ಜ್ಞಾನವಾಪಿ ಕೇಸ್‌ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ: ವಾರಣಾಸಿ ಕೋರ್ಟ್‌ ಹೇಳಿದ್ದೇನು?

Public TV
3 Min Read

ಲಕ್ನೋ: ಜ್ಞಾನವ್ಯಾಪಿ ಮಸೀದಿ ವಿವಾದಕ್ಕೆ(Gyanvapi Mosque Suit) ಮಹತ್ವದ ತಿರುವು ಸಿಕ್ಕಿದೆ. ಹಿಂದೂಗಳಿಗೆ ಮೊದಲ ಹಂತದ ಜಯ ಲಭಿಸಿದೆ. ಮಸೀದಿಯ ಆವರಣದಲ್ಲಿ ಪತ್ತೆಯಾಗಿದ್ದ ಶಿವಲಿಂಗ ಮತ್ತು ಶೃಂಗಾರಗೌರಿ ಪೂಜೆಗೆ ಅನುಮತಿ ಕೋರಿ ಐದು ಮಂದಿ ಮಹಿಳೆಯರು ಸಲ್ಲಿಸಿದ್ದ ಅರ್ಜಿಗಳು ವಿಚಾರಣೆಗೆ ಯೋಗ್ಯವಾಗಿವೆ ಎಂದು ವಾರಣಾಸಿ ಜಿಲ್ಲಾ ಕೋರ್ಟ್ (Varanasi Court) ಮಹತ್ವದ ಆದೇಶ ಪ್ರಕಟಿಸಿದೆ.

1991ರ ಪೂಜಾ ಸ್ಥಳಗಳ ಕಾಯ್ದೆಯ(Places of Worship Act) ಪ್ರಕಾರ ಈ ಜಾಗದಲ್ಲಿ ಪೂಜೆ ಮಾಡಲು ಸಾಧ್ಯವಿಲ್ಲ ಎಂದು ಮಸೀದಿ ಪರ ಅರ್ಜಿದಾರರು ವಾದ ಮಾಡಿದ್ದರು. ಆದರೆ ನ್ಯಾ. ಎಕೆ ವೈಷ್ಣವ್‌ ಈ ವಾದವನ್ನು ಪರಿಗಣಿಸದೇ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವುಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿ ಮಸೀದಿ ಪರ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಯೋಗ್ಯ ಎಂಬ ಆದೇಶ ಪ್ರಕಟವಾದ ಹಿನ್ನೆಲೆಯಲ್ಲಿ ಕೋರ್ಟ್ ಮಸೀದಿ ಒಳಗಡೆ ಪೂಜೆಗೆ ಅವಕಾಶ ನೀಡಬೇಕಾ? ಬೇಡವೋ ಎಂಬ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ. ಮುಂದಿನ ಅರ್ಜಿಯ ವಿಚಾರಣೆ ಸೆ.22 ರಂದು ನಡೆಯಲಿದೆ.

ಮಸೀದಿ ಪರ ವಕೀಲರ ವಾದ ಏನಿತ್ತು?
1991ರ ಪೂಜಾ ಸ್ಥಳಗಳ ಕಾಯ್ದೆಯ ಪ್ರಕಾರ ದೇಶದಲ್ಲಿರುವ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆಯ ಸ್ಥಳಗಳು 1947ರ ಆಗಸ್ಟ್ 15ರಂದು ಹೇಗಿತ್ತೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು ಮತ್ತು ಅದರ ಸ್ವರೂಪವನ್ನು ಬದಲಾಯಿಸುವುದಕ್ಕಾಗಿ ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡುವುದಕ್ಕೆ ಅವಕಾಶ ಇಲ್ಲ ಎಂದು ಅಂಜುಮಾನ್‌ ಮಸೀದಿಯ ಪರ ವಕೀಲರು ವಾದಿಸಿದ್ದರು. ಇದನ್ನೂ ಓದಿ: ಷರತ್ತು ವಿಧಿಸಿ ಭಾರತಕ್ಕೆ ಇನ್ನಷ್ಟು ಡಿಸ್ಕೌಂಟ್ ದರದಲ್ಲಿ ತೈಲ ನೀಡಲು ಮುಂದಾದ ರಷ್ಯಾ

ಕೋರ್ಟ್‌ ಹೇಳಿದ್ದು ಏನು?
ಮಸೀದಿ ಒಳಗಡೆ ಇರುವ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವುಂತೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ 1993ರ ವರೆಗೆ ಪೂಜೆ ಮಾಡಲು ಅವಕಾಶವಿತ್ತು. ಆದರೆ 1993ರ ನಂತರ ಉತ್ತರ ಪ್ರದೇಶ ಸರ್ಕಾರ ನಿಯಂತ್ರಣದ ಅಡಿ ವರ್ಷಕ್ಕೆ ಒಂದು ಬಾರಿ ಪೂಜೆ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ. ಹೀಗಾಗಿ ವಿವಾದಿತ ಜಾಗದಲ್ಲಿ 1947ರ ಆಗಸ್ಟ್‌ 15 ರ ನಂತರವೂ ಪೂಜೆ ಸಲ್ಲಿಕೆಗೆ ಅನುಮತಿ ಇದ್ದ ಕಾರಣ 1991ರ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಯ ಒಳಗಡೆ ಬರುವುದಿಲ್ಲ. ನ್ಯಾಯಾಲಯದಲ್ಲಿ ದಾವೆ ಹೂಡದಂತೆ ನಿರ್ಬಂಧಿಸಲು ಸಾಧ್ಯವಿಲ್ಲ.

ಅರ್ಜಿದಾರರು ಇಲ್ಲಿ ಪೂಜೆ ಮಾಡಲು ಮಾತ್ರ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ ಹೊರತು ಈ ವಿವಾದಿತ ಜಾಗದ ಸಂಪೂರ್ಣ ಹಕ್ಕು ದೇವಸ್ಥಾನಕ್ಕೆ ಸೇರಬೇಕೆಂದು ಕೇಳಿಲ್ಲ. ಹೀಗಾಗಿ ಇದು ಪೂಜಾ ಸ್ಥಳಗಳ ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲ. ಪೂಜೆಗೆ ಮಾತ್ರ ಸೀಮಿತವಾಗಿ ಅರ್ಜಿ ಸಲ್ಲಿಸಿದರಿಂದ ಇದು ಮೂಲಭೂತ ಹಕ್ಕು ಜೊತೆಗೆ ಇದು ಸಾಂಪ್ರದಾಯಿಕ ಧಾರ್ಮಿಕ ಹಕ್ಕು ಆಗಿದೆ.

ಪ್ರಶ್ನೆ ಮಾಡುತ್ತೇವೆ:
ಜಿಲ್ಲಾ ಕೋರ್ಟ್‌ ನೀಡಿದ ಆದೇಶವನ್ನು ಪ್ರಶ್ನಿಸಿ ನಾವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಅಂಜುಮಾನ್‌ ಇಂತಜಾಮೀಯಾ ಮಸೀದಿ ಸಮಿತಿ ಹೇಳಿದೆ.

ಏನಿದು ಪ್ರಕರಣ?
ಈ ಹಿಂದೆ ಕೆಳ ಹಂತದ ಕೋರ್ಟ್ ಮಸೀದಿಯಲ್ಲಿ ಉತ್ಖನನಕ್ಕೆ ಅನುಮತಿ ನೀಡಿತ್ತು. ಉತ್ಖನನ ವೇಳೆ ಮಸೀದಿಯಲ್ಲಿ ಶೃಂಗಾರ ಗೌರಿ ಮೂರ್ತಿ ಮತ್ತು ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಬಳಿಕ ಹಿಂದೂ ಧಾರ್ಮಿಕ ಕುರುಹುಗಳಿಗೆ ನಿತ್ಯ ಪೂಜೆ ಸಲ್ಲಿಸಲು ಅನುಮತಿ ಕೋರಿ ಸೀತಾ ಸಾಹು ಸೇರಿ, ಐವರು ಮಹಿಳೆಯರು ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಯಾಗಿ ಮಸೀದಿಯ ಆಡಳಿತ ಮಂಡಳಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಐವರ ಅರ್ಜಿಗಳು ವಿಚಾರಣೆಗೆ ಯೋಗ್ಯವೇ ಎಂಬುದನ್ನು ಮೊದಲು ನಿರ್ಧರಿಸಿ ಎಂದು ವಾರಣಾಸಿ ಕೋರ್ಟ್‍ಗೆ ನಿರ್ದೇಶನ ನೀಡಿತ್ತು.

1991ರ ಕಾಯ್ದೆ ಪ್ರಶ್ನಿಸಿ ಸುಪ್ರೀಂನಲ್ಲಿದೆ ಅರ್ಜಿ
ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಮತ್ತು ಇತರರು 1991ರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯಲ್ಲಿರುವ ವಿವಿಧ ಅವಕಾಶಗಳ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ನಡೆಯಬೇಕಿದೆ.

ಹಲವು ಕಾರಣಗಳಿಂದಾಗಿ ಕಾಯ್ದೆಯ ಅಸಾಂವಿಧಾನಿಕವಾಗಿದೆ. ಹಿಂದೂ, ಜೈನ, ಬೌದ್ಧ ಮತ್ತು ಸಿಖ್ಖರ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆ ಸ್ಥಳಗಳನ್ನು ನಿರ್ವಹಿಸುವ ಹಕ್ಕನ್ನು ಈ ಕಾಯ್ದೆಯಿಂದ ನಿರ್ಬಂಧಿಸಲಾಗಿದೆ. ಮಥುರಾದಲ್ಲಿರುವ ಕೃಷ್ಣ ಜನ್ಮಸ್ಥಾನದ ಜಾಗಕ್ಕಾಗಿ ಹಿಂದೂಗಳು ನೂರಾರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಶಾಂತಿಯುತವಾದ ಚಳವಳಿ ನಡೆಸುತ್ತಿದ್ದಾರೆ. ಆದರೆ ಈ ಕಾಯ್ದೆ ರೂಪಿಸುವಾಗ ಕೇಂದ್ರ ಸರ್ಕಾರ ಆಯೋಧ್ಯೆಯ ರಾಮ ಜನ್ಮಭೂಮಿ ಪ್ರಕರಣವನ್ನು ಮಾತ್ರ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇರಿಸಿದೆ. ಕೃಷ್ಣ ಜನ್ಮಸ್ಥಾನವಾದ ಮಥುರಾವನ್ನು ಹೊರಗೆ ಇರಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *