ಯಾದಗಿರಿ ಜಿಲ್ಲೆಯಲ್ಲಿ ಬಿಜೆಪಿಯ ಮೊದಲ ವಿಕೆಟ್ ಪತನ – ಬಿಜೆಪಿ ಬಿಟ್ಟು ಜೆಡಿಎಸ್‌ ಸೇರಿದ ಮಾಜಿ ಶಾಸಕ ಶಿರವಾಳ

Public TV
1 Min Read

ಯಾದಗಿರಿ: ಟಿಕೆಟ್ ಸಿಗದ ಕಾರಣಕ್ಕೆ ಯಾದಗಿರಿ ಜಿಲ್ಲೆಯಲ್ಲಿ ಬಿಜೆಪಿಯ ಮೊದಲ ವಿಕೆಟ್ ಪತನವಾಗಿದ್ದು, ಮಾಜಿ ಶಾಸಕ ಗುರುಪಾಟೀಲ್ ಶಿರವಾಳ (Guru Patil Sirwal) ಬಿಜೆಪಿಗೆ (BJP) ರಾಜೀನಾಮೆ ನೀಡಿ ಜೆಡಿಎಸ್ (JDS) ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಇಂದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗುರುಪಾಟೀಲ್ ಶಿರವಾಳ 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಸವದಿ ಬಿಜೆಪಿ ತೊರೆದ ವಿಚಾರ ತೀವ್ರ ದುಃಖ ತಂದಿದೆ: ಸಿಎಂ

ಗುರುಪಾಟೀಲ್ ಶಿರವಾಳ ಯಾದಗಿರಿಯ ಶಹಪುರ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಅಮೀನರೆಡ್ಡಿ ಯಾಳಗಿಗೆ ಮಣೆ ಹಾಕಿದ್ದರಿಂದ ಬೇಸರಗೊಂಡಿದ್ದ ಶಿರವಾಳ ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರು ಹಾಕಿ ಬೇಸರ ವ್ಯಕ್ತಪಡಿಸಿದರು.

2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ ಈ ಚುನಾವಣೆಯಲ್ಲಿ ಅಮೀನರೆಡ್ಡಿ ಯಾಳಗಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಟ್ಟಿದ್ದಕ್ಕೆ ಶಿರವಾಳ ಎರಡು ದಿನಗಳ ಹಿಂದೆ ಕಾರ್ಯಕರ್ತರ ಸಭೆ ಕರೆದು, ಅಭಿಪ್ರಾಯ ಸಂಗ್ರಹಿಸಿದ್ದರು. ಅದಾಗಲೇ ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡಿದ್ದ ಗುರುಪಾಟೀಲ್ ಶಿರವಾಳ ಪಕ್ಷ ತೊರೆಯೋ ತೀರ್ಮಾನ ಮಾಡಿದ್ದರು. ಹೀಗಾಗಿ ನಿನ್ನೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ್ದ ಗುರುಪಾಟೀಲ್ ಶಿರವಾಳ ಇಂದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಿದ್ದು, ಶಹಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗೋದು ಬಹುತೇಕ ಖಚಿತವಾಗಿದೆ. ಇದನ್ನೂ ಓದಿ: ಬಿಜೆಪಿ ಪರ ಪ್ರಚಾರ – ನಾಲ್ವರು ಪೊಲೀಸ್ ಎತ್ತಂಗಡಿ

Share This Article