80 ಸಾವಿರ ರೂ. ಮೌಲ್ಯದ ನಾಣ್ಯಗಳೊಂದಿಗೆ ನ್ಯಾಯಾಲಯಕ್ಕೆ ಬಂದ

Public TV
2 Min Read

ಗಾಂಧಿನಗರ: ವ್ಯಕ್ತಿಯೊಬ್ಬ ಬರೋಬ್ಬರಿ 80 ಸಾವಿರ ರೂ. ಮೌಲ್ಯದ ನಾಣ್ಯಗಳನ್ನು ನ್ಯಾಯಾಲಯಕ್ಕೆ ತಂದ ಅಪರೂಪದ ಘಟನೆಯೊಂದು ಗುಜರಾತ ರಾಜ್ಯದ ನಾಡಿಯಾದ್ ನಲ್ಲಿ ನಡೆದಿದೆ.

ಜಯೇಶ್ ನಾಣ್ಯಗಳನ್ನು ನ್ಯಾಯಾಲಯಕ್ಕೆ ತಂದ ವ್ಯಕ್ತಿ. ಜಯೇಶ್ ಮತ್ತು ಪತ್ನಿ ನಡುವೆ ಹಲವು ದಿನಗಳಿಂದ ವಿಚ್ಚೇಧನ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ನಾಡಿಯಾದ್ ಕೌಟುಂಬಿಕ ನ್ಯಾಯಾಲಯ ಜಯೇಶ್, ಪತ್ನಿಗೆ ಜೀವನಾಂಶವಾಗಿ 1 ಲಕ್ಷದ 6 ಸಾವಿರ ರೂ. ನೀಡಬೇಕೆಂದು ಆದೇಶಿಸಿತ್ತು. ಒಟ್ಟು ಎರಡು ಕಂತುಗಳಲ್ಲಿ ಪತ್ನಿಗೆ ಜೀವನಾಂಶ ನೀಡಬೇಕೆಂದು ನ್ಯಾಯಾಲಯ ಅದೇಶವನ್ನು ಹೊರಡಿಸಿತ್ತು. ಮೊದಲ ಕಂತಾಗಿ 26 ಸಾವಿರ ರೂ. ನೀಡಿ ಜಯೇಶ್ ಹಿಂದಿರುಗಿದ್ದರು.

ಗುರುವಾರ ಒಂದು ಮೂಟೆ ಸಹಿತ ಬಂದ ಜಯೇಶ್ 80 ಸಾವಿರ ರೂ.ಯನ್ನು ನಾಣ್ಯಗಳ ರೂಪದಲ್ಲಿ ನೀಡಿದ್ದಾರೆ. ಕೂಡಲೇ ವಕೀಲರು ಹೀಗೆ ಚಿಲ್ಲರೆಯಲ್ಲಿ ತಂದ್ರೆ ಹೇಗೆ ಅಂತ ಪ್ರಶ್ನಿಸಿದ್ದಕ್ಕೆ, ನಾನೊಬ್ಬ ಸಣ್ಣ ತರಕಾರಿ ವ್ಯಾಪಾರಸ್ಥನಾಗಿದ್ದು ಎಲ್ಲರೂ ನನಗೆ ಚಿಲ್ಲರೆ ಹಣವನ್ನು ನೀಡುತ್ತಾರೆ ಅಂತಾ ಹೇಳಿದ್ದಾರೆ.

 

ಪ್ರಕರಣ ನ್ಯಾಯಾಲಯಕ್ಕೆ ಸಂಬಂಧಿಸಿದಾಗಿದ್ದರಿಂದ ತಂದ ಚಿಲ್ಲರೆ ಹಣವನ್ನು ಎಣಿಸುವುದು ವಕೀಲರಿಗೆ ಅನಿವಾರ್ಯವಾಗಿತ್ತು. ನಾಣ್ಯಗಳನ್ನು ಎಣಿಕೆ ಮಾಡಲು ವಕೀಲರು ಬರೋಬ್ಬರಿ 3 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಜಯೇಶ್ ಚಲಾಲಿ ಎಂಬ ಗ್ರಾಮದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದು, ಪ್ರತಿನಿತ್ಯ ತನ್ನ ಉಳಿತಾಯವನ್ನು ನಾಣ್ಯಗಳ ರೂಪದಲ್ಲಿಯೇ ಸಂಗ್ರಹ ಮಾಡುತ್ತಿದ್ದರು. ನ್ಯಾಯಾಲಯ ದಿಢೀರ್ ಅಂತಾ ಹಣ ಕೇಳಿದ್ದರಿಂದ ಯಾರು ಸಹ ನಾಣ್ಯಗಳ ಬದಲಾಗಿ ನೋಟುಗಳನ್ನು ನೀಡಲು ಹಿಂದೇಟು ಹಾಕಿದ್ದರು ಎಂದು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ.

ಜಕಾರ್ತದಲ್ಲಿ ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ 7 ಲಕ್ಷ ರೂ. ಜೀವನಾಂಶದ ಹಣವನ್ನು ನಾಣ್ಯಗಳ ರೂಪದಲ್ಲಿ ನೀಡಿ ಸುದ್ದಿಯಾಗಿದ್ದರು. ಬರೋಬ್ಬರಿ 860 ಕೆ.ಜಿ. ತೂಕವುಳ್ಳ 12 ಮೂಟೆಗಳನ್ನು ನೀಡಲಾಗಿತ್ತು. `ನನ್ನ ಕಕ್ಷಿದಾರರನ್ನು ಅವಮಾನಿಸಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ’ ಎಂದು ವಿಚ್ಛೇದಿತ ಮಹಿಳೆಯ ಪರ ವಕೀಲ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡ್ವಿ ಸ್ಸುಲಾರ್ಟೊ ಪರ ವಕೀಲ, ನನ್ನ ಕಕ್ಷಿದಾರ ಕೆಳ ದರ್ಜೆಯ ನಾಗರಿಕ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತನ್ನ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಸಂಗ್ರಹಿಸಿದ್ದು, ಅವರೆಲ್ಲರೂ ಚಿಲ್ಲರೆ ಹಣ ನೀಡಿದ್ದರಿಂದ ಅದನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ ಎಂದಿದ್ದರು.

ನಾನು ಬಡತನದಲ್ಲಿ ಇದ್ದೇನೆ ಎನ್ನುವಂತೆ ಅವಮಾನ ಮಾಡಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ ಎಂದು ವಿಚ್ಛೇದಿತ ಮಹಿಳೆ ಆರೋಪಿಸಿದ್ದಾರೆ. ಕೊನೆಗೆ ಚಿಲ್ಲರೆ ಹಣವನ್ನು ಏಣಿಕೆ ಮಾಡುವಂತೆ ನ್ಯಾಯಾಲಯವು ತನ್ನ ಸಿಬ್ಬಂದಿಗೆ ಸೂಚನೆ ನೀಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *