ಚೆನ್ನೈ/ಗುವಾಹಟಿ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಆಡಳಿತರೂಢ ಡಿಎಂಕೆ ಭಾನುವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅಧಿಕಾರ ಉಳಿಸಿಕೊಳ್ಳಲು ಮಹಿಳೆಯರಿಗೆ ತಿಂಗಳಿಗೆ 2,000 ರೂ. ಸೇರಿದಂತೆ ಭರಪೂರ ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.
ಭಾನುವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಮಹಿಳೆಯರಿಗೆ 2,000 ರೂ. ಮಾಸಿಕ ಸಹಾಯಧನ, ಅರ್ಹ 20 ಲಕ್ಷ ರೈತ ಕುಟುಂಬಗಳ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, 35 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಸೇರಿದಂತೆ ಪ್ರಮುಖ ಕಲ್ಯಾಣ ಕ್ರಮಗಳನ್ನು ಘೋಷಿಸಿದರು. ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದೂ ಮಳೆ ಸಾಧ್ಯತೆ
ಡಿಎಂಕೆ ಪ್ರಣಾಳಿಕೆಯಲ್ಲೇನಿದೆ?
– ಹಳೆಯ ಟಿವಿ, ಫ್ರಿಜ್, ವಾಷಿಂಗ್ ಮಿಷನ್, ಮಿಕ್ಸಿ, ಗ್ರೈಂಡರ್‌ನಂತಹ ಉಪಕರಣಗಳನ್ನು ಬದಲಿಸಲು ಅಥವಾ ಹೊಸದನ್ನು ಖರೀದಿಸಲು ಸ್ತ್ರೀಯರಿಗೆ 8,000 ರೂ. ಕೂಪನ್.
– ರಾಜ್ಯದ 1.37 ಕೋಟಿ ಮಹಿಳೆಯರಿಗೆ ನೀಡುತ್ತಿದ್ದ ಮಾಸಿಕ 1,000 ರೂ. ಆರ್ಥಿಕ ನೆರವು 2,000 ರೂ.ಗೆ ಹೆಚ್ಚಳ.
– ವೃದ್ಧರ ಮಾಸಿಕ ಪಿಂಚಣಿ ಸಹ 2,000 ರೂ.ಗೆ ಹೆಚ್ಚಳ.
– ರಾಜ್ಯದ 20 ಲಕ್ಷ ರೈತರಿಗೆ ಹೊಸದಾಗಿ ಮೀಟರ್ ರಹಿತ ಪಂಪ್‌ಸೆಟ್ ವಿತರಣೆ.
– ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ.
– ಆರೋಗ್ಯ ವಿಮಾ ಪ್ರಯೋಜನ 1 ಲಕ್ಷ ರೂ.ಗೆ ಹೆಚ್ಚಳ, ಈಗಿರುವ ಡಯಾಲಿಸಿಸ್ ಕೇಂದ್ರಗಳು ದುಪ್ಪಟ್ಟು.
– 35 ಲಕ್ಷ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಉಚಿತ ಲ್ಯಾಪ್‌ಟಾಪ್, ಭತ್ತದ ಬೆಂಬಲ ಬೆಲೆ ಹೆಚ್ಚಳ.
ಇನ್ನು ಕರ್ನಾಟಕದ ನಂತರ ಕಾಂಗ್ರೆಸ್ ಇದೀಗ ಅಸ್ಸಾಂ ಚುನಾವಣೆಗೂ ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಮಹಿಳೆಯರಿಗೆ ಮಾಸಿಕ ನಗದು ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿದೆ.
ಅಸ್ಸಾಂ ಲಖಿಂಪುರ ಜಿಲ್ಲೆಯ ನೌಬೋಯಿಚಾದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ತಮ್ಮ ಪಕ್ಷದ ‘ಪಂಚ ಗ್ಯಾರಂಟಿಗಳನ್ನು’ ಘೋಷಿಸಿದರು. ಇದರಲ್ಲಿ ಮಹಿಳೆಯರ ಕಲ್ಯಾಣ, ಎಲ್ಲರಿಗೂ ಆರೋಗ್ಯ ರಕ್ಷಣೆ, ಭೂ ಹಕ್ಕು ಮತ್ತು ನ್ಯಾಯದ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.
ಅಸ್ಸಾಂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿದೆ?
– ಕರ್ನಾಟಕದ ಗೃಹಲಕ್ಷ್ಮಿ ಯೋಜನೆ ಮಾದರಿಯಲ್ಲಿ ಅಸ್ಸಾಂ ಮಹಿಳೆಯರಿಗೂ ಮಾಸಿಕ ಹಣ ವರ್ಗಾವಣೆ. ಮೊತ್ತ ಘೋಷಣೆ ಇಲ್ಲ.
– ಉದ್ಯಮ ವಿಸ್ತರಣೆ ಮಾಡುವ ಅಥಬಾ ಹೊಸದಾಗಿ ಉದ್ಯಮ ಆರಂಭಿಸುವ ಅಸ್ಸಾಂ ಮಹಿಳೆಯರಿಗೆ 50,000 ರೂ. ಉಚಿತ ನೆರವು.
– ಅಸ್ಸಾಂನಲ್ಲಿ ಎಲ್ಲಾ ಕುಟುಂಬಗಳಿಗೂ 25 ಲಕ್ಷ ರೂ. ಮೌಲ್ಯದ ನಗದು ರಹಿತ ಆರೋಗ್ಯಾ ವಿಮಾ ಯೋಜನೆ ಅನುಷ್ಠಾನ.
– 10 ಲಕ್ಷ ಮೂಲನಿವಾಸಿಗಳಿಗೆ ಕಾಯಂ ಪಟ್ಟಾ. ರಾಜ್ಯದಲ್ಲಿನ ಹಿರಿಯ ನಾಗರಿಕರಿಗೆ ಮಾಸಿಕ 1,250 ರೂ. ಪಿಂಚಣಿ ವರ್ಗಾವಣೆ.
– ಅಧಿಕಾರಕ್ಕೇರಿದ 100 ದಿನಗಳಲ್ಲಿ ಅಸ್ಸಾಂ ಗಾಯಕ ಜುಬೀನ್ ಗಾರ್ಗ್ ಸಾವಿನ ಕೇಸಿನಲ್ಲಿ ನ್ಯಾಯ ಕೊಡಿಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಏ.1 ರಿಂದ ಐತಿಹಾಸಿಕ ಬೆಂಗಳೂರು ಕರಗ – ಕಣ್ಮನ ಸೆಳೆಯುತ್ತಿದೆ ದೀಪಾಲಂಕಾರ

