ಪ್ರೇಯಸಿಯ ಪ್ರೀತಿ ಪರೀಕ್ಷೆ ಮಾಡಲು ಕಿಡ್ನಾಪ್ ಪ್ಲಾನ್ ಮಾಡಿ ಜೈಲು ಪಾಲಾದ

Public TV
2 Min Read

ಗಾಂಧಿನಗರ: ಪ್ರೇಮಿಗಳಲ್ಲಿ ಒಬ್ಬರನೊಬ್ಬರು ಎಷ್ಟು ಪ್ರೀತಿ ಮಾಡುತ್ತಾರೆ ಎಂದು ತಿಳಿಯುವ ಕಾತುರವಿರುತ್ತದೆ. ಅದಕ್ಕೆ ಚಿತ್ರವಿಚಿತ್ರ ಉಪಾಯ ಮಾಡಿ ತಮ್ಮ ಲವರ್ ತಮ್ಮನ್ನು ಎಷ್ಟು ಪ್ರೀತಿ ಮಾಡ್ತಾರೆ ಎಂದು ತಿಳಿಯುತ್ತಾರೆ. ಹೀಗೆ ಪ್ರೇಯಸಿಯ ಪ್ರೀತಿ ಪರೀಕ್ಷೆ ಮಾಡಲು ಹುಚ್ಚು ಪ್ಲಾನ್ ಮಾಡಿದ ಪ್ರೇಮಿಯೋರ್ವ ಪೊಲೀಸರ ಅತಿಥಿಯಾಗಿದ್ದಾನೆ.

ಗುಜರಾತಿನ ಕಚ್ ಜಿಲ್ಲೆಯ ಭುಜ್ ಪ್ರದೇಶದಲ್ಲಿ ಮೆಹುಲ್ ಜೋಶಿ(23) ಪ್ರೇಯಸಿ ಪ್ರೀತಿ ಪರೀಕ್ಷಿಸಲು ತನ್ನದೇ ಕಿಡ್ನಾಪ್ ನಾಟಕವಾಡಿ ಸಿಕ್ಕಿಬಿದ್ದಿದ್ದಾನೆ. ಜೋಶಿ ತನ್ನ ಪ್ರೇಯಸಿ ಇಶಾ ಪಚ್ಚೆಲ್(18) ತನ್ನನ್ನು ಎಷ್ಟು ಪ್ರೀತಿಸುತ್ತಾಳೆ ಎಂದು ತಿಳಿಯಲು ಕಿಡ್ನಾಪ್ ಪ್ಲಾನ್ ಮಾಡಿದ್ದನು. ಮಂಗಳವಾರ ಕೆಲಸಕ್ಕೆ ಹೋಗಿದ್ದ ಜೋಶಿ ಅಲ್ಲಿಂದ ತಾನು ನಾಪತ್ತೆಯಾಗಿದ್ದೇನೆ ಎನ್ನುವಂತೆ ಬಿಂಬಿಸಲು ಮನೆಗೆ ವಾಪಸ್ ಹೋಗಿರಲಿಲ್ಲ. ಹಾಗೆಯೇ ತನ್ನ ಮೊಬೈಲ್ ಸಿಮ್ ಬದಲಾಯಿಸಿ, ಕಿಡ್ನಾಪ್ ನಾಟಕವಾಡಲು ಆರಂಭಿಸಿದ್ದ. ಬೇರೆ ಸಿಮ್ ಉಪಯೋಗಿಸಿ, ಧ್ವನಿ ಬದಲಾವಣೆ ಆ್ಯಪ್ ಬಳಸಿ ಪ್ರೇಯಸಿಗೆ ಕರೆ ಮಾಡಿ ಬೆದರಿಸಿದ್ದ. ಇದನ್ನೂ ಓದಿ:ಪ್ರೇಯಸಿಯಂತೆ ನಟಿಸಿ ದರೋಡೆಕೋರರನ್ನು ಸೆರೆಹಿಡಿದ ಮಹಿಳಾ ಪೇದೆ

ನಿನ್ನ ಪ್ರಿಯಕರನನ್ನು ಕಿಡ್ನಾಪ್ ಮಾಡಿದ್ದೇವೆ, ಆತನನ್ನು ಜೀವಂತವಾಗಿ ಬಿಡಬೇಕೆಂದರೆ 3 ಲಕ್ಷ ರೂಪಾಯಿ ತೆಗೆದುಕೊಂಡು ಗಾಂಧಿಧಾಮದ ಬಳಿ ಬಾ ಎಂದು ಕರೆ ಮಾಡಿದ್ದ. ಇದನ್ನು ನಂಬಿದ ಪ್ರೇಯಸಿ, ದಿಕ್ಕು ತೋಚದೆ ಪೊಲೀಸರಿಗೆ ಮಾಹಿತಿ ತಿಳಿಸಿದಳು. ಆಕೆಗೆ ಬಂದ ಕರೆಯನ್ನು ಪೊಲೀಸರು ಟ್ರ್ಯಾಕ್ ಮಾಡಿದಾಗ ಸ್ಥಳ ಪತ್ತೆಯಾಗಿ, ಅದರ ಆಧಾರದ ಮೇಲೆ ಪೊಲೀಸರು ಸ್ಥಳವನ್ನು ಹುಡುಕಿ ಹೊರಟಾಗ ನಿಜಾಂಶ ಹೊರಬಿದ್ದಿದೆ. ಜೋಶಿಯೇ ತನ್ನ ಕಿಡ್ನಾಪ್ ಪ್ಲಾನ್ ಮಾಡಿ ನಾಟಕವಾಡುತ್ತಿದ್ದನು ಎನ್ನುವುದು ಬಯಲಾಗಿದೆ.

ಬುಧವಾರ ಗಾಂಧಿಧಾಮದ ಹತ್ತಿರದ ವಸತಿ ನಿಲಯದಲ್ಲಿ ಜೋಶಿ ವಾಸವಾಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತನ್ನ ನಾಟಕದ ಹಿಂದಿನ ಉದ್ದೇಶವನ್ನು ಬಾಯ್ಬಿಟ್ಟಿದ್ದಾನೆ. ಪ್ರೇಯಸಿಯ ಪ್ರೀತಿ ಪರೀಕ್ಷೆ ಮಾಡಲು ಹೀಗೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಸುಳ್ಳು ಮಾಹಿತಿ ನೀಡಿ ಸರ್ಕಾರಿ ಅಧಿಕಾರಿಗಳ ದಾರಿ ತಪ್ಪಿಸಿದ್ದಕ್ಕಾಗಿ ಜೋಶಿ ವಿರುದ್ಧ ಐಪಿಸಿ ಸೆಕ್ಷನ್ 182ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *