ಫೇಸ್ ಬುಕ್ ಮೂಲಕ ತ್ರಿವಳಿ ತಲಾಖ್ ನೀಡಿದ ಪತಿ

Public TV
2 Min Read

ಗಾಂಧಿನಗರ: ಫೇಸ್‍ಬುಕ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ಗುಜರಾತ್ ರಾಜ್‍ಕೋಟ್ ನ ಧೋರಾಜಿ ಪ್ರದೇಶದಲ್ಲಿ ನಡೆದಿದೆ.

ಕಾನೂನತ್ಮಾಕವಾಗಿ ತ್ರಿವಳಿ ತಲಾಕ್ ನೀಡುವುದನ್ನು ನಿಷೇಧಿಸಿದ್ದರೂ ರಫೀಕ್ ಹನ್ ಎಂಬ ವ್ಯಕ್ತಿ ತನ್ನ ಪತ್ನಿ ಸರಬಾನೊ ಅವರಿಗೆ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಮೂಲಕ ತಲಾಕ್ ನೀಡಿದ್ದಾನೆ.

ಪತಿಯಿಂದ ತಲಾಖ್ ಸಂದೇಶ ಪಡೆದ ಪತ್ನಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ಈವರೆಗೂ ಅಧಿಕಾರಿಗಳು ವ್ಯಕ್ತಿಯ ವಿರುದ್ಧ ಲಿಖಿತ ದೂರು ದಾಖಲಿಸಿಕೊಂಡಿಲ್ಲ ಎಂದು ಸ್ಥಳಿಯ ಮಾಧ್ಯಮವೊಂದು ವರದಿ ಮಾಡಿದೆ.

ಅಂದಹಾಗೇ ಈ ದಂಪತಿಗೆ 2015 ರಲ್ಲಿ ಮದುವೆಯಾಗಿದ್ದರು. ಬಳಿಕ ಇಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಿ ಒಂದು ವರ್ಷದ ನಂತರ ಪತ್ನಿ ಸರಬಾನೊ ತವರು ಸೇರಿದ್ದರು. ಇಬ್ಬರ ದಾಂಪತ್ಯ ಜೀವನ ಸುಧಾರಿಸಲು ಆಕೆಯ ಪೋಷಕರು ರಫೀಕ್‍ನ ಜೊತೆ ಮಾತುಕತೆ ನಡೆಸಿದ್ದರು ಸಮಸ್ಯೆ ಬಗೆಹರಿಸಲು ವಿಫಲಾಗಿದ್ದರು. ಬಳಿಕ ಸರಬಾನೊ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯಿಂದ ಜೀವನಾಂಶ ನೀಡಲು ಅರ್ಜಿ ಸಲ್ಲಿದ್ದರು.

ಕೋರ್ಟ್ ಸರಬಾನೊಗೆ ಅರ್ಜಿ ವಿಚಾರಣೆ ನಡೆಸಿ ಮಾಸಿಕ ಮೂರು ಸಾವಿರ ರೂ. ನೀಡುವಂತೆ ರಫೀಕ್‍ಗೆ ಆದೇಶಿಸಿತ್ತು. ಆದರೆ ಕೆಲ ಕಾಲ ಜೀವನಾಂಶ ನೀಡಿದ ರಫೀಕ್ ಕಳೆದ ಐದು ತಿಂಗಳಿಂದ ಯಾವುದೇ ಹಣ ನೀಡಿರಲಿಲ್ಲ. ಹೀಗಾಗಿ ಕೋರ್ಟ್‍ಗೆ ಹಾಜರಾಗುವಂತೆ ರಫೀಕ್‍ಗೆ ವಾರಂಟ್ ನೀಡಲಾಗಿತ್ತು. ಅದರಂತೆ ಹಾಜರಾದ ಆತ ಸರಿಯಾದ ರೀತಿಯಲ್ಲಿ ಜೀವನಾಂಶ ಪಾವತಿಸುವುದಾಗಿ ನ್ಯಾಯಾಲಯದಲ್ಲಿ ಭರವಸೆ ನೀಡಿದ್ದ.

ಆದರೆ ಫೆಬ್ರವರಿ 25 ರಂದೆ ರಫೀಕ್ ತನ್ನ ಪತ್ನಿಯ ಫೋಟೋವನು ಫೇಸ್‍ಬುಕ್ ನಲ್ಲಿ ಫೋಸ್ಟ್ ಮಾಡಿ ನಾನು ಇಂದು ನನ್ನ ಪತ್ನಿಗೆ ವಿಚ್ಛೇದನ ನೀಡಿದ್ದೇನೆ, ತಲಾಖ್, ತಲಾಖ್, ತಲಾಖ್ ಎಂದು ಬರೆದುಕೊಂಡಿದ್ದ. ಇದನ್ನು ಗಮನಿಸಿದ ಪತ್ನಿ ಪೊಲೀಸ್ ಠಾಣೆಗೆ ತೆರಳಿ ದೂರನ್ನು ಸಲ್ಲಿಸಿದ್ದರು. ಆದರೆ ಸರಬಾನೊ ಅವರ ದೂರು ಪಡೆದ ಪೊಲೀಸರು ರಫೀಕ್ ವಿರುದ್ಧ ಎಫ್‍ಐಆರ್ ದಾಖಲಿಸದೆ ನಿರ್ಲಕ್ಷ ವಹಿಸಿದ್ದರು. ಇದರ ವಿರುದ್ಧ ಮತ್ತೆ ಸರಬಾನೊ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರಬಾನೊ ಪರ ವಕೀಲ ಕಾರ್ತಿಕೇಯ ಪರೇಖ್, ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಗಮನ ಸೆಳೆಯಲು ತೀರ್ಮಾನಿಸಿದ್ದು, ಸಾಮಾಜಿಕ ಜಾಲತಾಣದ ಮೂಲಕ ರಫೀಕ್ ನೀಡಿರುವ ತಲಾಖ್ ಕಾನೂನು ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *