ರಶ್ಮಿಕಾ ಪಾಪದ ಹುಡುಗಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದ ಸಾಹಿತಿ ಗುರುರಾಜ ಕೊಡ್ಕಣಿ

Public TV
2 Min Read

ನ್ಯಾಷನಲ್ ಕ್ರಶ್ ಎಂದೇ ಖ್ಯಾತರಾಗಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಚರ್ಚೆಯಲ್ಲವನ್ನೂ ಗಮನಿಸಿರುವ ಸಾಹಿತಿ ಗುರುರಾಜ ಕೊಡ್ಕಣಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಉಳಿದ ಎಷ್ಟೊ ನಟಿಯರಿಗೆ ಹೋಲಿಸಿದರೆ ನಟಿ ರಶ್ಮಿಕಾ ಮಂದಣ್ಣ  ಕಳಪೆ ನಟಿ ಮತ್ತು ಪಡೆದ ಹೆಸರಿನಷ್ಟು ಮಹಾ ಸುಂದರಿಯಲ್ಲ ಎನ್ನುವುದು ನನ್ನ ತೀರ ವೈಯಕ್ತಿಕ ಅಭಿಪ್ರಾಯ. ಆದರೆ ಆಕೆಯ  ಹುಟ್ಟು ಹಬ್ಬಕ್ಕೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದಾಗ ನನಗೆ ರಕ್ಷಿತ್ ಮನಸ್ಥಿತಿಯ ಬಗ್ಗೆ ಸಣ್ಣ ಅನುಮಾನವೇ. ಹಿಂದಿನ ಬಾರಿ ಅಂತದ್ದೊಂದು ಪೋಸ್ಟ್ ಹಾಕಿದ ಮೇಲೆ ಜನರಿಂದ ಆತನ ‘ಅಮರ ಪ್ರೇಮ’ದ ಪ್ರಶಂಸೆ, ಜೊತೆಗೆ ರಶ್ಮಿಕಾಗೆ ಹೆಚ್ಚುಕಡಿಮೆ ವೇಶ್ಯೆಯ ಪಟ್ಟ ಕಟ್ಟಿದ್ದನ್ನೂ ನೋಡಿದ ಮೇಲೂ ಮರು ವರ್ಷ ಆತ ಮತ್ತದೇ ಪೋಸ್ಟ್ ಹಾಕಿದಾಗ ,’ಈತನಿಗೆಲ್ಲೊ ಇದರಲ್ಲೊಂದು ಸಣ್ಣ ವಿಕೃತಾನಂದವಿರಬಹುದಾ’ ಎನ್ನಿಸಿದ್ದೂ ಇದೆ.

ಅದರಾಚೆಗೂ ರಶ್ಮಿಕಾ ಅವರಿವರಿಂದ ಅನುಭವಿಸಿದ ಟೀಕೆಗಳು, ಮನೋವಿಕಾರಗಳು ಕಡಿಮೆಯೇನೂ ಅಲ್ಲ. ಅದ್ಯಾವುದೋ ಟ್ರಾಲ್ ಪೇಜಿನವನು ಆಕೆಯ ಬಾಲ್ಯದ ಚಿತ್ರವನ್ನಿಟ್ಟು ,’ಮುಂದೊಂದು ದಿನ ಈಕೆ —— ಆಗುತ್ತಾಳೆಂದು ಯಾರಿಗೆ ಗೊತ್ತಿತ್ತು’ ಎಂಬ ಅತಿವಿಕಾರದ ಪೋಸ್ಟ್ ಹಾಕಿದ್ದು, ಅದಕ್ಕಾಕೆ ನೊಂದುಕೊಂಡು ಪ್ರತಿಕ್ರಿಯೆ ನೀಡಿದ್ದೆಲ್ಲವೂ ಇನ್ನೂ ಕಣ್ಣೆಗೆ ಕಟ್ಟಿದಂತಿದೆ. ಈ ಎಲ್ಲ ಹೀನಾತಿಹೀನ ವರ್ತನೆಗಳ ನಂತರವೂ, ಟೀಕೆಗಳ ನಂತರವೂ ಇಂದು ಆಕೆ ಬೆಳೆದು ನಿಂತ ಬಗೆಗೆ ಖಂಡಿತವಾಗಿಯೂ ನನ್ನಲ್ಲೊಂದು ಅಚ್ಚರಿ ಬೆರಗು ಮೆಚ್ಚುಗೆಗಳ ಮಿಶ್ರಭಾವವಿರುವುದು ಸಹ ಸುಳ್ಳಲ್ಲ ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

ಆದರೆ ಇದರೆಲ್ಲದರಾಚೆಗೂ ರಶ್ಮಿಕಾ ಮಾಡಿದ್ದೆಲ್ಲವೂ ಸರಿಯೆನ್ನುವುದು ನನ್ನ ಮಾತಿನ ತಾತ್ಪರ್ಯವಲ್ಲ. ಆಕೆಯೆಡೆಗಿನ ಎಲ್ಲ ವೈಯಕ್ತಿಕ ವಿಕಾರ ವ್ಯಂಗ್ಯಗಳನ್ನು ವಿರೋಧಿಸುತ್ತಲೇ ಈ ಬಾರಿಯ ಆಕೆಯ ವರ್ತನೆಗೆ ನನ್ನ ವಿರೋಧವಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ. ವೃತ್ತಿ ಬದುಕಿನುದ್ದಕ್ಕೂ ವ್ಯಂಗ್ಯ ವಿಕಾರಗಳನ್ನೇ ಎದುರಿಸುತ್ತ ಬಂದ ಆಕೆಗೆ  ತನ್ನನ್ನು ಮೊದಲ ಬಾರಿಗೆ ಜನರೆದುರು ಪರಿಚಯಿಸಿದ ನಿರ್ಮಾಪಕರ ಬಗೆಗಿನ ವ್ಯಂಗ್ಯ ಬೇಕಿರಲಿಲ್ಲ. ಅನಿಲ್ ಕಪೂರ್ ರಂತಹ ನಟ ಇಂದಿಗೂ ‘ತಾನು ನಟಿಸಿದ ಮೊದಲ ಸಿನಿಮಾ ಪಲ್ಲವಿ ಅನುಪಲ್ಲವಿ’ ಎಂದೇ ಹೇಳಿಕೊಳ್ಳುತ್ತಾರೆ. ಹೇಳಿಕೊಳ್ಳದಿದ್ದರೂ ದೊಡ್ಡ ವ್ಯತ್ಯಾಸವಾಗದಿದ್ದರೂ ಅದೊಂದು ಸೌಜನ್ಯದ ಮಾತು. ಹಾಗಿರುವಾಗ ತನ್ನ ಮೊಟ್ಟ ಮೊದಲ ನಿರ್ಮಾಪಕರ ಹೆಸರು ಹೇಳುವಾಗ ಸುಮ್ಮನೇ ಕೈಬೆರಳೆತ್ತಿ ” This Production House ” ಎಂದದ್ದು ಸಾಮಾನ್ಯ ಪ್ರೇಕ್ಷಕನಿಗೆ ಅಹಮಿಕೆಯ ಭಾವವಾಗಿಯೇ ಗೋಚರಿಸುತ್ತದೆ. ಈಗ ಆಕೆ ಎದುರಿಸುತ್ತಿರುವ ಟೀಕೆಗಳಿಗೆ ಆ ಅಹಮಿಕೆಯ ಭಾವವೇ ಕಾರಣವೇ ಹೊರತು ಮತ್ತೇನಲ್ಲ.

ಗಾಜಿನ ಮನೆಯಲ್ಲಿ ಕೂತು ಮತ್ತೊಬ್ಬರ ಮನೆಯತ್ತ ಕಲ್ಲೆಸೆಯಬಾರದಂತೆ. ರಶ್ಮಿಕಾ ಇಷ್ಟು ಕಾಲ ಗಾಜಿನ ಮನೆಯಲ್ಲೇನೂ ಇರಲಿಲ್ಲ. ಆದರೆ ಇಂಥದ್ದೊಂದು ಅನಗತ್ಯದ ವರ್ತನೆಯಿಂದ ಗಾಜಿನ ಮನೆಯನ್ನು ಸೃಷ್ಟಿಸಿಕೊಂಡಿದ್ದಲ್ಲದೇ ಕಲ್ಲನ್ನೂ ಸಹ ಎತ್ತೆಸೆದಳು. ಪರಿಣಾಮವಾಗಿ ಒಂದಷ್ಟು ಕಲ್ಲುಗಳು ಆಕೆಯತ್ತ ತೂರಿ ಬರುವಾಗ ‘ಅಯ್ಯಯ್ಯೊ ಬಿಟ್ಬಿಡಿ ಪಾಪದ ಹುಡುಗಿ’ ಎನ್ನುವುದರಲ್ಲಿ ಅರ್ಥವೇನೂ ಇಲ್ಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *