ಶಿಮ್ಲಾ: ಪ್ಯಾರಾಗ್ಲೈಡಿಂಗ್ (Paragliding) ವೇಳೆ ನಿಯಂತ್ರಣ ತಪ್ಪಿ 25 ವರ್ಷದ ಪ್ರವಾಸಿಗ ಮೃತಪಟ್ಟಿರುವ ಘಟನೆ ಹಿಮಾಚಲ ಪ್ರದೇಶದ (Himachal Pradesh) ಇಂದ್ರುನಾಗ್‌ನಲ್ಲಿ ನಡೆದಿದೆ.
ಮೃತ ಯುವಕನನ್ನು ಗುಜರಾತ್ ಮೂಲದ ಸತೀಶ್ ರಾಜೇಶ್ ಭಾಯ್ (25) ಎಂದು ಗುರುತಿಸಲಾಗಿದೆ. ಸತೀಶ್ ಅವರು ಧರ್ಮಶಾಲಾದಲ್ಲಿರುವ ಇಂದ್ರುನಾಗ್ ಪ್ಯಾರಾಗ್ಲೈಡಿಂಗ್ ತಾಣಕ್ಕೆ ಬಂದಿದ್ದರು. ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ಪ್ಯಾರಾಚೂಟ್ ಗಾಳಿಯಲ್ಲಿ ಹಾರಲು ವಿಫಲವಾಯಿತು. ಈ ವೇಳೆ ಪ್ಯಾರಾಚೂಟ್ ಕೆಳಕ್ಕೆ ಬಿದ್ದಿದೆ. ಪ್ಯಾರಾಚೂಟ್‌ನಲ್ಲಿದ್ದ ಸತೀಶ್ ಹಾಗೂ ಪೈಲಟ್ ಸೂರಜ್ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಸ್ಟಂಟ್‌ಮೆನ್ ಸಾವು – ಚಿತ್ರನಿರ್ದೇಶಕ ಪ.ರಂಜಿತ್ ವಿರುದ್ಧ ಎಫ್‌ಐಆರ್
ಇಬ್ಬರನ್ನೂ ಧರ್ಮಶಾಲಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತೀಶ್ ಅವರ ತಲೆ, ಬಾಯಿ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ತಾಂಡಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.