ ಇರುವ ದೇವತಾ ವಿಗ್ರಹಗಳಿಗೆ ಯಾವುದೇ ಹಾನಿ ಉಂಟುಮಾಡದಂತೆ ಸೂಚಿಸಬೇಕು ಎಂದು ಕೋರಿದ್ದರು.

ಈ ವಿಚಾರವಾಗಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈದ್ ಹಬ್ಬದ ನಂತರ ಮತ್ತು ಮೇ 10 ರೊಳಗೆ ಕಾಶಿ ವಿಶ್ವನಾಥ ಮಂದಿರ- ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ವೀಡಿಯೋ ಚಿತ್ರೀಕರಣ ನಡೆಸುವಂತೆ ಏಪ್ರಿಲ್ 26ರಂದು ಆದೇಶಿಸಿತ್ತು. ವೀಡಿಯೋ ಚಿತ್ರೀಕರಣದ ವೇಳೆ ಅಡ್ವೋಕೇಟ್ ಕಮಿಷನರ್, ಎರಡೂ ಕಡೆಯ ಕಕ್ಷೀದಾರರು ಮತ್ತು ಒಬ್ಬ ಸಹಾಯಕ ಮಾತ್ರ ಇರಬಹುದು ಎಂದು ತಿಳಿಸಲಾಗಿತ್ತು. ಇದರಂತೆ ಮೇ 6 ಮತು 7 ರಂದು ವೀಡಿಯೋ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ವೀಡಿಯೋ ಚಿತ್ರೀಕರಣ ಮತ್ತು ಸಮೀಕ್ಷೆ ನಡೆಸಲು ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ ಅವಕಾಶ ನೀಡಿರಲಿಲ್ಲ. ವೀಡಿಯೋ ಶೂಟಿಂಗ್‌ ವೇಳೆ ಹೈಡ್ರಾಮಾ ನಡೆದಿತ್ತು. ಈಗ ಕೋರ್ಟ್‌ ಮೇ 17ರ ಒಳಗಡೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *