ಸಂಪ್ ಸ್ವಚ್ಛಗೊಳಿಸಲು ಹೋದ ಏಳು ಜನ ಬಲಿ

Public TV
2 Min Read

ಗಾಂಧಿನಗರ: ಹೋಟೆಲ್ ಸಂಪ್ ಸ್ವಚ್ಛಗೊಳಿಸುವ ವೇಳೆ ವಿಷ ಅನಿಲ ಸೇವಿಸಿ ನಾಲ್ಕು ಜನ ಪೌರ ಕಾರ್ಮಿಕರು ಸೇರಿದಂತೆ ಒಟ್ಟು ಏಳು ಜನ ಸಾವನ್ನಪ್ಪಿರುವ ಘಟನೆ ವಡೋದರದಲ್ಲಿ ಶನಿವಾರ ನಡೆದಿದೆ.

ಗುಜರಾತ್‍ನ ವಡೋದರಾ ಹತ್ತಿರದ ದಾಭೋಯಿ ತೆಹಸಿಲ್‍ನ ಫರ್ಟಿಕುಯಿ ಗ್ರಾಮದ ದರ್ಶನ್ ಹೋಟೆಲ್‍ನಲ್ಲಿ ಘಟನೆ ನಡೆದಿದ್ದು, ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಪೌರ ಕಾರ್ಮಿಕನೊಬ್ಬ ಹೋಟೆಲ್‍ನ ಸಂಪ್‍ಗೆ ಇಳಿದಿದ್ದು, ಈ ವೇಳೆ ಅವಘಡ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೃತ ನಾಲ್ಕು ಜನ ಪೌರ ಕಾರ್ಮಿಕರನ್ನು ಮಹೇಶ್ ಪಟಾನ್‍ವಾಡಿಯಾ, ಅಶೋಕ್ ಹರಿಜನ್, ಬ್ರಿಜೇಶ್ ಹರಿಜನ್, ಮಹೇಶ್ ಹರಿಜನ್ ಎಂದು ಗುರುತಿಸಲಾಗಿದೆ. ಕಾರ್ಮಿಕರನ್ನು ದಾಭೋಯಿನ ಥುವವಿಯಿಂದ ಕೆಲಸಕ್ಕಾಗಿ ಕರೆಸಿದ್ದರು ಎನ್ನಲಾಗಿದೆ. ಉಳಿದ ಮೂವರಾದ ಅಜಯ್ ವಾಸವ(24), ವಿಜಯ್ ಚೌಹಾಣ್(22) ಹಾಗೂ ಸಹದೇವ್ ವಾಸವ(22) ಅವರು ಹೋಟೆಲ್‍ನ ಕೆಲಸಗಾರರಾಗಿದ್ದಾರೆ.

ಈ ಕುರಿತು ದಭೋಯ್ ವಿಭಾಗದ ಡಿಎಸ್‍ಪಿ ಕಲ್ಪೇಶ್ ಸೊಳಂಕಿ ಅವರು ಪ್ರತಿಕ್ರಿಯಿಸಿ, ಘಟನೆ ವಿವರ ಪಡೆಯಲಾಗಿದ್ದು, ಹೇಗೆ ನಡೆಯಿತು. ಘಟನೆಗೆ ನಿರ್ಧಿಷ್ಟ ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮಹೇಶ್ ಪಟಾನ್‍ವಾಡಿಯಾ ಎಂಬ ಪೌರ ಕಾರ್ಮಿಕ ಮೊದಲು ಸಂಪ್‍ಗೆ ಇಳಿದು ಕೆಲಸ ಪ್ರಾರಂಭಿಸಿದ್ದಾನೆ, ಮಹೇಶ್ ಪ್ರತಿಕ್ರಿಯಿಸದ್ದನ್ನು ಕಂಡು ಕೆಲ ಹೊತ್ತಿನ ನಂತರ ಅಶೋಕ್ ಹರಿಜನ್, ಬ್ರಿಜೇಶ್ ಹರಿಜನ್ ಹಾಗೂ ಮಹೇಶ್ ಹರಿಜನ್ ಅವರು ಟ್ಯಾಂಕ್‍ಗೆ ಇಳಿದು ಹಿಂಬಾಲಿಸಿದ್ದಾರೆ. ನಾಲ್ಕೂ ಜನ ಪೌರ ಕಾರ್ಮಿಕರು ಹೊರಗೆ ಬಾರದಕ್ಕೆ ಮೂವರು ಹೋಟೆಲ್ ಕಾರ್ಮಿಕರು ಟ್ಯಾಂಕ್‍ಗೆ ಧುಮುಕಿದ್ದಾರೆ. ಟ್ಯಾಂಕ್‍ಗೆ ಇಳಿಯುತ್ತಿದ್ದಂತೆ ಪ್ರಜ್ಞಾಹೀನರಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ದಾಭೋಯ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯ ಹಾಗೂ ಕೊಲೆಗೆ ಕಾರಣೀಕರ್ತರಾಗಿದ್ದಾರೆ ಎಂದು ಆರೋಪಿಸಿ ಹೋಟೆಲ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಒಳಚರಂಡಿ ಸ್ವಚ್ಛಗೊಳಿಸುವ ವೇಳೆ ಪ್ರತಿ ವರ್ಷ ಹಲವಾರು ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನುಪ್ಪುತ್ತಿದ್ದು, ಒಳಚರಂಡಿಗಳನ್ನು ಪೌರ ಕಾರ್ಮಿಕರಿಂದ ಸ್ವಚ್ಛಗೊಳಿಸದೆ, ಯಂತ್ರಗಳಿಂದ ಸ್ವಚ್ಛಗೊಳಿಸುವಂತೆ ಕಾನೂನು ರೂಪಿಸಲಾಗಿದ್ದರೂ, ಗಂಭೀರವಾಗಿ ಪರಿಗಣಿಸದೆ, ಕೆಲವರು ಪೌರ ಕಾರ್ಮಿಕರಿಂದ ಸ್ವಚ್ಛಗೊಳಿಸುತ್ತಾರೆ. ಇದರಿಂದ ಅನಾಹುತಗಳಿಗೆ ಕೊನೆಯೇ ಇಲ್ಲದಂತಾಗಿದೆ.

ಸರ್ಕಾರದ ಮಾಹಿತಿಯನ್ವಯ ಸುಮಾರು 14 ಸಾವಿರದಿಂದ 31 ಸಾವಿರ ಜನ ಮಾತ್ರ ಕೈಯಿಂದ ಸ್ವಚ್ಛಗೊಳಿಸುವ ಕಾರ್ಮಿಕರಿದ್ದಾರೆ ಎಂದು ತಿಳಿಸಿದೆ. ಆದರೆ, ಸಫಾಯಿ ಕರ್ಮಚಾರಿ ಆಂದೋಲನದ ಪ್ರಕಾರ ಸುಮಾರು 7.7 ಲಕ್ಷ ಪೌರ ಕಾರ್ಮಿಕರಿದ್ದು, ಕಳೆದ ದಶಕದಲ್ಲಿ ಒಟ್ಟು 1,800 ಕಾರ್ಮಿಕರು ಮ್ಯಾನ್ ಹೋಲ್ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ. ಬಹುತೇಕ ಪೌರ ಕಾರ್ಮಿಕರು ತಲೆ ಮಾರಿನ ಹಿಂದೆಯೇ ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ಕೆಲಸವನ್ನು ಬಿಟ್ಟಿದ್ದಾರೆ. ಕೆಲವರು ಬೇರೆ ಕೆಲಸ ಸಿಗದಿದ್ದರಿಂದ ಹಾಗೂ ಜಾತಿಯ ಆಧಾರದಲ್ಲಿ ಈ ಕೆಲಸ ಮಾಡುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪೌರ ಕಾರ್ಮಿಕರ ಜೀವನವನ್ನು ಸುಧಾರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಬಾರಿ ಮಾತನಾಡಿದ್ದು, ಇದರ ಸಂಕೇತವಾಗಿ ಇತ್ತೀಚೆಗೆ ಅಲಹಬಾದ್‍ನಲ್ಲಿ ನಡೆದ ಕುಂಭ ಮೇಳದಲ್ಲಿ ಪೌರ ಕಾರ್ಮಿಕರ ಪಾದ ತೊಳೆದು ಪೂಜೆ ಮಾಡುವ ಮೂಲಕ ಅವರಿಗೆ ಗೌರವ ಸೂಚಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *